
ಚಿತ್ರದುರ್ಗ: ‘ರೈತರು ಹೊಲದಲ್ಲಿ ಕಳೆಯನ್ನು ಕಿತ್ತು ಬೆಳೆ ಬೆಳೆಯುತ್ತಾರೆ. ಅದೇ ರೀತಿ ನಾವು ಸಹ ನಮ್ಮ ಮನದಲ್ಲಿನ ಅಹಂಕಾರದ ಕಳೆಯನ್ನು ಕಿತ್ತು ಸದ್ಭಾವದ ಬೆಳೆ ಬೆಳೆಯಬೇಕು’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.
ನಗರದ ಮುರುಘಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ವಚನ ಕಾರ್ತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದುಡಿದು ತಿನ್ನುವವರನ್ನು ತಾತ್ಸಾರ ಮನೋಭಾವದಿಂದ ಕಾಣುವ ಸಮಾಜ, ಕೂತು ತಿನ್ನುವವನನ್ನು ಪುಣ್ಯವಂತ ಎನ್ನುತ್ತದೆ. ಎಂತಹ ಮನಸ್ಥಿತಿಗೆ ತಲುಪಿದ್ದೇವೆ’ ಎಂದರು.
‘ತಮ್ಮ ತಪ್ಪನ್ನು ಕಾಣದೇ ಬರೀ ಅನ್ಯರ ತಪ್ಪನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತೇವೆ. ಇಲ್ಲವೇ ಬೇರೆಯವರ ತಪ್ಪಿನ ಬಗ್ಗೆ ಮನದಲ್ಲಿ ಕೊರಗುತ್ತೇವೆ. ಇದು ಮನುಷ್ಯನ ಸಹಜ ಗುಣ, ಬೇರೆಯವರ ತಪ್ಪನ್ನು ಎಣಿಸುವುದು ಸಹ ತಪ್ಪೇ. ನಮ್ಮನ್ನು ನಾವು ಪ್ರಶ್ನೆ ಮಾಡಿಕೊಳ್ಳಬೇಕು. ನುಡಿ ಅಂತರಂಗದಲ್ಲಿ ಪರಿಣಮಿಸಬೇಕು. ನಡೆದು ನುಡಿಯಬೇಕು’ ಎಂದು ತಿಳಿಸಿದರು.
‘ವೈಯಾರ, ರಂಜನೆ, ಕೃತಕದ ನಡೆ ನುಡಿ ಸಲ್ಲದು. ನುಡಿ ಶುದ್ಧವಾಗಿದ್ದರೆ ನಡೆ ಶುದ್ಧವಾಗಿರುತ್ತದೆ. ನಡೆ ಶುದ್ಧವಾಗಿದ್ದರೆ ನಮ್ಮ ನುಡಿ ಶುದ್ಧವಾಗಿರುತ್ತದೆ. ನಾವು ನಿದ್ರೆಯಲ್ಲಿದ್ದಾಗ, ಎಚ್ಚರವಿದ್ದಾಗಲೂ, ನಮ್ಮ ನಡೆವಳಿಕೆಯಲ್ಲಿಯೂ ಜಾಗೃತರಾಗಿರಬೇಕು’ ಎಂದರು.
‘ನಮ್ಮ ನಾಲಿಗೆ, ನಮ್ಮ ಕಣ್ಣು, ನಮ್ಮ ನಾಸಿಕ, ನಮ್ಮ ಶರೀರ ಕಲುಷಿತವಾಗುತ್ತಿರುತ್ತದೆ. ಯಾರಾದರೂ ಹೊಗಳಿದರೆ ಹಿಗ್ಗುತ್ತೇವೆ. ಯಾರಾದರೂ ತೆಗಳಿದರೆ ಅವರ ಮೇಲೆ ಏರಿ ಹೋಗುತ್ತೇವೆ. ನಮ್ಮ ದೃಷ್ಟಿ ಬದಲಾಗಬೇಕೆಂದು ಎಂದು ಶರಣರು ತಮ್ಮ ವಚನಗಳಲ್ಲಿ ತಿಳಿಸಿದ್ದಾರೆ’ ಎಂದು ಹೇಳಿದರು.
‘ಮನಸ್ಸಿಗೆ ಸಮಾಧಾನ, ನೆಮ್ಮದಿ, ಸಂತೋಷ ನೀಡುವ, ನಮ್ಮ ಕಣ್ಣೀರನ್ನು ಒರೆಸುವ ಶಕ್ತಿ ವಚನಗಳಿಗಿದೆ. ಮನಸ್ಸನ್ನು ಸುಧಾರಿಸುವವು ವಚನಗಳು. 12ನೇ ಶತಮಾನದಲ್ಲಿ ಶರಣರ ಹೆಸರುಗಳು ಅಣ್ಣ, ಅಕ್ಕ, ಅಯ್ಯ ಎಂದು ಗೌರವಪೂರ್ವಕವಾಗಿ ಕೊನೆಗೊಳ್ಳುತ್ತಿದ್ದವು. ತಮ್ಮನ್ನು ತಾವು ಆದಷ್ಟು ಸಣ್ಣವನನ್ನಾಗಿರಿಸಿ ಎಂದುಕೊಂಡು ಶಿವಸ್ವರೂಪಿಗಳಾಗಿ ಬಾಳಿದವರು ಬಸವಾದಿ ಪ್ರಮಥರು’ ಎಂದರು.
ಮುರುಘಾ ಮಠದ ಬಸವ ಮುರುಘೇಂದ್ರ ಸ್ವಾಮೀಜಿ, ಬೃಹನ್ಮಠ ಪದವಿ ಪೂರ್ವ ಕಾಲೇಜಿನ ಪ್ರಾಧ್ಯಾಪಕಿ ಮಾಲಾ ನಾಗರಾಜ್, ಮುಖ್ಯ ಶಿಕ್ಷ ಎಂ. ವೀರಭದ್ರಪ್ಪ, ಸಹ ಶಿಕ್ಷಕಿ ಎಂ. ವೀಣಾ, ಪ್ರೊ.ವಿ. ಅನುಷಾ, ಎಂ. ಪಲ್ಲವಿ, ಎಚ್.ಜೆ. ಲೋಕೇಶ್, ನವೀನ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.