ಚಿತ್ರದುರ್ಗ: ‘ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ತಪ್ಪಿಲ್ಲದಂತೆ ಬರೆಯುವುದನ್ನು ಕಲಿಸಬೇಕು. ಆಗ ಮಾತ್ರ ಫಲಿತಾಂಶ ಸುಧಾರಣೆಯಾಗಲು ಸಾಧ್ಯ’ ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ತಿಳಿಸಿದರು.
ನಗರದ ಅಹಮದ್ ಪ್ಯಾಲೇಸ್‌ನಲ್ಲಿ ಜಿಲ್ಲೆಯ ಉರ್ದು ಶಿಕ್ಷಕರಿಗೆ ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಉರ್ದು ಮಾಧ್ಯಮದಲ್ಲಿ ಫಲಿತಾಂಶ ಸುಧಾರಣೆ ಆಗಬೇಕಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ ವಿಶೇಷ ತರಗತಿ ನಡೆಸಬೇಕು. ಪಠ್ಯವನ್ನು ಸರಿಯಾಗಿ ಅರ್ಥೈಸುವಂತೆ ಬೋಧಿಸಬೇಕು. ಕೇಳಿಸಿಕೊಳ್ಳುವುದು, ಮಾತನಾಡುವುದು, ಓದುವುದು, ಬರೆಯುವುದು ಸರಿಯಿದ್ದಾಗ ಗಣಿತ, ಇಂಗ್ಲಿಷ್, ವಿಜ್ಞಾನ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
‘ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುತ್ತಿದ್ದರೂ ಕಳೆದ ಐದಾರು ವರ್ಷದಿಂದ ಉರ್ದು ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕಡಿಮೆಯಾಗುತ್ತಿದೆ. ಇದರಿಂದ ಶಿಕ್ಷಕರ ಸಂಖ್ಯೆಯೂ ಸಹಜವಾಗಿ ಕಡಿತಗೊಳ್ಳುತ್ತಿದೆ. 2010ರಲ್ಲಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಉರ್ದು ಶಿಕ್ಷಕರಿದ್ದರು. ಆದರೆ ಈ ಸಂಖ್ಯೆ ಏಕೆ ಕಡಿಮೆಯಾಗಿದೆ ಎನ್ನುವುದರ ಚಿಂತನ ಮಂಥನವಾಗಬೇಕಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ತಿಳಿಸಿದರು.
‘ಶಿಕ್ಷಕರು ಆಸಕ್ತಿಯಿಂದ ಕೆಲಸ ಮಾಡದಿದ್ದರೆ ಜಿಲ್ಲೆಯಲ್ಲಿ ಉರ್ದು ಶಾಲೆಗಳು ಬೇರೆ ಶಾಲೆಗಳ ಜೊತೆ ವಿಲೀನವಾಗುವುದರಲ್ಲಿ ಅನುಮಾನವಿಲ್ಲ. ಮಾತೃ ಭಾಷೆಯಲ್ಲಿ ಮಗುವಿನ ಶಿಕ್ಷಣಕ್ಕೆ ಆದ್ಯತೆ ಕೊಡಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ನೀಡದಿದ್ದರೆ ಸರ್ಕಾರಿ ಶಾಲೆಗಳು ಉಳಿಯುವುದಿಲ್ಲ’ ಎಂದು ತಿಳಿಸಿದರು.
‘ಪ್ರತಿ ವರ್ಷವೂ ಜಿಲ್ಲೆಯ ಉರ್ದು ಶಿಕ್ಷಕರಿಗೆ ಕಾರ್ಯಾಗಾರ ನಡೆಸಲಾಗುತ್ತಿದೆ. ಆದರೂ ಉರ್ದು ಮಾಧ್ಯಮ ಶಾಲೆಗಳಲ್ಲಿ ಫಲಿತಾಂಶ ಕುಸಿಯುತ್ತಿರುವುದು ಮನಸ್ಸಿಗೆ ಬೇಸರ ತರಿಸಿದೆ. ಇನ್ನಾದರೂ ಶಿಕ್ಷಕರು ಪರಿಶ್ರಮ ವಹಿಸಿ ಕೆಲಸ ಮಾಡಬೇಕು’ ಎಂದು ಮುಸ್ಲಿಂ ಎಜುಕೇಷನಲ್ ಅಂಡ್ ಎಂಪವರ್ಮೆಂಟ್ ಟ್ರಸ್ಟ್ ಅಧ್ಯಕ್ಷ ಸೈಯದ್ ಇಸಾಕ್ ಮನವಿ ಮಾಡಿದರು.
ನಿವೃತ್ತ ಡಿವೈಎಸ್ಪಿ ಅಬ್ದುಲ್ ರೆಹಮಾನ್, ನಿವೃತ್ತ ಸಬ್‌ಇನ್ಸ್‌ಪೆಕ್ಟರ್ ನಾಗರಾಜ್, ಇಸಿಓಗಳಾದ ಸಮೀರ, ಶಬ್ಬೀರ್ ಅಹಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.