ADVERTISEMENT

ಮ್ಯಾಸಬೇಡ ಸಂಸ್ಕೃತಿಯ ದೇವರ ದನಗಳ ಹಬ್ಬ

ಬುಡಕಟ್ಟು ಜನಾಂಗಕ್ಕೆ ಸಾಂಸ್ಕೃತಿಕ ನಾಯಕರಿಗೆ ಪೂಜೆ

ಶಿವಗಂಗಾ ಚಿತ್ತಯ್ಯ
Published 7 ನವೆಂಬರ್ 2021, 4:15 IST
Last Updated 7 ನವೆಂಬರ್ 2021, 4:15 IST
ಚಳ್ಳಕೆರೆ ತಾಲ್ಲೂಕಿನ ಬೊಮ್ಮದೇವರಹಟ್ಟಿ ಗ್ರಾಮದ ಬಳಿ ನಡೆದ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ದೇವರದನಗಳ ಹಬ್ಬ ನಡೆಯಿತು
ಚಳ್ಳಕೆರೆ ತಾಲ್ಲೂಕಿನ ಬೊಮ್ಮದೇವರಹಟ್ಟಿ ಗ್ರಾಮದ ಬಳಿ ನಡೆದ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ದೇವರದನಗಳ ಹಬ್ಬ ನಡೆಯಿತು   

ಬೊಮ್ಮದೇವರಹಟ್ಟಿ (ಚಳ್ಳಕೆರೆ): ದೀಪಾವಳಿಯ ಪ್ರಯುಕ್ತ ತಾಲ್ಲೂಕಿನ ನನ್ನಿವಾಳ ಕಟ್ಟೆಮನೆ ವ್ಯಾಪ್ತಿಯ ಬೊಮ್ಮದೇವರಹಟ್ಟಿ ಗ್ರಾಮದಲ್ಲಿ ಶುಕ್ರವಾರ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ದೇವರ ದನಗಳ ಹಬ್ಬ ವಿಜೃಂಭಣೆಯಿಂದ ಜರುಗಿತು.

ಈ ಭಾಗದ ಜನರು ಸಮುದಾಯದ ಒಳತಿಗೆ ಹಾಗೂ ಪಶುಸಂಪತ್ತಿನ ರಕ್ಷಣೆಗಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿ ಬುಡಕಟ್ಟು ಜನಾಂಗಕ್ಕೆ ಸಾಂಸ್ಕೃತಿಕ ಅನನ್ಯತೆಯನ್ನು ತಂದುಕೊಟ್ಟ ಗಾದ್ರಿಪಾನಾಯಕ, ಜಗಲೂರು ಪಾಪನಾಯಕ, ಯರಗಂಟನಾಯಕ, ದಡ್ಡಿಸೂರನಾಯಕ, ಬಂಗಾರದೇವರು, ಓಬಳದೇವರು, ಬೋಸೆದೇವರು ಮುಂತಾದ ವೀರರನ್ನೇ ಮನೆದೇವರನ್ನಾಗಿ ಮಾಡಿಕೊಂಡು ಹಟ್ಟಿಯಲ್ಲಿ ಪ್ರತ್ಯೇಕ ಪೌಳಿಗಳನ್ನು ನಿರ್ಮಿಸಿಕೊಂಡು ಆರಾಧಿಸುತ್ತ ಬಂದಿದ್ದಾರೆ.

ಆಯಾ ದೇವರು ಇರುವ ಜಾಗದಲ್ಲಿ ದೀಪಾವಳಿಯಲ್ಲಿ ದೇವರ ದನಗಳ ಗೂಡಿನ ವಿಶಿಷ್ಟ ಆಚರಣೆ, ಹಬ್ಬ, ಜಾತ್ರೆ, ಉತ್ಸವಗಳನ್ನು ಮಾಡಿ ಸಂಭ್ರಮವನ್ನು ಆಚರಿಸುತ್ತಾರೆ.ದೇವರ ಕಾರ್ಯಕ್ಕೆ ಹೊರಡುವಾಗ ಕಿಲಾರಿಗಳು, ದೇವರ ಎತ್ತುಗಳು ಹಾಗೂ ಕಟ್ಟೆಮನೆಯ ದೊರೆ, ಸಮುದಾಯದ ಮುಖಂಡರನ್ನು ನೆಡೆಮುಡಿಯ ಮೇಲೆ ಇಂದಿಗೂ ಕರೆದುಕೊಂಡು ಹೋಗುವ ಪದ್ಧತಿ ಇದೆ.

ADVERTISEMENT

ಬಂದ್ರೆ, ತುಗ್ಗಲಿ, ಎಕ್ಕೆ, ಕಾರೆ ಮತ್ತು ತಂಗಟಿ ಹಸಿರು ಸೊಪ್ಪಿನಿಂದ ಆಯಾ ದೈವಗಳ ಹೆಸರಿನಲ್ಲಿ ಅರಣ್ಯ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ ದೈವಗಳ ಹೆಸರಿನ ಗುಡ್ಲು (ಪದಿ) ಗಳಿಗೆ ಚೆಂಡುಹೂವು ಹಾಗೂ ಸೇವಂತಿಗೆ ಹೂವುಗಳಿಂದ ಅಲಂಕಾರ ಮಾಡಿರುತ್ತಾರೆ.

