ADVERTISEMENT

SSLC: ವಿದ್ಯಾರ್ಥಿನಿಯರಿಗೆ ₹1 ಲಕ್ಷ ಬಹುಮಾನ ಘೋಷಿಸಿದ ಶಾಸಕ ಚಂದ್ರಪ್ಪ

ಮುಂದಿನ ವರ್ಷ ₹1 ಲಕ್ಷ ಬಹುಮಾನ ಘೋಷಿಸಿದ ಶಾಸಕ ಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 6:07 IST
Last Updated 16 ಆಗಸ್ಟ್ 2025, 6:07 IST
ಹೊಳಲ್ಕೆರೆಯಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಎಂ.ಚಂದ್ರಪ್ಪ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ತಲಾ ₹50,000 ನಗದು ಬಹುಮಾನ ನೀಡಿದರು.
ಹೊಳಲ್ಕೆರೆಯಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಎಂ.ಚಂದ್ರಪ್ಪ ಹೆಚ್ಚು ಅಂಕ ಪಡೆದ ಮೂವರು ವಿದ್ಯಾರ್ಥಿಗಳಿಗೆ ತಲಾ ₹50,000 ನಗದು ಬಹುಮಾನ ನೀಡಿದರು.   

ಹೊಳಲ್ಕೆರೆ: ಪಟ್ಟಣದ ಕೊಟ್ರೆ ನಂಜಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಸಕ ಎಂ.ಚಂದ್ರಪ್ಪ ಮೂವರು ವಿದ್ಯಾರ್ಥಿನಿಯರಿಗೆ ವೈಯಕ್ತಿಕವಾಗಿ ತಲಾ ₹50 ಸಾವಿರ ನಗದು ಬಹುಮಾನ ವಿತರಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಪಡೆದ ವಿದ್ಯಾರ್ಥಿಗಳಿಗೆ  ನಗದು ಬಹುಮಾನ ನಿಡಲಾಗುವುದು ಎಂದು ಪರೀಕ್ಷೆಗೂ ಮೊದಲು ಘೋಷಿಸಿದ್ದರು. ಆದರೆ, ತಾಲ್ಲೂಕಿನಲ್ಲಿ ಯಾವ ವಿದ್ಯಾರ್ಥಿಯೂ 625 ಅಂಕ ಪಡೆದಿರಲಿಲ್ಲ. ಆದರೂ ಅತಿ ಹೆಚ್ಚು ಅಂಕ ಪಡೆದ ರಾಮಗಿರಿಯ ಎಸ್‌ಜೆಎಂ ಪ್ರೌಢಶಾಲೆಯ ವಿದ್ಯಾರ್ಥಿನಿ ಶೈಲಜಾ ಹಾಗೂ ಚಿಕ್ಕಜಾಜೂರಿನ ಅಕ್ಷರ ವಿದ್ಯಾನಿಕೇತನ ಶಾಲೆಯ ಭಾನು ಅವರಿಗೆ ತಲಾ ₹50,000 ಬಹುಮಾನ ನೀಡಿದರು. ಇದರೊಂದಿಗೆ 619 ಅಂಕ ಪಡೆದ ಮೂವರು, 617 ಅಂಕ ಪಡೆದ ಇಬ್ಬರು, 616 ಅಂಕ ಪಡೆದ ಒಬ್ಬರು ಹಾಗೂ ಕನ್ನಡ ಮಾಧ್ಯಮದಲ್ಲಿ 613 ಅಂಕ ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ₹5,000 ಬಹುಮಾನ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬಿ.ಎ.ಪದವಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಗಂಗಮ್ಮ ಎಂಬ ವಿದ್ಯಾರ್ಥಿನಿಗೂ ₹50,000 ನಗದು ಬಹುಮಾನ ನೀಡಿದರು.

ADVERTISEMENT

ವಿದ್ಯಾರ್ಥಿಗಳೇ ದೇಶದ ಆಸ್ತಿ. ಅವರು ವಿದ್ಯಾವಂತರಾಗಿ ದೇಶದ ಮಾದರಿ ನಾಗರಿಕರಾಗಬೇಕು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಸರ್ಕಾರಿ ಶಾಲೆಗೆ 5 ಬಸ್ ನೀಡಿದ್ದು, ಸದ್ಯದಲ್ಲೇ ಮತ್ತೆ 8 ಬಸ್ ನೀಡಲಾಗುವುದು. ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಮೂರು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಪ್ರತೀ ಶಾಲೆಗೆ ₹ 10 ಕೋಟಿಯಲ್ಲಿ ಕಟ್ಟಡ ಸೇರಿದಂತೆ ಮೂಲಸೌಕರ್ಯ ಒದಗಿಸಲಾಗುವುದು. ರಸ್ತೆ, ಕುಡಿಯುವ ನೀರು, ಕೆರೆ ತುಂಬಿಸುವ ಯೋಜನೆ, ವಿದ್ಯುತ್ ಸೇರಿದಂತೆ ರೈತರಿಗೆ ಅಗತ್ಯವಾದ ಸೌಲಭ್ಯ ಕಲ್ಪಿಸಲಾಗಿದೆ. ನನಗೆ ಇನ್ನೂ 3 ವರ್ಷ ಅವಕಾಶ ಇದ್ದು, ಕ್ಷೇತ್ರವನ್ನು ಮಾದರಿಯಾಗಿ ರೂಪಿಸಲಾಗುವುದು ಎಂದರು.

ಪುರಸಭೆ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನಾ ವೇದಮೂರ್ತಿ, ತಹಶೀಲ್ದಾರ್ ಕೊರಲಗುಂದಿ ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಪಿ.ವಿಶ್ವನಾಥ, ಪುರಸಭೆ ಮುಖ್ಯಾಧಿಕಾರಿ ಫಿರೋಜ್‍ಖಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ತಿಪ್ಪೇಶಪ್ಪ, ಪುರಸಭೆ ಸದಸ್ಯರಾದ ಮುರುಗೇಶ್, ಅಶೋಕ್, ಕೆ.ಸಿ.ರಮೇಶ್, ಮಲ್ಲಿಕಾರ್ಜುನ ಸ್ವಾಮಿ, ಮಮತಾ ಜಯಸಿಂಹ ಖಾಟ್ರೋತ್, ಸವಿತಾ ನರಸಿಂಹ ಖಾಟ್ರೋತ್, ಪುರಸಭೆ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಇದ್ದರು.

ಮುಂದಿನ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಪಡೆಯುವ ಹಾಗೂ ದ್ವಿತೀಯ ಪಿಯುಸಿಯಲ್ಲಿ 600 ಅಂಕ ಪಡೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ತಲಾ ₹ 1 ಲಕ್ಷ ಬಹುಮಾನ ನೀಡುವೆ

-ಎಂ. ಚಂದ್ರಪ್ಪ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.