ADVERTISEMENT

ನಾಡಿನಲ್ಲಿ ರಕ್ತದ ಕಲೆ ಹೋಗಿ ರಂಗಕಲೆ ಹೆಚ್ಚಾಗಲಿ: ಸಚಿವ ಡಿ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 6:35 IST
Last Updated 8 ನವೆಂಬರ್ 2025, 6:35 IST
<div class="paragraphs"><p>ಸಾಣೇಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ ನೆರೆದ ಜನಸ್ತೋಮ</p></div>

ಸಾಣೇಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ ನೆರೆದ ಜನಸ್ತೋಮ

   

ಹೊಸದುರ್ಗ: ನಾಡಿನಲ್ಲಿ ರಕ್ತದ ಕಲೆ ಕಡಿಮೆಯಾಗಬೇಕೆಂದರೆ ರಂಗಕಲೆ ಹೆಚ್ಚಾಗಬೇಕು. ರಂಗಭೂಮಿಯಲ್ಲಿ ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಗಳು ಆಗಬೇಕು. ಈ ಕಾರ್ಯ ಸಾಣೇಹಳ್ಳಿ ಆಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಸಂತಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ನಾಟಕೋತ್ಸವ’ದ ಸಮಾರೋಪ ಸಮಾರಂಭದಲ್ಲಿ  ಮಾತನಾಡಿದರು.

ADVERTISEMENT

ಅರ್ಥಪೂರ್ಣವಾಗಿರುವಂತಹ ಮಠ ಸಾಣೇಹಳ್ಳಿ. ಶ್ರೀಗಳ ಜನಸೇವೆ, ರಂಗಭೂಮಿ ಆಸಕ್ತಿ ಮೆಚ್ಚುವಂಥದ್ದು. ನಾಟಕೋತ್ಸವವನ್ನು ನಾಡಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದಾರೆ. ನಾಟಕಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲಾವಿದರು ಬದುಕು ಕಟ್ಟಿಕೊಳ್ಳಲು ಹೋರಾಟ ಮಾಡಿದವರು, ಆ ಪಟ್ಟಿಯಲ್ಲಿ ಉಮಾಶ್ರೀಯವರೂ ಇದ್ದಾರೆ. ಕಲಾ ಸಂಘಕ್ಕೆ ಶಾಶ್ವತ ಅನುದಾನ ಕೊಡಬೇಕು. ರಂಗಭೂಮಿಯಲ್ಲಿ ಕಲಾವಿದರಿಗಾಗಿ ವರ್ಷಕ್ಕೆ ₹ 1 ಕೋಟಿ ವೆಚ್ಚ ಆಗುತ್ತಿದೆ. ನಿರಂತರವಾಗಿ ಅನುದಾನ ಬರುವಂತಾಗಲಿ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿ ಎಂದು ಜನಪ್ರತಿನಿಧಿಗಳಿಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದರು.

ಶಿವಕುಮಾರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಉಮಾಶ್ರೀ ಅವರು, ಪಂಡಿತಾರಾಧ್ಯ ಶ್ರೀಗಳು ರಂಗಭೂಮಿ ಹಾಗೂ ಕಲಾವಿದರನ್ನು ಗೌರವಿಸಿ, ಉತ್ತಮ ವಾತಾವರಣ ಕಲ್ಪಿಸಿದ್ದಾರೆ. ರಂಗಭೂಮಿಯಲ್ಲಿ ನನ್ನನ್ನು ಗುರುತಿಸಿ, ಪ್ರೋತ್ಸಾಹಿಸಿ, ತಿದ್ದಿ ತೀಡಿದ ನಿರ್ದೇಶಕರು, ಪ್ರೇಕ್ಷಕರಿಗೆ ಧನ್ಯವಾದಗಳು. ಪ್ರಶಸ್ತಿಗಳು ಹೆಚ್ಚಾದಷ್ಟು ಸಮಾಜಮುಖಿ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂದರು.

ಸಾಣೇಹಳ್ಳಿ ಶ್ರೀಗಳು ಜನರಿಗೆ ನೈತಿಕತೆ, ಸಂಸ್ಕಾರ, ಉತ್ತಮ ಮೌಲ್ಯಗಳನ್ನು ನೀಡುತ್ತಾ, ಜನರನ್ನು ಸರಿದಾರಿಗೆ ಕೊಂಡೊಯ್ಯುತ್ತಿದ್ದಾರೆ.  ಯಾವುದೇ ತಡೆಗೂ ಜಗ್ಗದೆ, ಜನರಿಗೆ ಜಾಗೃತಿ ಮೂಡಿಸುತ್ತಾ, ಎಲ್ಲಾ ಕಾರ್ಯಗಳಲ್ಲೂ ಯಶಸ್ಸು ಕಂಡಿದ್ದಾರೆ ಶಾಸಕ ಬಿ. ಜಿ. ಗೋವಿಂದಪ್ಪ ತಿಳಿಸಿದರು.

