ADVERTISEMENT

ರಾತ್ರಿ ಶಾಲೆ ಆರಂಭಿಸಿದ ಶಿಕ್ಷಣ ಇಲಾಖೆ

ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:30 IST
Last Updated 12 ಫೆಬ್ರುವರಿ 2020, 14:30 IST
ಚಿತ್ರದುರ್ಗ ಜಿಲ್ಲೆಯಲ್ಲಿ ಆರಂಭಿಸಿದ ರಾತ್ರಿ ಶಾಲೆ
ಚಿತ್ರದುರ್ಗ ಜಿಲ್ಲೆಯಲ್ಲಿ ಆರಂಭಿಸಿದ ರಾತ್ರಿ ಶಾಲೆ   

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಸುಧಾರಿಸುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ರಾತ್ರಿ ಶಾಲೆಗಳನ್ನು ಆರಂಭಿಸಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ರಾತ್ರಿ ವೇಳೆ ಶಾಲೆಯಲ್ಲೇ ವಾಸ್ತವ್ಯ ಹೂಡಿ ಅಧ್ಯಯನ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಸಿಕ್ಕ ಯಶಸ್ಸಿನ ಆಧಾರದ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ್‌ ರೆಡ್ಡಿ ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಗುಣಾತ್ಮಕ ಫಲಿತಾಂಶ ಸುಧಾರಣೆಗೆ ಇದು ನೆರವಾಗಬಲ್ಲದು ಎಂಬುದು ಅವರ ಲೆಕ್ಕಾಚಾರ. ಇದಕ್ಕೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಹಕಾರ ನೀಡುತ್ತಿದ್ದಾರೆ.

ಹೊಸದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ ಹತ್ತು ಮತ್ತು ಚಿತ್ರದುರ್ಗ, ಮೊಳಕಾಲ್ಮುರು, ಹಿರಿಯೂರು, ಹೊಳಲ್ಕೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ತಲಾ ಒಂದೊಂದು ರಾತ್ರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಅವಕಾಶ ನೀಡಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ.

ADVERTISEMENT

‘ಹಳ್ಳಿಯ ಬಹುತೇಕ ಮನೆಗಳಲ್ಲಿ ಓದುವ ವಾತಾವರಣ ಇರುವುದಿಲ್ಲ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಕಾಲಾಹರಣ ಮಾಡುತ್ತಾರೆ. ಪೋಷಕರು ಕೂಡ ಮಕ್ಕಳ ಓದಿಗೆ ವಿಶೇಷ ಒತ್ತು ನೀಡುವುದಿಲ್ಲ. ಇಂತಹ ಗ್ರಾಮಗಳನ್ನು ಗುರುತಿಸಿ ರಾತ್ರಿ ಶಾಲೆಗಳನ್ನು ತೆರೆಯಲಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಡಿಡಿಪಿಐ ರವಿಶಂಕರ್‌ ರೆಡ್ಡಿ ತಿಳಿಸಿದರು.

ರಾತ್ರಿ ಶಾಲೆಗಳು ನಿತ್ಯ ಸಂಜೆ 6ಕ್ಕೆ ಆರಂಭವಾಗುತ್ತವೆ. ರಾತ್ರಿ 8.30ಕ್ಕೆ ವಿದ್ಯಾರ್ಥಿನಿಯರು ಮನೆಗೆ ಮರಳುತ್ತಾರೆ. ಬಾಲಕರು ಮಾತ್ರ ಶಾಲೆಯಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ಶಿಕ್ಷಕರು ಕೂಡ ವಾಸ್ತವ್ಯ ಹೂಡಿ ನಿತ್ಯ ಬೆಳಿಗ್ಗೆ 5ಕ್ಕೆ ಎದ್ದು ಓದುವಂತೆ ಮಕ್ಕಳಿಗೆ ಪ್ರೇರಣೆ ನೀಡುತ್ತಾರೆ. ವಿಷಯವಾರು ಶಿಕ್ಷಕರು ಪಾಳಿವಾರು ಬೋಧನೆ ಮಾಡುತ್ತಾರೆ. ಹಗಲು ಹೊತ್ತು ಎಂದಿನಂತೆ ನಡೆಯುವ ಶಾಲೆಗೆ ಈ ಮಕ್ಕಳು ಹಾಜರಾಗುತ್ತಾರೆ.

2018–19ರ ಶೈಕ್ಷಣಿಕ ವರ್ಷದಲ್ಲಿ ಶೇ 87ರಷ್ಟು ಫಲಿತಾಂಶ ಪಡೆದಿದ್ದ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ ಆರನೇ ಸ್ಥಾನದಲ್ಲಿತ್ತು. ಕಳಪೆ ಫಲಿತಾಂಶ ನೀಡಿದ 22 ಪ್ರೌಢಶಾಲೆಗಳ ಪಟ್ಟಿ ಸಿದ್ಧಪಡಿಸಿ ವಿಶೇಷ ಗಮನ ಹರಿಸುವಂತೆ ಇಲಾಖೆ ಸೂಚಿಸಿದೆ. ಫಲಿತಾಂಶ ಗುಣಾತ್ಮಕ ಬದಲಾವಣೆಗೆ ಈ ಬಾರಿ ಒತ್ತು ನೀಡಲಾಗಿದೆ. ಎ+, ಎ, ಬಿ+ ಹಾಗೂ ಬಿ ಶ್ರೇಣಿಯಲ್ಲಿ ಉತ್ತೀರ್ಣರಾಗುವಂತೆ ಮಕ್ಕಳಿಗೆ ಪ್ರೇರಣೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.