ದನಗಳ ಹಬ್ಬದ ಬೆಳಿಗ್ಗೆ ಕಿಲಾರಿಗಳು, ಆಯಾ ದೇವರ ಗುಡ್ಲು ಬಳಿ ಮುತ್ತೇಗಾರು ಎತ್ತುಗಳು, ಬೊಮ್ಮದೇವರು, ಬಂಗಾರು ದೇವರು, ಗಾದ್ರಿದೇವರು, ಓಬಳದೇವರ ಎತ್ತುಗಳನ್ನು ಕ್ರಮವಾಗಿ ಉತ್ತರ-ದಕ್ಷಿಣವಾಗಿ ಮೂರು ಬಾರಿ (ಮೆರೆಸು) ಓಡಿಸುತ್ತಾರೆ.

ನಂತರ ಬೆಲ್ಲ, ಮಂಡಕ್ಕಿ, ಬಾಳೆಹಣ್ಣು, ಹೂವು ಬೆರೆಸಿದ ಚೂರುಬೆಲ್ಲವನ್ನು ಭಕ್ತರು ದೇವರ ಎತ್ತುಗಳ ಮೇಲೆ ಎಸೆದು ಆ ದನಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ.
ಪ್ರತಿ ಪೌಳಿ ಅಥವಾ ಗುಡ್ಲು (ಪದಿ)ಯ ಮುಂಭಾಗದಲ್ಲಿ ಕರಿಕಂಬಳಿ ಜಾಡಿ ಹಾಸಿ ಅದಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ತೆಂಗಿನಕಾಯಿ ಒಡೆದು ಬಾಳೆಹಣ್ಣಿನ ರಾಶಿ ಹಾಕುತ್ತಾರೆ. ನಂತರ ಈ ಹಣ್ಣು ಮತ್ತು ಕಾಯಿಯನ್ನು ಎಲ್ಲಾ ಭಕ್ತರಿಗೆ ಪ್ರಸಾದವಾಗಿ ಹಂಚುತ್ತಾರೆ.

‘ಒಲೆಗೆ ಕಾರೆ, ಜಂಬೆ ಕಟ್ಟಿಗೆ ಮತ್ತು ಒಣಗಿದ ಸಗಣಿ (ಕುರುಳು) ಸುಟ್ಟು ಕೆಂಡ ಮಾಡುತ್ತಾರೆ. ಇದನ್ನು (ಉದಿ) ಎಂದು ಕರೆಯುತ್ತಾರೆ. ದೈವಗಳಿಗೆ ದೂಪ ಹಾಕುತ್ತಾರೆ. ನಂತರ ಸುಟ್ಟ ಬೂದಿಯನ್ನು ಹಣೆಗೆ ಹಚ್ಚಿಕೊಳ್ಳುವ ಪರಂಪರೆ ಪೂರ್ವಿಕರಿಂದಲೂ ನಡೆದು ಬಂದಿದೆ’ ಎನ್ನುತ್ತಾರೆ ಸಮುದಾಯದ ಮುಖಂಡ ದೊರೆ ಬೈಯಣ್ಣ.

ಕಾಸು ಮೀಸಲು ಸೇವೆ: ದುಡ್ಡನ್ನು ವೀಳ್ಯದೆಲೆ ಮತ್ತು ಅಡಕೆಯಲ್ಲಿ ಇಟ್ಟು ದೇವರಿಗೆ ಕೊಡುವುದು. ಅದು ಪೂಜಾರಿಗಳಿಗೆ ಅಥವಾ ದಾಸಯ್ಯಗಳಿಗೆ ಸಲ್ಲಬೇಕು. ಒಲೆ, ಮಣ್ಣಿನ ಮಡಿಕೆ ಸ್ವಚ್ಛ ಮಾಡಿಕೊಂಡು ಬಾಯಿಗೆ ಬಟ್ಟೆ ಕಟ್ಟಿಕೊಂಡು ಹಾಲನ್ನು ಕರೆದು ಕಾಯಿಸಿ ಎಪ್ಪು ಹಾಕಿ ಅದರಿಂದ ಬೆಣ್ಣೆ ಮತ್ತು ತುಪ್ಪದ ಮೀಸಲು ಕೊಟ್ಟು ಹಬ್ಬದ ಆಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸುತ್ತಾರೆ.
ವರವಿನವರಹಟ್ಟಿ, ಪೆತ್ತಮ್ಮನವರಹಟ್ಟಿ, ಬಂಗಾರದೇವರಹಟ್ಟಿ, ಕರೆಕಟ್ಲಹಟ್ಟಿ, ಗಡ್ದಾರಹಟ್ಟಿ, ಬಂಡೆಹಟ್ಟಿ, ಬೊಮ್ಮದೇವರಹಟ್ಟಿ, ಪೇಲರಹಟ್ಟಿ, ಕುರಿನಿಂಗಯ್ಯನಹಟ್ಟಿ ಸೇರಿ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ 20ಕ್ಕೂ ಹೆಚ್ಚು ಮ್ಯಾಸಬೇಡ ಸಮುದಾಯದ ಹಟ್ಟಿಗಳಿಂದ ನೂರಾರು ಜನರು ದನಗಳ ಹಬ್ಬದಲ್ಲಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.