ADVERTISEMENT

ದೇವಸ್ಥಾನದ ಹೋಳಿಗೆ ಊಟ ಸೇವಿಸಿ ಮಕ್ಕಳ ಆರೋಗ್ಯ ಏರುಪೇರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 16:00 IST
Last Updated 23 ಏಪ್ರಿಲ್ 2025, 16:00 IST
ಚಳ್ಳಕೆರೆ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಮಕ್ಕಳ ಆರೋಗ್ಯವನ್ನು ತಹಶೀಲ್ದಾರ್ ರೇಹಾನ್ ಪಾಷ ವಿಚಾರಿಸಿದರು 
ಚಳ್ಳಕೆರೆ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಮಕ್ಕಳ ಆರೋಗ್ಯವನ್ನು ತಹಶೀಲ್ದಾರ್ ರೇಹಾನ್ ಪಾಷ ವಿಚಾರಿಸಿದರು    

ಚಳ್ಳಕೆರೆ: ತಾಲ್ಲೂಕಿನ ರೆಡ್ಡಿಹಳ್ಳಿ ಗ್ರಾಮದಲ್ಲಿ ನಡೆದ ಮಾರಿದೇವಿ ಜಾತ್ರೆ ಪ್ರಯುಕ್ತ ಭಕ್ತರು ತಯಾರಿಸಿದ ಹೋಳಿಗೆ ಮತ್ತು ಬಾಳೆಹಣ್ಣಿನ ಸೀಕರಣೆ ಊಟ ಸೇವಿಸಿದ 30ಕ್ಕೂ ಹೆಚ್ಚು ಮಕ್ಕಳಿಗೆ ಮಂಗಳವಾರ ರಾತ್ರಿ ಆಯಾಸ, ಕೆಮ್ಮು ಹಾಗೂ ಜ್ವರ ಕಾಣಿಸಿಕೊಂಡು ಆರೋಗ್ಯ ಏರುಪೇರು ಉಂಟಾಗಿತ್ತು.

ಆತಂಕಗೊಂಡ ಪೋಷಕರು ತಮ್ಮ ಮಕ್ಕಳನ್ನು ಸಮೀಪದ ಗೋಪನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ನಂತರ ಚಳ್ಳಕೆರೆಯ ಆಸ್ಪತ್ರೆಗೆ ದಾಖಲಿಸಿದ್ದರು. ಎಲ್ಲರೂ ಚೇತರಿಸಿಕೊಂಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ತಹಶೀಲ್ದಾರ್ ರೇಹಾನ್ ಪಾಷ ಅವರು, ವೈದ್ಯಾಧಿಕಾರಿಗಳೊಂದಿಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಪರಿಶೀಲಿಸಿದರು.

ADVERTISEMENT

‘ಹರಕೆ ಹೊತ್ತ ಭಕ್ತರು ಊಟ ತಯಾರಿಸುವಲ್ಲಿ ಸ್ವಚ್ಛತೆ ಕಡೆಗೆ ಗಮನಹರಿಸಿಲ್ಲ. ಅಡುಗೆ ಪರಿಕರ ಸ್ವಚ್ಛಗೊಳಿಸಿಲ್ಲ. ಆಹಾರ ತಯಾರಿಕೆಗೆ ಶುದ್ಧನೀರು ಬಳಕೆ ಮಾಡದಿರುವುದರಿಂದ ಮಕ್ಕಳ ಆರೋಗ್ಯ ಏರುಪೇರಿಗೆ ಕಾರಣವಾಗಿದೆ. ಚಿಕಿತ್ಸೆಯಿಂದ ಮಕ್ಕಳು ಚೇತರಿಸಿಕೊಂಡಿದ್ದಾರೆ. ಜ್ವರ ಕಾಣಿಸಿಕೊಂಡ 20 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳ ಜೊತೆ ಉಳಿಯಲು ಪೋಷಕರಿಗೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಹಶೀಲ್ದಾರ್‌ ತಿಳಿಸಿದರು.

‘ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿಗಾವಹಿಸುವ ಮೂಲಕ ಅವರಿಗೆ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ ನೀಡಲಾಗಿದೆ. ಪೋಷಕರು ಆತಂಕ ಪಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಕಂದಾಯ ಅಧಿಕಾರಿ ತಿಪ್ಪೇಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.