
ಚಿತ್ರದುರ್ಗ: ‘ನಗರದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನ. 12ರಿಂದ 16ರವರೆಗೆ ನಡೆಯಲಿರುವ ಸ್ವದೇಶಿ ಮೇಳಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಾರ್ವಜನಿಕರನ್ನು ಸ್ವಾಗತಿಸಲು ನಗರದ ಹೊರವಲಯದಲ್ಲಿ 6 ಕಡೆ ಮಹಾದ್ವಾರ ರೂಪಿಸಲಾಗುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ, ಮೇಳದ ಸಂಚಾಲಕ ಕೆ.ಎಸ್. ನವೀನ್ ಹೇಳಿದರು.
‘ಜಿಲ್ಲೆಯ ಸಾಧಕರು, ಐತಿಹಾಸಿಕ ವ್ಯಕ್ತಿಗಳ ಹೆಸರಿನಲ್ಲಿ ಮಹಾದ್ವಾರ ರೂಪಿಸಲಾಗುತ್ತಿದೆ. ರಾಜವೀರ ಮದಕರಿ ನಾಯಕ, ಬಿಚ್ಚುಗತ್ತಿ ಭರಮಣ್ಣ ನಾಯಕ, ಒನಕೆ ಓಬವ್ವ, ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ, ಕಾದಂಬರಿಕಾರ ತರಾಸು, ಮುರುಘರಾಜೇಂದ್ರ ಸ್ವಾಮೀಜಿ ಹೆಸರಿಡಲಾಗುತ್ತಿದೆ. ಸಂಪೂರ್ಣ ಪರಿಸರ ಸ್ನೇಹಿತಿಯಾಗಿ ಮೇಳ ನಡೆಯಲಿದ್ದು ಜಿಲ್ಲೆಯ ವಿವಿಧ ಸಂಘಟನೆಗಳ ಸಹಕಾರ ಪಡೆಯಲಾಗಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ನ.12ರಂದು ಬೆಳಿಗ್ಗೆಯಿಂದಲೇ ಮೇಳ ಆರಂಭವಾಗಲಿದೆ. ಸಂಜೆ ವಿಧ್ಯುಕ್ತವಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ತರಳಬಾಳು ಮಠದ ಪೀಠಾಧಿಪತಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಸದ ಗೋವಿಂದ ಕಾರಜೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್ಥಿಕ ತಜ್ಞ ಪ್ರೊ. ಕುಮಾರಸ್ವಾಮಿ ಅವರು ಉಪನ್ಯಾಸ ನೀಡಲಿದ್ದಾರೆ’ ಎಂದರು.
‘ಪಂಚಾಚಾರ್ಯ ಕಲ್ಯಾಣ ಮಂಟಪದಿಂದ ಅತಿಥಿಗಳನ್ನು ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗವುದು. ಅದಕ್ಕೂ ಮೊದಲು ಯಾದವಾನಂದ ಸ್ವಾಮೀಜಿ ಗೋಪೂಜೆ ನೆರವೇರಿಸಲಿದ್ದಾರೆ. ಬಂಜಾರ ಗುರುಪೀಠದ ಸ್ವಾಮೀಜಿ ದೇಸಿ ಕ್ರೀಡೆಗಳಿಗೆ ಚಾಲನೆ ನೀಡಲಿದ್ದಾರೆ. ಮಾದಾರ ಚನ್ನಯ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ನ.13ರಂದು ಬೆಳಿಗ್ಗೆ ವಚನಾನಂದ ಸ್ವಾಮೀಜಿ ಯೋಗ ತರಬೇತಿ ನೀಡಲಿದ್ದಾರೆ. ಜಿಲ್ಲೆಯ ವಿವಿಧ ಯೋಗ ಶಾಲೆಗಳ ತಂಡಗಳು ಭಾಗವಹಿಸಲಿವೆ’ ಎಂದರು.
‘ನ.16ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಶಾಂತಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಎಂ.ಚಂದ್ರಪ್ಪ ಭಾಗವಹಿಸುವರು. ಮೇಳದಲ್ಲಿ ಸರ್ಕಾರಿ ನೌಕರರು, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು, ರೈತರು, ಯುವ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ನವೋದ್ಯಮ ಸ್ಥಾಪನೆಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡಲಾಗುವುದು’ ಎಂದರು.
