ADVERTISEMENT

ಟಿಎಪಿಸಿಎಂಎಸ್‌ಗೆ ಅಮೃತ ಮಹೋತ್ಸವ; 25ರಂದು ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 7:59 IST
Last Updated 23 ಆಗಸ್ಟ್ 2025, 7:59 IST
ಹೊಸದುರ್ಗದ ಟಿಎಪಿಸಿಎಂಎಸ್ ಆವರಣದಲ್ಲಿ ಈಚೆಗೆ ಅಮೃತ ಮಹೋತ್ಸವ ಕುರಿತು ಅಧ್ಯಕ್ಷ ಕಾರೇಹಳ್ಳಿ ಬಸವರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು
ಹೊಸದುರ್ಗದ ಟಿಎಪಿಸಿಎಂಎಸ್ ಆವರಣದಲ್ಲಿ ಈಚೆಗೆ ಅಮೃತ ಮಹೋತ್ಸವ ಕುರಿತು ಅಧ್ಯಕ್ಷ ಕಾರೇಹಳ್ಳಿ ಬಸವರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು   

ಹೊಸದುರ್ಗ: ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಎಸ್) 75 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ, ವಾರ್ಷಿಕ ಮಹಾಸಭೆ, 1,000 ಟನ್ ಸಾಮರ್ಥ್ಯದ ಗೋದಾಮು, ವ್ಯಾಪಾರಿ ಮಳಿಗೆಗಳ ಉದ್ಘಾಟನೆ ಹಾಗೂ ಸಿ.ಸಿ. ರಸ್ತೆ ಉದ್ಘಾಟನೆ ಸಮಾರಂಭ ಆಗಸ್ಟ್ 25 ರಂದು ಬೆಳಿಗ್ಗೆ 10 ಗಂಟೆಗೆ ಸಂಘದ ಸಗಟು ಗೋದಾಮಿನ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್ ಮಾಹಿತಿ ನೀಡಿದರು. 

ಪಟ್ಟಣದ ಟಿಎಪಿಸಿಎಂಎಸ್ ಆವರಣದಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

‘ಸಹಕಾರ ಸಂಘವು 1949 ರಲ್ಲಿ ಒಂದು ಬಾಡಿಗೆ ಕಟ್ಟಡದಲ್ಲಿ ಸಣ್ಣದಾಗಿ ಆರಂಭವಾಗಿತ್ತು. ಇಂದು ಭವ್ಯ ಕಟ್ಟಡ ಹೊಂದಿದ್ದು, ಅಪಾರ ಆದಾಯ ಗಳಿಸಿದೆ. ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ರಾಜಕೀಯ ಶಕ್ತಿಯಾಗಿ ಕಾರ್ಯ ನಿರ್ವಹಿಸಿದೆ. ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದ ಜಿ.ಟಿ.ರಂಗಪ್ಪ, ಜಿ.ಬಸಪ್ಪ, ಜಿ.ರಾಮದಾಸ್ ಅವರು ತಾಲ್ಲೂಕಿನ ಶಾಸಕರಾಗಿದ್ದರು. ಹಾಲಿ ಶಾಸಕ ಬಿ.ಜಿ. ಗೋವಿಂದಪ್ಪ ಹಿಂದೆ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ’ ಎಂದರು. 

ADVERTISEMENT

ಅಮೃತ ಮಹೋತ್ಸವದ ಸವಿನೆನಪಿಗಾಗಿ ಹಿರಿಯೂರು ರಸ್ತೆಯಲ್ಲಿ ನೂತನವಾಗಿ 1,000 ಟನ್ ಸಾಮರ್ಥ್ಯದ ಗೋದಾಮು ಹಾಗೂ 4 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಶಾಸಕರ ಅನುದಾನದಲ್ಲಿ ₹ 20 ಲಕ್ಷ ವೆಚ್ಚದಲ್ಲಿ ಸಿ.ಸಿ. ರಸ್ತೆ ನಿರ್ಮಿಸಲಾಗಿದೆ. 75 ವರ್ಷದ ಸವಿನೆನಪಿಗಾಗಿ ಸದಸ್ಯರಿಗೆ ಶೇ 20 ರಷ್ಟು ಡಿವಿಡೆಂಡ್ ಹಾಗೂ 10 ಗ್ರಾಂ ಬೆಳ್ಳಿ ನಾಣ್ಯ ನೀಡಲಾಗುವುದು ಎಂದು ತಿಳಿಸಿದರು. 

ಬೆಳಿಗ್ಗೆ 11.30ಕ್ಕೆ ಕಟ್ಟಡಗಳ ಹಾಗೂ ಸಿ.ಸಿ. ರಸ್ತೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಭೆಗೆ ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. 

ಈ ವೇಳೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಟಿ.ಬಿ.ಮಂಜುನಾಥ್, ಟಿಎಪಿಸಿಎಂಎಸ್ ಕಾರ್ಯದರ್ಶಿ ಎಂ. ಸಂತೋಷ್, ನಿರ್ದೇಶಕರಾದ ಎಚ್.ಎಸ್. ಶ್ರೀಧರ್ ಭಟ್, ಎಸ್.ಸಿ. ರಮೇಶ್, ಬಿ.ಜೆ. ಮಹಾಂತೇಶ್ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.