ADVERTISEMENT

ರಂಗ ಕಲಾವಿದ ಜಿ.ಡಿ.ತಿಮ್ಮಯ್ಯ ಮುಡಿಗೇರಿದ ‘ಚುಂಚಶ್ರೀ’ ಗರಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:56 IST
Last Updated 28 ಸೆಪ್ಟೆಂಬರ್ 2025, 5:56 IST
ಆದಿಚುಂಚನಗಿರಿಯಲ್ಲಿ ಈಚೆಗೆ ಚುಂಚುಶ್ರೀ ಪ್ರಶಸ್ತಿಗೆ ಭಾಜರಾದ ರಂಗ ಕಲಾವಿದ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ (ಎಡದಿಂದ ಮೊದಲನೆಯವರು)
ಆದಿಚುಂಚನಗಿರಿಯಲ್ಲಿ ಈಚೆಗೆ ಚುಂಚುಶ್ರೀ ಪ್ರಶಸ್ತಿಗೆ ಭಾಜರಾದ ರಂಗ ಕಲಾವಿದ ಹರಿಯಬ್ಬೆ ಜಿ.ಡಿ.ತಿಮ್ಮಯ್ಯ (ಎಡದಿಂದ ಮೊದಲನೆಯವರು)   

ಧರ್ಮಪುರ: ಹರಿಯಬ್ಬೆ ಜಿ.ಡಿ.ತಿಮ್ಮಯ್ಯ (89) ಎಂದರೆ ರಂಗಾಸಕ್ತರಿಗೆ ಪರಿಚಿತ ಹೆಸರು. ರಂಗಸಂಗೀತ, ನಿರ್ದೇಶನ, ಹಾಡುಗಾರಿಕೆ ಹಾಗೂ ರಂಗಸಂಘಟಕರಾಗಿ ಗುರುತಿಸಿಕೊಂಡಿರುವ ಇವರು, ಈಚೆಗೆ ಆದಿಚುಂಚನಗಿರಿಯ ‘ಚುಂಚಶ್ರೀ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸೋದರಮಾವ ಬಜ್ಜೇರ ಹನುಮಂತಯ್ಯನವರ ಒತ್ತಾಸೆಯಿಂದ ಶಾಲಾ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟು, ಕಲೆಗೆ ಮಾರು ಹೋದರು. ಇವರ ಸಂಗೀತದ ಗೀಳು ಕಂಡ ಶಿಕ್ಷಕ ತಿಪ್ಪೇಸ್ವಾಮಿ ಹಾರ್ಮೋನಿಯಂ ನುಡಿಸುವುದನ್ನು ಕಲಿಸಿಕೊಟ್ಟರು. ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಪಾಸ್‌ ಮಾಡಿದ್ದ ಇವರು ತಮ್ಮ 7ನೇ ವಯಸ್ಸಿನಲ್ಲಿದ್ದಾಗಲೇ ತಿಪ್ಪೇಸ್ವಾಮಿ ಅವರ ನಿರ್ದೇಶನದ ನಾಟಕದಲ್ಲಿ ಬಾಲ ನಟನಾಗಿ ರಂಗಭೂಮಿ ಪ್ರವೇಶಿಸಿದರು.

