
ಮೊಳಕಾಲ್ಮುರು: ಸ್ವದೇಶಿ ವಸ್ತುಗಳನ್ನೇ ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಜಾಗೃತಿ ಮೂಡಿಸಲು ಬೆಂಗಳೂರಿನ ಸ್ವದೇಶಿ ಬೈಸಿಕಲ್ ಜಾಗರಣಾ ಸಮಿತಿಯಿಂದ ಹಮ್ಮಿಕೊಂಡಿರುವ ಬೈಸಿಕಲ್ ಜಾಥಾ ಬುಧವಾರ ತಾಲ್ಲೂಕಿನ ಮೂಲಕ ಸಾಗಿತು.
ಬಳ್ಳಾರಿ ಜಿಲ್ಲೆಯಿಂದ ತಾಲ್ಲೂಕಿನ ರಾಂಪುರ ಮೂಲಕ ತಾಲ್ಲೂಕಿಗೆ ಬಂದ ಜಾಥಾ ಹಾನಗಲ್ ಮೂಲಕ ಬಿ.ಜಿ.ಕೆರೆಗೆ ಆಗಮಿಸಿತು. ಸ್ಥಳೀಯ ವಸುಂಧರಾ ಸಸ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿ ನೆರೆಯ ಚಳ್ಳಕೆರೆ ತಾಲ್ಲೂಕಿಗೆ ತೆರಳಿತು.
‘ಸ್ವದೇಶಿ ಉತ್ಪನ್ನಗಳನ್ನು ಬಳಕೆ ಮಾಡಬೇಕು, ಇದರಿಂದ ನಮ್ಮ ರೈತರ, ವ್ಯಾಪಾರಿಗಳ ಆರ್ಥಿಕ ಶಕ್ತಿ ಹೆಚ್ಚಿಸಲು ಸಾಧ್ಯವಿದೆ. ದೇಶದ ಆರ್ಥಿಕ ಸ್ಥಿತಿ ಉನ್ನತಿ ಹೊಂದಲಿದೆ. ಕೆಲವರು ಜಾಗತೀಕರಣದಿಂದ ವಿದೇಶಿ ವಸ್ತುಗಳ ಮೋಹ ಬೆಳೆಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಂಡಿದೆ ಎಂದು ಸ್ವದೇಶಿ ಸೈಕಲ್ ಜಾಗರಣಾ ಸಮಿತಿಯ ಮುಖಂಡ ಬ್ರಿಗೇಡಿಯರ್ ರವಿ ಮುನಿಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಡಿ. 13ರಂದು ಬೆಂಗಳೂರಿನಲ್ಲಿ ಜಾಥಾಕ್ಕೆ ಚಾಲನೆ ನೀಡಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಜಾಥಾ ಭೇಟಿ ನೀಡಲಿದೆ. ಈಗಾಗಲೇ ಅಂದಾಜು 3000 ಕಿ.ಮೀ.ನಷ್ಟು ದೂರ ಕ್ರಮಿಸಿದ್ದು, ಗುರುವಾರ ಚಿತ್ರದುರ್ಗಕ್ಕೆ ತೆರಳಲಿದೆ. ನಂತರ ಹಿರಿಯೂರು, ಶಿರಾ, ತುಮಕೂರು, ಕೋಲಾರ ಮೂಲಕ ಸಂಚರಿಸಿ ಬೆಂಗಳೂರಿನಲ್ಲಿ ಜ. 19ರಂದು ಕೊನೆಯಾಗಲಿದೆ’ ಎಂದರು.
ರೈತ ಎಸ್.ವಿ. ವೀರಭದ್ರಪ್ಪ, ಕಾ.ತಿ. ಮಾಸ್ತರ್, ರೆಡ್ಡಿ, ಸೂರಮ್ಮನಹಳ್ಳಿ ರಾಜಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.