‘ಹಳ್ಳಿ ಸೊಬಗು ನೆನಪಿಸುವಂತೆ ವಿವಿಧ ಚಟುವಟಿಕೆ ನಡೆಯಲಿವೆ. ಇದೇ ಸಂದರ್ಭದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಕೂಡ ನಡೆಯಲಿದೆ. ಸೀರೆಯುಟ್ಟು ಬಂದು ಮೇಳದಲ್ಲಿ ಭಾಗವಹಿಸುವ ಮಹಿಳೆಯರಲ್ಲಿ ಪ್ರತಿದಿನ ಒಬ್ಬರಿಗೆ ಬಹುಮಾನ ನೀಡಲಾಗುವುದು. ದೇಸಿ ಆಹಾರ ತಯಾರಿಕೆ, ಆಟ, ರಂಗೋಲಿ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ. ಪ್ರತಿದಿನ ಸಂಜೆ ಸ್ಥಳೀಯ ಕಲಾವಿದರು ಹಾಗೂ ಹೊರಗಿನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಮೇಳದ ಸಹ ಸಂಚಾಲಕರಾದ ಹನುಂತೇಗೌಡ, ನಾಗರಾಜ್ ಬೇದ್ರೆ, ಸ್ವದೇಶಿ ಜಾಗರಣ ಜಿಲ್ಲಾ ಸಂಚಾಲಕ ರವೀಂದ್ರ ಇದ್ದರು.
₹ 2.50 ಕೋಟಿ ವಹಿವಾಟು ನಿರೀಕ್ಷೆ
ಸ್ವದೇಶಿ ಜಾಗರಣಾ ಮಂಚ್ ರಾಜ್ಯ ಪ್ರಮುಖರಾದ ಜಗದೀಶ್ ಮಾತನಾಡಿ ‘ಬೇರೆ ಬೇರೆ ನಗರಗಳಲ್ಲಿ ನಡೆದ ಸ್ವದೇಶಿ ಮೇಳಗಳಲ್ಲಿ ಜನರಿಂದ ಉತ್ತಮ ಸ್ಪಂದನೆ ದೊರಕಿದೆ. ದುರ್ಗದಲ್ಲಿ ನಡೆಯುತ್ತಿರುವ ಮೇಳದಲ್ಲಿ ಅಂದಾಜು ₹ 2.50 ಕೋಟಿ ವಹಿವಾಟು ನಡೆಯುವ ನಿರೀಕ್ಷೆ ಇದೆ. ಮಳಿಗೆಗಳಲ್ಲಿ ನಡೆಯುವ ವಹಿವಾಟು ಮಾತ್ರವಲ್ಲದೇ ದೇಸಿ ಉತ್ಪನ್ನ ಉತ್ಪದನಾ ಕಂಪನಿಗಳು ತಮ್ಮ ವಹಿವಾಟು ವಿಸ್ತರಿಸಿಕೊಳ್ಳಲು ಅನುಕೂಲವಾಗಲಿದೆ’ ಎಂದು ಹೇಳಿದರು. ‘ಈಗಾಗಲೇ 160 ಮಹಿಳೆಗಳು ಸಿದ್ಧಗೊಂಡಿವೆ. ವೇದಿಕೆ ಮುಂಭಾಗದಲ್ಲಿ ಧಾನ್ಯ ಕಣ ಬರಲಿದೆ. ಅರಸೀಕೆರೆಯಿಂದ ರಂಗೋಲಿ ಕಲಾವಿದರು ಸುಂದರ ರಂಗೋಲಿ ಬಿಡಿಸಲಿದ್ದಾರೆ. ದೇಸಿ ತಳಿಯ ಹಸುಗಳನ್ನು ಪ್ರದರ್ಶನ ಮಾಡಲಾಗುವುದು. ವಾಹನ ಪಾರ್ಕಿಂಗ್ ಕುಡಿಯುವ ನೀರು ನೆರಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಮಾಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.