ADVERTISEMENT

ಡಿ.1ರಂದು ಅದ್ದೂರಿ ತೆಪ್ಪೋತ್ಸವಕ್ಕೆ ಸಂಕಲ್ಪ

ನಾಯಕನಹಟ್ಟಿ ಹಿರೇಕೆರೆ ಕೋಡಿಬಿದ್ದ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 1:57 IST
Last Updated 20 ಸೆಪ್ಟೆಂಬರ್ 2022, 1:57 IST
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದ ಸಭಾಂಗಣದಲ್ಲಿ ತೆಪ್ಪೋತ್ಸವದ ನಿಮಿತ್ತ ಸೋಮವಾರ ಪೂರ್ವಭಾವಿ ಸಭೆಯನ್ನು ದೈವಸ್ಥರು ನಡೆಸಿದರು.
ನಾಯಕನಹಟ್ಟಿ ಪಟ್ಟಣದ ಗುರುತಿಪ್ಪೇರುದ್ರಸ್ವಾಮಿ ಒಳಮಠ ದೇವಾಲಯದ ಸಭಾಂಗಣದಲ್ಲಿ ತೆಪ್ಪೋತ್ಸವದ ನಿಮಿತ್ತ ಸೋಮವಾರ ಪೂರ್ವಭಾವಿ ಸಭೆಯನ್ನು ದೈವಸ್ಥರು ನಡೆಸಿದರು.   

ನಾಯಕನಹಟ್ಟಿ: ಐತಿಹಾಸಿಕ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿಯ ಹಿರೇಕೆರೆಯು ಕೋಡಿಬಿದ್ದ ಹಿನ್ನೆಲೆಯಲ್ಲಿ ಸಂಪ್ರದಾಯದಂತೆ ಹಿರೇಕೆರೆ ತೆಪ್ಪೋತ್ಸವವನ್ನು ಆಚರಿಸಲು ಗ್ರಾಮಸ್ಥರು ಸಂಕಲ್ಪಗೈದರು.

ಹಿರೇಕೆರೆಯು ಹೋಬಳಿಯಲ್ಲೇ ಅತ್ಯಂತ ದೊಡ್ಡಕೆರೆಯಾಗಿದ್ದು, ಸುಮಾರು 809.10 ಎಕರೆ ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತದೆ. ಇಂತಹ ಬೃಹತ್ ಕೆರೆಯು ತುಂಬಿ ಕೋಡಿ ನೀರು ಹರಿದಾಗ ನಾಯಕನಹಟ್ಟಿ ಪಟ್ಟಣದ ದೈವಸ್ಥರು, ಬಾಬುದಾರರು, ಗ್ರಾಮಸ್ಥರು ಒಗ್ಗೂಡಿ ಸಂಪ್ರದಾಯಿಕವಾಗಿ ತೆಪ್ಪೋತ್ಸವವನ್ನು ಆಚರಿಸುವ ಪದ್ಧತಿಯಿದೆ.

ಹಾಗೇ ಇದೇ ತಿಂಗಳ 17ರಂದು ಹಿರೇಕೆರೆಗೆ ನೀರು ಬಂದು ಕೋಡಿ ಹರಿದ ನಿಮಿತ್ತ ದೈವಸ್ಥರು, ಬಾಬುದಾರರು, ಗ್ರಾಮಸ್ಥರು ಸಂಪ್ರದಾಯದಂತೆ ಡಿಸೆಂಬರ್ 1ರಂದು ಅದ್ದೂರಿಯಾಗಿ ತೆಪ್ಪೋತ್ಸವವನ್ನು ಆಚರಿಸಲು ಒಮ್ಮತದ ನಿರ್ಧಾರಕ್ಕೆ ಬಂದರು. ನಂತರ ಎಲ್ಲರೂ ಸೇರಿ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ತೆರಳಿ ಸಾಮೂಹಿಕವಾಗಿ ಮಹಾಮಂಗಳಾರತಿ ನೆರವೇರಿಸಿ ದೇವರ ಮುಂದೆ ತೆಪ್ಪೋತ್ಸವ ಆಚರಿಸುವ ಬಗ್ಗೆ ಸಂಕಲ್ಪ ಕೈಗೊಂಡರು.

ADVERTISEMENT

ಹಿರೇಕೆರೆ ಬಲಭಾಗದ ಕೋಡಿಮುಚ್ಚಿದ ಗ್ರಾಮಸ್ಥರು: ಹಿರೇಕೆರೆಗೆ ಎರಡು ಕೋಡಿಗಳಿದ್ದು, ಬಲಕೋಡಿಯು ಇಳಿಜಾರಿನಲ್ಲಿದೆ. ಕೆರೆ ತುಂಬಿದಾಗ ಬೇಗ ಕೋಡಿ ನೀರು ಹರಿಯುತ್ತದೆ. ಆದರೆ, ಎಡಭಾಗದ ಕೋಡಿಯು ಸ್ವಲ್ಪ ಎತ್ತರದಲ್ಲಿದ್ದು, ಅಲ್ಲಿ ಕೋಡಿ ಹರಿಯುತ್ತಿಲ್ಲ. ಇದನ್ನು ಮನಗಂಡ ಗ್ರಾಮಸ್ಥರು ಕೆರೆಯ ಬಲಕೋಡಿಯಲ್ಲಿ ಹರಿಯುತ್ತಿದ್ದ ನೀರನ್ನು ಮಣ್ಣು ಮತ್ತು ಒಡ್ಡಿನಿಂದ ಅಡ್ಡಹಾಕಿ ನಿಲ್ಲಿಸಿದರು. ಇದರಿಂದ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಾಗಿ ಎಡಭಾಗದ ಕೋಡಿಯಲ್ಲೂ ನೀರು ಹರಿಯುತ್ತದೆ. ಆಗ ಸಂಪ್ರದಾಯದಂತೆ ತೆಪ್ಪೋತ್ಸವ ಆಚರಿಸಲು ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.