ADVERTISEMENT

ಯಾವುದೇ ಸಮಸ್ಯೆ ಬಂದರೂ ಬದ್ಧತೆ ಮುಖ್ಯ: ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ

‘ಅನುಭಾವದೆಡೆಗೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 7:12 IST
Last Updated 3 ಜನವರಿ 2026, 7:12 IST
ಹೊಸದುರ್ಗದ ಸಾಣೇಹಳ್ಳಿಯ ಮನೆಯೊಂದರಲ್ಲಿ ಗುರುವಾರ ಆಯೋಜಿಸಿದ್ದ ಅನುಭಾವದೆಡೆಗೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು 
ಹೊಸದುರ್ಗದ ಸಾಣೇಹಳ್ಳಿಯ ಮನೆಯೊಂದರಲ್ಲಿ ಗುರುವಾರ ಆಯೋಜಿಸಿದ್ದ ಅನುಭಾವದೆಡೆಗೆ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು    

ಹೊಸದುರ್ಗ: ‘ಬಸವಾದಿ ಶಿವಶರಣರ ವಿಚಾರಗಳನ್ನು ಹೇಳುವ, ಆಚರಣೆ ಮಾಡುವವರಿಗೆ ಟೀಕೆ‌ ಟಿಪ್ಪಣೆಗಳು ಸಹಜ. ನಮ್ಮ ಸ್ಥಿತಿ ತಳಹೊಡೆದ ದೋಣಿಯಂತಾಗಿದೆ. ಏನೇ ಸಮಸ್ಯೆ ಬಂದರೂ ಬದ್ಧತೆ‌‌ ಮುಖ್ಯ. ಜನರು ನಮ್ಮನ್ನು ಆಡಿಕೊಳ್ಳುವರೆಂದು ನಮ್ಮ ದಾರಿ ಹಾಗೂ ಗುರಿಯನ್ನು ಬಿಡಬಾರದು. ನಮ್ಮ ಚಿಂತನೆ ಸಕರಾತ್ಮಕವಾಗಿರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಕಲ್ಲಮ್ಮ ವಿಶ್ವನಾಥರ ಮನೆಯಂಗಳದಲ್ಲಿ ಗುರುವಾರ ನಡೆದ ‘ಅನುಭಾವದೆಡೆಗೆ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮನುಷ್ಯನ ಸ್ವಭಾವ ವಿಚಿತ್ರ. ಮನುಷ್ಯ ಹೊಗಳಿಕೆ ತೆಗಳಿಕೆಗಳಿಂದ ದೂರ ಇರಬೇಕು. ನಿಂದಕರು ನಮ್ಮ ದೋಷಗಳನ್ನು ಕಳೆಯುವರು. ಶರಣರು ಹೇಳಿದ ಕಾಯಕ, ದಾಸೋಹ‌, ಶಿವಯೋಗದ‌ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ವೈಚಾರಿಕ,‌ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ನಾವು ಪಂಚಾಚಾರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಇಷ್ಟಲಿಂಗ‌‌‌ ನಿಷ್ಠರಾಗಿ ಕಾಯಕಶೀಲರಾಗಬೇಕು. ಜಾತಿ– ಭೇದವನ್ನು‌ ಮಾಡದೆ ಶಿವನ ಮಕ್ಕಳೆಂದು‌‌ ಭಾವಿಸಿ ಗಣಾಚಾರಿಗಳಾಗಿ ಅನ್ಯಾಯದ ವಿರುದ್ಧ ಹೋರಾಡಬೇಕು. ಸಮೂಹದ‌ ಮೂಲಕ ಸಂಘಟನೆ ಮಾಡಿ ಸತ್ಸಂಗದಲ್ಲಿ ಪಾಲ್ಗೊಳ್ಳಬೇಕು. ನಿಜಾಚರಣೆಗಳ ವಿರುದ್ಧವಾಗಿ ಯಾರು ನಡೆಯುವರೋ ಅಂತಹವರ ವಿರುದ್ಧ ಹೋರಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಗಣಾಚಾರ ಪ್ರವೃತ್ತಿ ಪ್ರತಿಯೊಬ್ಬರಿಗೂ ಬರಬೇಕು.‌ ನಂತರ ಭೃತ್ಯಾಚಾರಿಯಾಗಿ ಸಜ್ಜೆಯಂತೆ‌ ಬೀಗದೆ ಬಾಳೆಯಂತೆ‌ ಬಾಗುವ ಗುಣ ಬೆಳೆಸಿಕೊಳ್ಳಬೇಕು. ನಾನು ಎನ್ನುವ ಅಹಂ ತೊರೆದು ಎಲ್ಲರೊಳಗೆ ನಾನೊಬ್ಬ ಎನ್ನುವ ಭೃತ್ಯಾಚಾರದ ಗುಣ ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಸಂಸ್ಕಾರ ಬಹಳ ಮುಖ್ಯ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಾಧು ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ಸಿದ್ದಪ್ಪ‌, ಬಿ ದುರ್ಗದ ನಿವೃತ್ತ ಮುಖ್ಯೋಪಾಧ್ಯಾಯ ಏಕಾಂತಯ್ಯ, ಮುಖಂಡರಾದ ಶಿವಲಿಂಗಪ್ಪ, ಬಸವರಾಜಪ್ಪ, ವೀರಭದ್ರಪ್ಪ ಸೇರಿ ಶ್ರೀಮಠದ ಭಕ್ತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.