ADVERTISEMENT

ಹಣ ವಸೂಲಿ ಮಾಡಿದರೆ ಕಠಿಣ ಕ್ರಮ

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 4:36 IST
Last Updated 7 ಜುಲೈ 2022, 4:36 IST
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಾಧಿಕಾರಿಗಳ ಸಭೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ.ಗಿರೀಶ್‌ ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ.ಬಸವರಾಜಪ್ಪ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್‌ ಪ್ರಕಾಶ್‌ ಇದ್ದಾರೆ.
ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಾಧಿಕಾರಿಗಳ ಸಭೆಯಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ.ಗಿರೀಶ್‌ ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ.ಬಸವರಾಜಪ್ಪ, ನಿವಾಸಿ ವೈದ್ಯಾಧಿಕಾರಿ ಡಾ.ಆನಂದ್‌ ಪ್ರಕಾಶ್‌ ಇದ್ದಾರೆ.   

ಚಿತ್ರದುರ್ಗ: ಆರೋಗ್ಯ ಸೇವೆ ನೆಪದಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಂದ ಹಣ ವಸೂಲಿ ಮಾಡುತ್ತಿರುವ ದೂರು ಕೇಳಿಬಂದಿದೆ. ಹೆರಿಗೆ ವಾರ್ಡ್‌ನಲ್ಲಿ ಈ ಹಾವಳಿ ಹೆಚ್ಚಾಗಿದೆ ಎಂಬ ಮಾಹಿತಿಯಿದೆ. ಹಣ ತೆಗೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ.ಗಿರೀಶ್‌ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯ ಬಿ.ಸಿ.ರಾಯ್‌ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಮ್ಮಿಕೊಂಡಿದ್ದ ವೈದ್ಯಾಧಿಕಾರಿಗಳು ಮತ್ತು ಶುಶ್ರೂಷಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ವೈದ್ಯರ ಹೆಸರು ಬಳಸಿ ಶುಶ್ರೂಷಕರು ಹೆರಿಗೆ ಮಾಡಿಸುವಾಗ ಹಣ ವಸೂಲಿಗೆ ಇಳಿದಿದ್ದಾರೆ. ಈ ಕ್ಷಣದಿಂದಲೇ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಬಡರೋಗಿಗಳು ಬರುತ್ತಾರೆ. ಅವರಿಗೆ ಸಕಾಲಕ್ಕೆ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ನಾಗರಿಕರಿಗೆ ಉಚಿತ ಸೇವೆ ಸಿಗಬೇಕು ಎಂಬುದು ಸಂವಿಧಾನದ ಆಶಯ. ಇದನ್ನು ಅರಿತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ’ ಎಂದು ತಾಕೀತು ಮಾಡಿದರು.

‘ಆಸ್ಪತ್ರೆ ಮುಂಭಾಗದ ಅಂಗಡಿಗಳನ್ನು ತೆರವುಗೊಳಿಸಿ. ಪ್ರತ್ಯೇಕವಾದ ಜಾಗದ ವ್ಯವಸ್ಥೆ ಕಲ್ಪಿಸಬೇಕು. ಕಾರು, ದ್ವಿಚಕ್ರ ವಾಹನ, ಆಟೊಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು. ಆಸ್ಪತ್ರೆಯ ಆವರಣ ಸ್ವಚ್ಛವಾಗಿರಬೇಕು’ ಎಂದು ಸೂಚಿಸಿದರು.

‘ಆಸ್ಪತ್ರೆಯ ಸ್ವಚ್ಛತೆಗೆ ಸಂಬಂಧಪಟ್ಟಂತೆ ಸಾಕಷ್ಟು ದೂರುಗಳು ಬಂದಿವೆ. ಕ್ರಮ ಕೈಗೊಳ್ಳಲಾಗುವುದು. ಆಯಾ ವಿಭಾಗದ ವೈದ್ಯರು ಸರಿಯಾದ
ಸಮಯಕ್ಕೆ ಹಾಜರಾಗಲು ಹಾಗೂ ವಿಭಾಗದಲ್ಲಿ ಅವರ ಮಾಹಿತಿಗಾಗಿ ನಾಮಫಲಕ ಅಳವಡಿಸಲಾಗುವುದು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್‌.ಜೆ. ಬಸವರಾಜಪ್ಪ ತಿಳಿಸಿದರು.

ಜಿಲ್ಲಾ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಆನಂದ್‌ ಪ್ರಕಾಶ್‌, ಡಾ.ದಿನೇಶ್‌, ಡಾ.ರಂಗೇಗೌಡ, ಡಾ.ಮೋಹನ್‌ ಕುಮಾರ್‌, ಡಾ.ಮಲ್ಲಿಕಾರ್ಜುನ್‌,
ಡಾ.ಮಲ್ಲಪ್ಪ, ನಗರಸಭೆ ಸಹಾಯಕ ಎಂಜಿನಿಯರ್ ಜಾಫರ್‌ ಇದ್ದರು.

ಭದ್ರತೆಗೆ ಸೂಚನೆ

ಜಿಲ್ಲಾ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಸಿಬ್ಬಂದಿಗೆ ಯಾವುದೇ ರಕ್ಷಣೆ ಇಲ್ಲ ಎಂದು ಮಹಿಳಾ ವೈದ್ಯರು ಸಭೆಯಲ್ಲಿ ದೂರಿದರು.

ಇದಕ್ಕೆ ಸ್ಪಂದಿಸಿದ ನ್ಯಾಯಾಧೀಶರು, ನಗರಠಾಣೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಕರೆ ಮಾಡಿ ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚಿಸಿದರು. ಆಸ್ಪತ್ರೆ ಮುಂಭಾಗದಲ್ಲಿನ ಸಂಚಾರ ಸಮಸ್ಯೆ ಪರಿಹರಿಸುವಂತೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.