ADVERTISEMENT

ಚಿತ್ರದುರ್ಗ | ಕೊಟ್ಟೂರು ‘ತರಳಬಾಳು ಹುಣ್ಣಿಮೆ’ ಮಹೋತ್ಸವ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2022, 5:59 IST
Last Updated 9 ಜನವರಿ 2022, 5:59 IST
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   

ಸಿರಿಗೆರೆ: ಲಕ್ಷಾಂತರ ಭಕ್ತರ ಸಮಕ್ಷಮದಲ್ಲಿ ವೈಭವದಿಂದ ನಡೆಯುತ್ತಿದ್ದ ‘ತರಳಬಾಳು ಹುಣ್ಣಿಮೆ’ ಮಹೋತ್ಸವ ಕೋವಿಡ್‌ ಕಾರಣದಿಂದ ಈ ವರ್ಷವೂ ಮುಂದೂಡಿಕೆಯಾಗಿದೆ.

ಭಾವೈಕ್ಯತಾ ಪರಿಷತ್, ಚಲಿಸುವ ವಿಶ‍್ವವಿದ್ಯಾಲಯ, ಜ್ಞಾನ ದಾಸೋಹ ಕಾರ್ಯಕ್ರಮವೆಂದೇ ಹೆಸರಾಗಿರುವ ಈ ಸಮಾರಂಭ ಈ ವರ್ಷ ಫೆ. 8ರಿಂದ 16ರವರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆಯಬೇಕಿತ್ತು. ಕೋವಿಡ್‌ ಪ್ರಕರಣಗಳ ಹೆಚ್ಚಳದಿಂದಾಗಿ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ತರಳಬಾಳು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ.

ಕೊಟ್ಟೂರು ತರಳಬಾಳು ಹುಣ್ಣಿಮೆಯ ವಿಚಾರವಾಗಿ ಆ ಭಾಗದ ಶಿಷ್ಯಂದಿರು ಶುಕ್ರವಾರ ಸಿರಿಗೆರೆಗೆ ಭೇಟಿ ನೀಡಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದರು.

ADVERTISEMENT

2020ರಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆಯ ಮಹೋತ್ಸವದ ಕೊನೆಯ ದಿನದ ಸಮಾರಂಭದಲ್ಲಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಆಶೀರ್ವಚನದಲ್ಲಿ 2021ರ ಫೆಬ್ರುವರಿ ತಿಂಗಳಿನಲ್ಲಿ ಕೊಟ್ಟೂರು ಪಟ್ಟಣದಲ್ಲಿ ತರಳಬಾಳು ಹುಣ್ಣಿಮೆ ಉತ್ಸವ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಆದರೆ, ಕಳೆದ ವರ್ಷ ಕೋವಿಡ್‌ನಿಂದಾಗಿ ಅಲ್ಲಿ ನಡೆಯಬೇಕಿದ್ದ ಉತ್ಸವವನ್ನು ಮುಂದೂಡಲಾಯಿತು. 2021ರ ಫೆ. 19ರಿಂದ 27ರವರೆಗೆ 9 ದಿನಗಳ ಕಾರ್ಯಕ್ರಮವನ್ನು ಸರಳವಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸಿರಿಗೆರೆಯ ತರಳಬಾಳು ಮಠದಿಂದಲೇ ನಡೆಸಲಾಯಿತು.

ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬೃಹನ್ಮಠದ ಶೈಕ್ಷಣಿಕ-ಸಾಂಸ್ಕೃತಿಕ ಹಾಗೂ ವಿಶ‍್ವ ಭಾವೈಕ್ಯದ ಕಾರ್ಯಕ್ರಮದಂತೆ ಬಿಂಬಿತವಾಗುವ, ವಾರ್ಷಿಕ ಆಚರಣೆಯಾದ ತರಳಬಾಳು ಹುಣ್ಣಿಮೆ ಉತ್ಸವವು 20ನೆಯ ಜಗದ್ಗುರುಗಳಾಗಿದ್ದ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಕಾಲದಲ್ಲಿ ಆರಂಭಗೊಂಡಿತು. ಇದು 1950ರಿಂದಲೂ ರಾಜ್ಯವಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲಿಯೂ ಜನಪ್ರಿಯಗೊಂಡಿದೆ.

ಈ ಹಿಂದೆ ಬರಗಾಲ, ಅನಾವೃಷ್ಟಿಯಂಥ ಪ್ರಾಕೃತಿಕ ಸಮಸ್ಯೆಗಳು ನಾಡಿನಲ್ಲಿ ತಲೆದೋರಿದಾಗ, ಕಾರ್ಯಕ್ರಮವನ್ನು ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಗಿತ್ತು. ಜಗಳೂರು, ಹಳೇಬೀಡು ಪ್ರದೇಶಗಳಲ್ಲಿ ತರಳಬಾಳು ಹುಣ್ಣಿಮೆಯನ್ನು ಅಷ್ಟೇ ವೈಭವಯುತವಾಗಿ ನಡೆಸಿಕೊಟ್ಟಿರುವುದು ಶ್ಲಾಘನೀಯ. ಜನರು ಸಂತೋಷದಿಂದ ಹಬ್ಬವನ್ನು ಆಚರಿಸಬೇಕೆಂಬುದು ನಮ್ಮ ಅಪೇಕ್ಷೆಯಾಗಿತ್ತು. ನಾಡಿನ ಸಮಸ್ಯೆಗಳಿಗೆ ಸ್ಪಂದಿಸುವ ಈ ಮಹೋತ್ಸವವು ಕೇವಲ ಶುಷ್ಕ ಧಾರ್ಮಿಕ ಕಾರ್ಯಕ್ರಮವಲ್ಲ. ಜನರ ನೋವಿಗೆ ಸ್ಪಂದಿಸುವುದೇ ನಿಜವಾದ ಧರ್ಮ ಎಂಬುವುದನ್ನು ಮನಗಂಡು, ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರವು ವಿಧಿಸಿರುವ ನಿರ್ಬಂಧವನ್ನು ತಪ್ಪದೇ ಪಾಲಿಸಲಾಗುತ್ತದೆ. ಹಿಗಾಗಿ 8 ರಿಂದ 16 ರವರೆಗೆ ನಡೆಯಬೇಕಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಲು ತೀರ್ಮಾನಿಸಲಾಯಿತು’ ಎಂದು ತಿಳಿಸಿದರು.

ಸಾಂಪ್ರದಾಯಿಕವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸದ್ಧರ್ಮ ಪೀಠಾರೋಹಣವನ್ನು ಮಾಘ ಶುದ್ಧಪೂರ್ಣಿಮೆ (ಫೆ. 16ರಂದು) ಯಂದು ತರಳಬಾಳು ಮಠದಲ್ಲಿಯೇ ಸರಳವಾಗಿ ನಡೆಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.