ಈ ವೇಳೆ ರಂಗಕರ್ಮಿ ಶ್ರೀನಿವಾಸ್ ಕಪ್ಪಣ್ಣ, ಲೇಖಕ ಸಿದ್ದು ಯಾಪಲಪರವಿ, ಶಾಸಕರಾದ ಯು.ಬಿ. ಬಣಕಾರ್, ಬಿ.ಜಿ. ಗೋವಿಂದಪ್ಪ, ಟಿ. ರಘುಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಣ್ಣ ಸೇರಿದಂತೆ ಸುತ್ತಲಿನ ಗ್ರಾಮಸ್ಥರು, ಸಾಣೇಹಳ್ಳಿ ಗ್ರಾಮಸ್ಥರು, ಶ್ರೀಮಠದ ಸಿಬ್ಬಂದಿ ಹಾಗೂ ಭಕ್ತರಿದ್ದರು.

ಹೊಸದುರ್ಗದ ಸಾಣೇಹಳ್ಳಿಯಲ್ಲಿ ಗುರುಪಾದೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು
ಹೊಸದುರ್ಗದ ಸಾಣೇಹಳ್ಳಿಯಲ್ಲಿ ಗುರುಪಾದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು

‘ಎಲ್ಲಾ ವರ್ಗದ ಕಲಾವಿದರಿಗೆ ಪ್ರೋತ್ಸಾಹ’

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೈಚಾರಿಕ ಚಿಂತನೆಯುಳ್ಳ ಸಾವಿರಾರು ನಾಟಕಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಜ್ಯಾತಿ ವರ್ಗ ರಹಿತವಾಗಿ ಎಲ್ಲಾ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದ್ದಾರೆ. ಸಾವಿರಾರು ಕಲಾವಿದರನ್ನು ಸೃಷ್ಟಿಸಿದ್ದಾರೆ. ನಾಟಕಗಳ ಮೂಲಕ ಸಮಾಜದಲ್ಲಿ ಹಲವು ಮಹತ್ತರ ಬದಲಾವಣೆಗೆ ಕಾರಣರಾಗಿದ್ದಾರೆ. ನಾಟಕಗಳಿಂದ ಬದಲಾದಂತಹ ಜನರನ್ನು ಸಹ ಪ್ರತ್ಯಕ್ಷವಾಗಿ ಕಂಡಿದ್ದೇವೆ. ಯಾವುದೇ ಟೀಕೆ ಟಿಪ್ಪಣಿಗಳಿಗೆ ಜಗ್ಗದೆ ಹಲವು ಮಹತ್ತರ ಅಂಶಗಳನ್ನು ರೂಢಿಸಿಕೊಂಡು ಯಶಸ್ವಿಯಾಗಿದ್ದಾರೆ. ಪಂಡಿತಾರಾಧ್ಯ ಶ್ರೀಗಳ ಕಾರ್ಯ ಮೆಚ್ಚುವಂಥದ್ದು ಎಂದು  ದೇವಾಂಗ ಸಮುದಾಯದ ಜಿಲ್ಲಾ ಘಟಕದ ಅಧ್ಯಕ್ಷ ಗೋ. ತಿಪ್ಪೇಶ್ ತಿಳಿಸಿದರು.

ಶಿವಸಂಚಾರ ಕಲಾವಿದರ ನಿಧಿಗೆ ₹30 ಲಕ್ಷ ದೇಣಿಗೆ

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ₹ 3 ಕೋಟಿ ನಿಧಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ಈ ಕಾರ್ಯಕ್ಕೆ ಸಚಿವ ಡಿ. ಸುಧಾಕರ್, ಶಾಸಕ ಬಿ. ಜಿ ಗೋವಿಂದಪ್ಪ, ಶಾಸಕ ಟಿ. ರಘುಮೂರ್ತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ನಟಿ ಉಮಾಶ್ರೀ ತಲಾ ₹5 ಲಕ್ಷ ಮೊತ್ತವನ್ನು ಡಿಸಿಸಿ ಬ್ಯಾಂಕ್ ಮೂಲಕ ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.

ಯುವಕ–ಯುವತಿಯರಿಗೆ ಸಂಸ್ಕಾರ

ಡಿ. 27 28 ಮತ್ತು 29 ರಂದು 35 ವರ್ಷದೊಳಗಿನ ಯುವಕ ಯುವತಿಯರಿಗೆ ಲಿಂಗಾಯತ ಧರ್ಮದ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಒಂದು ಕಮ್ಮಟ ಆಗಲಿದ್ದು ಎಲ್ಲರಿಗೂ ಸಂಸ್ಕಾರ ನೀಡಲಾಗುವುದು. ನೋಂದಣಿ ಶುಲ್ಕ ₹ 200 ಇದೆ. ಮೊದಲು ನೋಂದಣಿ ಆದವರಿಗೆ ಆದ್ಯತೆ. ಈ ಕಾರ್ಯ ಯಶಸ್ವಿಯಾದರೆ 12ನೇ ಶತಮಾನದವರ ಕನಸು ನನಸಾದಂತೆ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.