ADVERTISEMENT

ತಂತ್ರಜ್ಞಾನ ಸದ್ಬಳಕೆಯಿಂದ ಕೌಶಲ ವೃದ್ಧಿ

ಕಲಾ ಕಾಲೇಜಿನಲ್ಲಿ ಉಪನ್ಯಾಸ; ರಾಜ್ಯ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ನಿರಂಜನ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:33 IST
Last Updated 29 ಅಕ್ಟೋಬರ್ 2025, 4:33 IST
ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್‌ ಜ್ಞಾನ ಸಭಾಂಗಣದಲ್ಲಿ ನಡೆದ ‘ಉನ್ನತ ಶಿಕ್ಷಣದಲ್ಲಿ ಇತ್ತೀಚಿನ ಬೆಳವಣಿಗೆಗಳು’  ವಿಶೇಷ ಉಪನ್ಯಾಸಕ್ಕೆ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್‌.ಆರ್‌.ನಿರಂಜನ ಚಾಲನೆ ನೀಡಿದರು
ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್‌ ಜ್ಞಾನ ಸಭಾಂಗಣದಲ್ಲಿ ನಡೆದ ‘ಉನ್ನತ ಶಿಕ್ಷಣದಲ್ಲಿ ಇತ್ತೀಚಿನ ಬೆಳವಣಿಗೆಗಳು’  ವಿಶೇಷ ಉಪನ್ಯಾಸಕ್ಕೆ ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್‌.ಆರ್‌.ನಿರಂಜನ ಚಾಲನೆ ನೀಡಿದರು   

ಚಿತ್ರದುರ್ಗ: ‘ತಂತ್ರಜ್ಞಾನ ಸದ್ಬಳಕೆ ಮೂಲಕ ಕೌಶಲ ವೃದ್ಧಿಸಿಕೊಳ್ಳಬೇಕು. ಇಲ್ಲವಾದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ನಿಲುಕದ ನಕ್ಷತ್ರವಾಗುತ್ತದೆ’ ಎಂದು ಕರ್ನಾಟಕ ಉನ್ನತ ಶಿಕ್ಷಣ ಮಂಡಳಿ ಉಪಾಧ್ಯಕ್ಷ ಎಸ್‌.ಆರ್‌.ನಿರಂಜನ ಹೇಳಿದರು.

ಸರ್ಕಾರಿ ಕಲಾ ಕಾಲೇಜಿನ ಅಂಬೇಡ್ಕರ್‌ ಜ್ಞಾನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಉನ್ನತ ಶಿಕ್ಷಣದಲ್ಲಿ ಇತ್ತೀಚಿನ ಬೆಳವಣಿಗೆಗಳು’ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಮಹತ್ವದ ಗುರಿ ಇರಬೇಕು. ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವ ಬಹಳ ಮುಖ್ಯ. ಆಧುನಿಕ ಭಾರತದಲ್ಲಿ ಶಿಕ್ಷಣ ಆಯ್ಕೆಯಲ್ಲ, ಅವಕಾಶವಾಗಿದೆ. ಇದನ್ನು ಬಳಸಿಕೊಂಡವರಿಗೆ ಮಾತ್ರ ಜ್ಞಾನ ಲಭಿಸುತ್ತದೆ. ಹಿಂದಿನ ಶಿಕ್ಷಣ ವ್ಯವಸ್ಥೆಗಿಂತ ಇಂದಿನ ಶಿಕ್ಷಣ ವ್ಯವಸ್ಥೆ ಕಾಲಕ್ಕೆ ತಕ್ಕಂತೆ ಬದಲಾಗಿದೆ. ಅಂದು ಅಭಿವೃದ್ಧಿ ಹೊಂದಿದ ದೇಶಗಳಿಂದ ಭಾರತದಲ್ಲಿ ಶಿಕ್ಷಣ ಪಡೆಯಲು ತಕ್ಷಶಿಲಾ, ನಳಂದಾ ವಿದ್ಯಾಕೇಂದ್ರಗಳಿಗೆ ಬರುತ್ತಿದ್ದರು. ಈ ಶಿಕ್ಷಣ ಕೇಂದ್ರಗಳಲ್ಲಿ ಬಹುಶಿಸ್ತೀಯ ಅಧ್ಯಯನ ನಡೆಯುತ್ತಿದ್ದವು. ಶಿಕ್ಷಣದ ವ್ಯಾಖ್ಯಾನವೇ ಭಿನ್ನವಾಗಿತ್ತು’ ಎಂದು ತಿಳಿಸಿದರು.

