ಸಿರಿಗೆರೆ: ‘ಸ್ವಾತಂತ್ರ್ಯದ ಪೂರ್ವದಲ್ಲಿ ದೇಶದ ಮೇಲೆ ಕಾರ್ಮೋಡಗಳು ಆವರಿಸಿದ್ದವು. ದೇಶಾಭಿಮಾನಿಗಳಾದ ಮಹಾತ್ಮ ಗಾಂಧಿ ಮತ್ತು ಅವರ ಸಹಚರರ ಹೋರಾಟದ ಫಲವಾಗಿ ದೇಶದಲ್ಲಿ ಸ್ವಾತಂತ್ರ್ಯದ ಬೆಳಕು ಬಂತು’ ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಇಲ್ಲಿಯ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಆಶ್ರಯದ ಶಾಲಾ ಕಾಲೇಜುಗಳು ಸಂಯುಕ್ತವಾಗಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮಾತನಾಡಿದರು.
‘ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಹಲವು ಹಿರಿಯರ ಬಲಿದಾನಗೈದಿದ್ದಾರೆ. ಆ ಕಾಲಘಟ್ಟದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಒಬ್ಬೊಬ್ಬರದ್ದು ಒಂದೊಂದು ಇತಿಹಾಸ. ಅವರ ಬಲಿದಾನ, ಹೋರಾಟದ ಕಥೆಗಳು ಭಾರತೀಯರ ಮೈನವಿರೇಳಿಸುತ್ತವೆ’ ಎಂದರು.
‘ಸ್ವಾತಂತ್ರ್ಯ ದೊರಕಿಸಿಕೊಡಲು ಭಾರತೀಯರ ಮೇಲೆ ಗುಂಡುಗಳ ಸುರಿಮಳೆಯೇ ನಡೆದಿದೆ. ಆ ನೆನಪುಗಳನ್ನು ಇಟ್ಟುಕೊಂಡು ಸ್ವಾತಂತ್ರ್ಯವನ್ನು ಅನುಭವಿಸಬೇಕು’ ಎಂದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ದಾವಣಗೆರೆ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ವೆಂಕಟರಾವ್ ಎಂ. ಪಲಾಟ ಉಪನ್ಯಾಸ ನೀಡಿದರು. ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಎಸ್. ಜತ್ತಿ, ಶಾಲಾ ಕಾಲೇಜುಗಳ ಮುಖ್ಯಸ್ಥರು ಭಾಗಿಯಾಗಿದ್ದರು. ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಸಂಸ್ಕೃತದಲ್ಲಿ ಭಾಷಣ ಮಾಡಿದರು. ಶಿಕ್ಷಕ ಬಿ.ಎಸ್. ಮರುಳಸಿದ್ಧಯ್ಯ ನಿರೂಪಿಸಿದರು.
ಶಾಲಾ ಕಾಲೇಜುಗಳ ಎನ್.ಸಿ.ಸಿ. ಸೇವಾದಳ, ಎನ್.ಎಸ್.ಎಸ್. ಬ್ಯಾಂಡ್ ವಿಭಾಗಗಳ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.