ADVERTISEMENT

ಹಿಂದುಳಿದ ತಾಲ್ಲೂಕುಗಳ ಸ್ಥಿತಿಗತಿ ಅಧ್ಯಯನ: ಗೋವಿಂದರಾವ್‌

ಸಾರ್ವಜನಿಕರಿಂದಲೂ ಮಾಹಿತಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:19 IST
Last Updated 28 ಏಪ್ರಿಲ್ 2025, 14:19 IST
ಎಂ.ಗೋವಿಂದರಾವ್‌
ಎಂ.ಗೋವಿಂದರಾವ್‌   

ಚಿತ್ರದುರ್ಗ: ‘ಪ್ರೊ.ಡಿ.ಎಂ.ನಂಜುಂಡಪ್ಪ ವರದಿ ಜಾರಿಯಾಗಿದ್ದರೂ ರಾಜ್ಯದಲ್ಲಿ ಇಲ್ಲಿಯವರೆಗೆ ಪ್ರಾದೇಶಿಕ ಅಸಮತೋಲನ ನಿವಾರಣೆ ಸಾಧ್ಯವಾಗಿಲ್ಲ. ಹಿಂದುಳಿದ ತಾಲ್ಲೂಕುಗಳ ಸಮಗ್ರ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ಹೊಸದಾಗಿ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ರಚಿಸಿದ್ದು, ತಾಲ್ಲೂಕುಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಸಮಿತಿಯ ಅಧ್ಯಕ್ಷ ಎಂ.ಗೋವಿಂದರಾವ್‌ ಹೇಳಿದರು.

‘ನಂಜುಂಡಪ್ಪ ವರದಿಯಲ್ಲಿ 114 ತಾಲ್ಲೂಕುಗಳನ್ನು ಹಿಂದುಳಿದವು ಎಂದು ಗುರುತಿಸಲಾಗಿತ್ತು. ಆ ತಾಲ್ಲೂಕುಗಳ ಅಭಿವೃದ್ಧಿಗಾಗಿ 2007– 08ರಿಂದ 2023– 24ರವರೆಗೆ ₹ 45,789 ಕೋಟಿ ಅನುದಾನ ನೀಡಲಾಗಿದೆ. ಅದರಲ್ಲಿ ₹ 37,661 ಕೋಟಿ ಬಿಡುಗಡೆಯಾಗಿ ₹ 34,381 ಕೋಟಿ ಖರ್ಚಾಗಿದೆ. ಆದರೂ ಪ್ರಾದೇಶಿಕ ಅಸಮಾನತೆ ನಿವಾರಣೆ ಅಸಾಧ್ಯವಾಗಿರುವ ಕಾರಣ ರಾಜ್ಯ ಸರ್ಕಾರ ಸಮಿತಿ ರಚಿಸಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಂಜುಂಡಪ್ಪ ವರದಿಗೆ 22 ವರ್ಷಗಳಾಗಿದ್ದು, ಅಲ್ಲಿಯ ಕೆಲ ಸೂಚ್ಯಂಕಗಳು ಮೌಲ್ಯ ಕಳೆದುಕೊಂಡಿವೆ. ಪ್ರಸ್ತುತ ತಾಲ್ಲೂಕುಗಳ ಸಂಖ್ಯೆಯೂ ಹೆಚ್ಚಾಗಿರುವ ಕಾರಣ ಹೊಸದಾಗಿ ಅಧ್ಯಯನ ನಡೆಸಲು ನಮ್ಮ ಸಮಿತಿಗೆ ಅಧಿಕಾರ ನೀಡಲಾಗಿದೆ. 2024 ಅಕ್ಟೋಬರ್‌ನಿಂದ ಈವರೆಗೆ ಸಮಿತಿ 18 ಸುತ್ತಿನ ಸಭೆ ನಡೆಸಿದೆ. ಸೆಪ್ಟೆಂಬರ್‌ಗೆ ನಮ್ಮ ಸಮಿತಿಯ ಅವಧಿ ಮುಗಿಯಲಿದ್ದು, ಸರ್ಕಾರಕ್ಕೆ ವರದಿ ನೀಡಲಾಗುವುದು’ ಎಂದರು.

ADVERTISEMENT

‘ರಾಜ್ಯದಾದ್ಯಂತ ವಿವಿಧ ಹಂತದಲ್ಲಿ ಸಭೆ ನಡೆಸಲಾಗುತ್ತಿದ್ದು, ಎಲ್ಲರ ಸಲಹೆ, ಸೂಚನೆ ಸ್ವೀಕರಿಸಲಾಗುತ್ತಿದೆ. ಯಾರೇ ಮಾಹಿತಿ ನೀಡಿದರೂ ಪರಿಶೀಲಿಸಿ ಪರಿಗಣಿಸಲಾಗುವುದು. ಸಾರ್ವಜನಿಕರೂ ಮಾಹಿತಿ ನೀಡಬಹುದು. ಸಮಿತಿ ಎಲ್ಲವನ್ನೂ ಮುಕ್ತವಾಗಿ ಸ್ವೀಕರಿಸಲಿದೆ. ಮಾಹಿತಿ ನೀಡಲು ಮೊಬೈಲ್‌ ದೂರವಾಣಿ ಸಂಖ್ಯೆ: 98802– 83338 ಸಂಪರ್ಕಿಸಬಹುದು’ ಎಂದು ಅವರು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.