ADVERTISEMENT

‘ಪದವಿ ವಿದ್ಯಾರ್ಥಿಗಳು ಮೂರು ವಿಷಯಗಳ ಜೊತೆಗೆ ಮತ್ತೊಂದು ವಿಷಯ(ಒಪನ್ ಎಲೆಕ್ಟಿವ್) ಆಯ್ಕೆ ಮಾಡಿಕೊಂಡು ಅಧ್ಯಯನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವಿಭಾಗದಲ್ಲಿಯೂ ಕಲಿಕೆ, ಕೌಶಲದ ಜೊತೆಗೆ ಸಂಶೋಧನೆಗೆ ಆದ್ಯತೆ ನೀಡಬೇಕು. ಆಗ ಮಾತ್ರ ಜ್ಞಾನ ವಿಸ್ತರಣೆ ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಸ್ವಾತಂತ್ರ್ಯದ ಬಳಿಕ ದೇಶದ ಸವಾಲುಗಳಾಗಿದ್ದ ಬಡತನ, ನಿರುದ್ಯೋಗ, ಆಹಾರ ಕೊರತೆ ನೀಗಿಸಲು ಸಸ್ಯಶಾಸ್ತ್ರ ಕ್ಷೇತ್ರವು ಮಹತ್ವದ ಕೊಡುಗೆ ನೀಡಿದೆ. ಹಸಿರು ಕ್ರಾಂತಿಯ ಮೂಲಕ ಆಹಾರದ ಕೊರತೆಯನ್ನು ಬಗೆಹರಿಸಲಾಗಿದೆ. ಶಿಕ್ಷಣ ವ್ಯವಸ್ಥೆಯೂ ಹಂತ ಹಂತವಾಗಿ ಬೆಳೆದಿದ್ದು, ಇಂದು ದೇಶದಲ್ಲಿ ಸಾವಿರಾರು ಕಾಲೇಜುಗಳು, ನೂರಾರು ವಿಶ್ವವಿದ್ಯಾಲಯಗಳು ಮಹತ್ತರ ಸೇವೆ ನೀಡುತ್ತಿವೆ’ ಎಂದು ಶ್ಲಾಘಿಸಿದರು.

‘ಯಾವ ರೀತಿಯ ಜ್ಞಾನಬೇಕೆಂಬ ಅರಿವು ಮುಖ್ಯ. ಅವಶ್ಯ ಮತ್ತು ಅವಶ್ಯವಿಲ್ಲದ ಜ್ಞಾನ ಯಾವುದು ಎಂಬ ತಿಳಿವಳಿಕೆ ಮತ್ತು ಸ್ವ– ವಿಮರ್ಶಾ ಪ್ರಜ್ಞೆ ಇರಬೇಕು. ವಿದ್ಯಾರ್ಥಿಗಳ ಯಶಸ್ಸಿಗೆ ಕೌಶಲ ಆಧಾರಿತ ಶಿಕ್ಷಣ ಮತ್ತು ಬಹುಶಿಸ್ತೀಯ ನೆಲೆಯ ಜ್ಞಾನ ಅವಶ್ಯಕತೆ ಇದೆ’ ಎಂದು ತಿಳಿಸಿದರು.

‘ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕ್ಷೇತ್ರದ ಎಲ್ಲ ವಿಷಯಗಳು ಬಹುಮುಖ್ಯ. ಇವುಗಳ ಅಂತರಶಿಸ್ತೀಯ ಅಧ್ಯಯನದ ಮಹತ್ವ ಅರಿಯಬೇಕು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ಕೊರತೆ ಏನು ಎಂಬುದನ್ನು ಅರಿಯಬೇಕು. ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಈ ಮೂಲಕ ಕೊರತೆಯನ್ನು ಜಯಿಸಬೇಕು’ ಎಂದರು.

‘ಬದಲಾಗುತ್ತಿರುವ ಜಗತ್ತಿನಲ್ಲಿ ತಂತ್ರಜ್ಞಾನವೂ ಬದಲಾಗುತ್ತಿದ್ದು, ಸಹಯೋಗ, ಸಹಕಾರದೊಂದಿಗೆ ಸಂಶೋಧನೆಗಳು ಹೆಚ್ಚಬೇಕು. ಕಲಿಕೆಯಲ್ಲಿಯೂ ಬದಲಾವಣೆಯಾಗಬೇಕು. ಹುದ್ದೆಗಳಿಗೆ ಅಗತ್ಯವಾದ ಅಧ್ಯಯನ ನಡೆಸಬೇಕು. ಅಂದಿನ ಶಿಕ್ಷಣದ ವ್ಯಾಖ್ಯಾನವೇ ಭಿನ್ನವಾಗಿದ್ದು, ಯಶಸ್ಸಿಗೆ ಕೌಶಲ ಆಧಾರಿತ ಶಿಕ್ಷಣ ಮುಖ್ಯವಾಗಿದೆ. ನಿರಂತರ ಕಲಿಕೆ ಮೂಲಕ ಪೋಷಕರ ಮತ್ತು ಸಮಾಜದ ಆಶಯ ಸಾಕಾರಗೊಳಿಸಿ’ ಎಂದು ತಿಳಿಸಿದರು.

‘ಉನ್ನತ ಶಿಕ್ಷಣ ಸೇರಬಯಸುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವುದು ಆತಂಕದ ವಿಷಯ. ಕೌಶಲ ಆಧಾರಿತ ಶಿಕ್ಷಣ ಕಲಿತು ಬದುಕನ್ನು ಕಟ್ಟಿಕೊಳ್ಳಬೇಕಿದೆ. ಆಗುತ್ತಿರುವ ಬದಲಾವಣೆಗೆ ಅನುಗುಣವಾಗಿ ನಾವು ಮುಖಾಮುಖಿ ಆಗಬೇಕು’ ಎಂದು ಸರ್ಕಾರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.

ಐಕ್ಯೂಎಸಿ ಸಂಚಾಲಕಿ ಪ್ರೊ.ಆರ್‌.ತಾರಿಣಿ ಶುಭದಾಯಿನಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಸುರೇಶ, ಕಾಲೇಜು ಅಧ್ಯಾಪಕರ ಸಂಘದ ಕಾರ್ಯದರ್ಶಿ ಹನುಮಂತಪ್ಪ, ಪತ್ರಾಂಕಿತ ವ್ಯವಸ್ಥಾಪಕ ಮಾರ್ಟಿನ್‌ ಸ್ಯಾಮುವಲ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.