1936ರಲ್ಲಿ ಹರಿಯಬ್ಬೆಯಲ್ಲಿ ಜನಿಸಿದ ಇವರು, 1960ರಲ್ಲಿ ಮಾಸ್ಟರ್ ಹಿರಣ್ಣಯ್ಯನವರ ‘ಪಂಗನಾಮ’ ನಾಟಕದಿಂದ ಪೂರ್ಣ ಪ್ರಮಾಣದ ರಂಗ ಕಲಾವಿದರಾಗಿ ರೂಪಗೊಂಡರು. 900ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ನೀಡಿದ ಗರಿಮೆ ಹೊಂದಿದ್ದಾರೆ. ‘ವಿಜಯನಗರ ಪತನ’, ‘ಟಿಪ್ಪುಸುಲ್ತಾನ್’, ‘ಕುರುಕ್ಷೇತ್ರ’, ‘ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ’, ‘ಕೊಳಾಳ ಕೆಂಚಾವಧೂತ’, ‘ಭಸ್ಮಾಸುರ’, ‘ಭಕ್ತಸುದನ್ವ’ ಮುಂತಾದ ನಾಟಕಗಳಲ್ಲಿ ಉತ್ತಮ ಅಭಿನಯ ನೀಡುವುದರ ಜೊತೆಗೆ ಉತ್ತಮವಾಗಿ ಹಾಡಿದ ಹೆಗ್ಗಳಿಕೆ ಇವರದ್ದಾಗಿದೆ.

ADVERTISEMENT

ಕೆಂಚಾವದೂತ ಧ್ವನಿ ಸುರುಳಿ, ಆದಿಚುಂಚನಗಿರಿ ಹಾಡುಗಳ ಧ್ವನಿಮುದ್ರಣ, ತಾಯಿ ಮುದ್ದಮ್ಮ ಧ್ವನಿಸುರುಳಿ, ಕಬೀರಾನಂದ ಮಠದಲ್ಲಿ ಆರೂಢ ಮೇರು ನಾಟಕ, ಸಿದ್ಧಾರೂಢರ ಕುರಿತು ಭಕ್ತಿಗೀತೆಗಳು, ಸಾಕ್ಷರತಾ ಗೀತೆಗಳು, ಜನಜಾಗೃತಿ ಗೀತೆಗಳನ್ನು ರಚಿಸಿ ಹಾಡಿದ್ದಾರೆ. ಇವರ ‘ಕವನ ಕುಸುಮ’, ‘ಕಾವ್ಯ ದೇಗುಲ’ ಕವನ ಸಂಕಲನಗಳು 2014ರಲ್ಲಿ ಪ್ರಕಟಗೊಂಡಿವೆ. 1986ರಲ್ಲಿ ಹವ್ಯಾಸಿ ಕಲಾವಿದರ ಶಾಂತಲಾ ಕನ್ನಡ ಲಲಿತಾ ಕಲಾ ಸಂಘವನ್ನು ಹರಿಯಬ್ಬೆಯಲ್ಲಿ ಸ್ಥಾಪಿಸಿ ಹಲವಾರು ತರಬೇತಿ ಶಿಬಿರಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ನೀಡುತ್ತಿದ್ದಾರೆ. ಮಾಜಿ ಶಾಸಕ ಬಿ.ಸಿ. ಪಾಟೀಲ್ ಅಭಿನಯನದ ‘ಕುರುಕ್ಷೇತ್ರ’ ನಾಟಕವನ್ನು ನಿರ್ದೇಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

1983ರಲ್ಲಿ ಏಕನಾಥೇಶ್ವರಿ ಸಂಗೀತ ಶಾಲೆಯ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 1986ರಲ್ಲಿ ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಚಾಣಕ್ಯ– ಚಂದ್ರಗುಪ್ತ ನಾಟಕ ನಿರ್ದೇಶನಕ್ಕೆ ಪ್ರಥಮ ಬಹುಮಾನ, 1998ರಲ್ಲಿ ಚಳ್ಳಕೆರೆಯಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮಕ್ಕೆ ಶಾಮಲಾ ಭಾವ ಅವರಿಂದ ಉಭಯ ಗಾನವಿಶಾರದ ಬಿರುದು, ಅದೇ ವರ್ಷ ದುರ್ಗೋತ್ಸವದಲ್ಲಿ ಪ್ರಶಸ್ತಿಗಳು ಸಂದಿವೆ.

2014ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕಲಾಮಣಿ, ಸಾಹಿತ್ಯ ಕಲಾಭೂಷಣ, ಕಲಾ ಕಂಠೀರವ ಬಿರುದುಗಳು ಬಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.