ADVERTISEMENT

ಚಿತ್ರದುರ್ಗ| ಇತರೆ ಗೊಲ್ಲರಿಗೆ ಟಿಕೆಟ್ ನೀಡಿದರೆ ಬೆಂಬಲವಿಲ್ಲ: ದೊಡ್ಡಮಲ್ಲಯ್ಯ

ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ಅಧ್ಯಕ್ಷ ದೊಡ್ಡಮಲ್ಲಯ್ಯ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:24 IST
Last Updated 6 ಫೆಬ್ರುವರಿ 2023, 5:24 IST
ಡಾ.ದೊಡ್ಡಮಲ್ಲಯ್ಯ
ಡಾ.ದೊಡ್ಡಮಲ್ಲಯ್ಯ   

ಚಿತ್ರದುರ್ಗ: ‘ಚಿತ್ರದುರ್ಗದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಡುಗೊಲ್ಲರು‌ ನಿರ್ಣಾಯಕರಾಗಿದ್ದಾರೆ. ಅದರಲ್ಲೂ ಹಿರಿಯೂರಿನಲ್ಲಿ ನಮ್ಮವರು ಗೆಲ್ಲುವ ಅವಕಾಶ ಹೆಚ್ಚಾಗಿದೆ. ಆದ್ದರಿಂದ ಯಾವುದೇ ಪಕ್ಷ ಇತರೆ ಗೊಲ್ಲರಿಗೆ ಟಿಕೆಟ್ ನೀಡಿದರೆ ನಾವು ಬೆಂಬಲ ನೀಡುವುದಿಲ್ಲ’ ಎಂದು‌ ರಾಜ್ಯ ಕಾಡುಗೊಲ್ಲ ಬುಡಕಟ್ಟು ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ದೊಡ್ಡಮಲ್ಲಯ್ಯ ಸ್ಪಷ್ಟಪಡಿಸಿದರು.

‘ಹಿರಿಯೂರು, ಶಿರಾ ಸೇರಿ ಕಾಡುಗೊಲ್ಲರ ಸಂಖ್ಯೆ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಕಾಡುಗೊಲ್ಲ ಅಭ್ಯರ್ಥಿಗಳಿಗೆ ಟಿಕೆಟ್‌ ಅಂತಿಮಗೊಳಿಸಿ ಕಣಕ್ಕಿಳಿಸಬೇಕು. ಈಗಾಗಲೇ ಸಮುದಾಯದವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದು, ಪಕ್ಷವು ಕಾಡುಗೊಲ್ಲ ಅಭ್ಯರ್ಥಿಗೇ ಟಿಕೆಟ್‌ ನೀಡಬೇಕು’ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಚಿತ್ರದುರ್ಗ ಮತ್ತು ತುಮಕೂರು ಭಾಗದಲ್ಲಿ ಕಾಡುಗೊಲ್ಲರು ಪ್ರಧಾನವಾಗಿದ್ದಾರೆ. ಚಿತ್ರದುರ್ಗದಲ್ಲಿ ಮೂರನೇ, ತುಮಕೂರಿನಲ್ಲಿ 5ನೇ ಅತೀ ದೊಡ್ಡ ಸಮುದಾಯವಾಗಿದೆ. ತುಮಕೂರಿನ 11 ಕ್ಷೇತ್ರದಗಳ ಪೈಕಿ 8ರಲ್ಲಿ ಕಾಡುಗೊಲ್ಲರು ನಿರ್ಣಾಯಕರಾಗಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸಮುದಾಯದ ಯೋಗ್ಯ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು’ ಎಂದು ಅವರು ಮನವಿ ಮಾಡಿದರು.

ADVERTISEMENT

‘ರಾಜಕೀಯ ಪ್ರಾತಿನಿಧ್ಯವಿಲ್ಲದೆ ಕಾಡುಗೊಲ್ಲರು ಇಂದಿಗೂ ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದಾರೆ. ಎಲ್ಲ ಪಕ್ಷಗಳು ಚುನಾವಣೆ ಸಮಯದಲ್ಲಿ ನಮ್ಮನ್ನು ಬಳಸಿಕೊಂಡು ಬಳಿಕ ಮರೆಯುತ್ತಾರೆ. ಕಾಡುಗೊಲ್ಲರನ್ನೂ ಈವರೆಗೆ ಅಲೆಮಾರಿ ಪಟ್ಟಿಗೆ ಸೇರಿಸಿಲ್ಲ. ಅಷ್ಟೇ ಅಲ್ಲದೆ ಜಾತಿ ದೃಢೀಕರಣ ಸಹ ನೀಡುತ್ತಿಲ್ಲ. ಈ ವಿಚಾರದಲ್ಲಿ ತಹಶೀಲ್ದಾರ್‌ಗಳು ಜವಾಬ್ದಾರಿಯಿಂದ ವ್ಯವಹರಿಸುತ್ತಿಲ್ಲ. ಅವರು ದಾಖಲೆಗಳನ್ನು ಸಂಗ್ರಹಿಸಬೇಕು’ ಎಂದು ಆಗ್ರಹಿಸಿದರು.

‘ಈವರೆಗೂ ಬಿಜೆಪಿಯಲ್ಲಿ ಕಾಡುಗೊಲ್ಲರಿಗೆ ಅವಕಾಶ ಸಿಕ್ಕಿಲ್ಲ. ಕಾಡುಗೊಲ್ಲರ ಅಭಿವೃದ್ಧಿ ನಿಗಮ ಘೋಷಣೆಯಾದರೂ ನೋಂದಣಿಯಾಗಿಲ್ಲ. ಮುಂದಿನ ತಿಂಗಳಲ್ಲಿ ಚುನಾವಣೆ ಇದ್ದು, ಈಗ ಅಧ್ಯಕ್ಷರನ್ನು ಮರು ನೇಮಕ ಮಾಡಲಾಗಿದೆ. ಜನಸಾಮಾನ್ಯರ ದಿಕ್ಕು ತಪ್ಪಿಸುವ ಕೆಲಸ ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಉಪಾಧ್ಯಕ್ಷ ಡಿ. ಈಶ್ವರಪ್ಪ, ಹಾರೊಗೆರೆ ಮಾರಣ್ಣ, ಚಿನ್ನಪ್ಪ, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.