ADVERTISEMENT

ಚಿತ್ರದುರ್ಗ: ‘ಕಾಸಿನಸರ’ ಸಿನಿಮಾ 3ರಂದು ತೆರೆಗೆ

ಚಿತ್ರ ನಿರ್ದೇಶಕ ಎನ್‌.ಆರ್‌. ನಂಜುಂಡೇಗೌಡ ಮಾಹಿತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 5:11 IST
Last Updated 25 ಫೆಬ್ರುವರಿ 2023, 5:11 IST
ವಿಜಯರಾಘವೇಂದ್ರ, ಹರ್ಷಿಕಾ ಪೂಣಚ್ಚ
ವಿಜಯರಾಘವೇಂದ್ರ, ಹರ್ಷಿಕಾ ಪೂಣಚ್ಚ   

ಚಿತ್ರದುರ್ಗ: ಕೃಷಿ ಸಮಸ್ಯೆ, ಬಿಕ್ಕಟ್ಟುಗಳನ್ನು ಕೇಂದ್ರೀಕರಿಸಿ ರೂಪಿಸಿದ ಗ್ರಾಮೀಣ ಸೊಗಡಿನ ‘ಕಾಸಿನಸರ’ ಸಿನಿಮಾ ಮಾರ್ಚ್‌ 3ರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ಎನ್‌.ಆರ್‌.ನಂಜುಂಡೇಗೌಡ ತಿಳಿಸಿದರು.

‘ನಗರೀಕರಣ ಹಾಗೂ ಕೈಗಾರಿಕೀಕರಣದಿಂದ ಗ್ರಾಮೀಣ ಪ್ರದೇಶ ಹಾಳಾಗಿದೆ. ಸಂದಿಗ್ದ ಸ್ಥಿತಿಯಲ್ಲಿ ನಾವು ಇದ್ದೇವೆ. ಆತಂಕ, ಅಭದ್ರತೆ, ಅಸಂತೋಷ, ಅತೃಪ್ತಿ ಜಗತ್ತನ್ನು ಆವರಿಸಿದೆ. ಜನರು ಕೃಷಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೃಷಿ ದೊಡ್ಡ ಬಿಕ್ಕಟ್ಟಿಗೆ ಸಿಲುಕಿದೆ. ರಾಸಾಯನಿಕ ಬಳಕೆ ಹೆಚ್ಚಾಗಿದ್ದು, ಭೂಮಿ ವಿಷವಾಗುತ್ತಿದೆ. ಆಹಾರ ಧಾನ್ಯದ ಮೂಲ ತಳಿಗಳು ನಾಶವಾಗಿವೆ. ಅನಾರೋಗ್ಯಕರ ವಾತಾವರಣ ನಿರ್ಮಾಣವಾಗಿದೆ. ಆಹಾರ ಉತ್ಪಾದನೆಯ ಕಡೆ ಗಮನ
ಹರಿಸದೇ ಇದ್ದರೆ ದೊಡ್ಡ ಸಮಸ್ಯೆಗೆ ಸಿಲುಕಲಿದ್ದೇವೆ. ಇಂತಹ ಸಾಮಾಜಿಕ ಜವಾಬ್ದಾರಿಯಿಂದ ಸಿನಿಮಾ ನಿರ್ಮಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಸಾಹಿತಿ ಎಸ್‌.ಜಿ.ಸಿದ್ದರಾಮಯ್ಯ ಸಂಭಾಷಣೆ ಬರೆದಿದ್ದಾರೆ. ಶ್ರೀಧರ್‌ ವಿ.ಸಂಭ್ರಮ್‌ ಸಂಗೀತ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಎಚ್‌.ಸಿ.ವೇಣು ಅವರ ಛಾಯಾಗ್ರಹಣ ಅತ್ಯುತ್ತಮವಾಗಿದೆ. ರಾಮನಗರ, ಚನ್ನಪಟ್ಟಣ, ದೊಡ್ಡಬಳ್ಳಾಪುರ ಸೇರಿ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದೆ’ ಎಂದು ಹೇಳಿದರು.

ಚಿತ್ರ ನಿರ್ಮಾಪಕ ಈ.ದೊಡ್ಡನಾಗಯ್ಯ, ನಟ ನೀನಾಸಂ ಅಶ್ವತ್ಥ್‌, ರೈತ ಸಂಘದ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ ಇದ್ದರು.

**

ಮನೆ, ಮನಸು, ಊರು, ಅಹಾರ ಚೆನ್ನಾಗಿರಬೇಕಾದರೆ ಭೂಮಿ ಅತ್ಯುತ್ತಮವಾಗಿ ಇರಬೇಕು. ಮಣ್ಣಿನ ಸೊಗಡಿನ ಚಿತ್ರ ಭಾವನಾತ್ಮಕ ಸೊಗಡು ಹೊಂದಿದೆ.

-ವಿಜಯರಾಘವೇಂದ್ರ, ನಟ

ಸಿನಿಮಾದಲ್ಲಿ ಕೃಷಿಯ ಬಿಕ್ಕಟ್ಟು ಅನಾವರಣ ಮಾಡಲಾಗಿದೆ. ಚಿತ್ರ ಸಿನಿಮಾಗೆ ಮಾತ್ರ ಸೀಮಿತವಾಗಿಲ್ಲ. ಸಂದೇಶವನ್ನು ನೀಡುತ್ತಿದೆ.

-ಹರ್ಷಿಕಾ ಪೂಣಚ್ಚ, ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.