ADVERTISEMENT

ಐತಿಹಾಸಿಕ ಧರ್ಮಪುರ ಕೆರೆಗೆ ಕಾಯಕಲ್ಪ

ನೂರು ವರ್ಷಗಳ ಹೋರಾಟಕ್ಕೆ ಸಂದ ಫಲ; ಭರದಿಂದ ಸಾಗಿದ ಕಾಮಗಾರಿ

ವಿ.ವೀರಣ್ಣ
Published 13 ಮೇ 2022, 2:37 IST
Last Updated 13 ಮೇ 2022, 2:37 IST
ಐತಿಹಾಸಿಕ ಧರ್ಮಪುರ ಕೆರೆ ಅಂಗಳದಲ್ಲಿ ಬಳ್ಳಾರಿ ಜಾಲಿ ಬೆಳೆದಿರುವುದು.
ಐತಿಹಾಸಿಕ ಧರ್ಮಪುರ ಕೆರೆ ಅಂಗಳದಲ್ಲಿ ಬಳ್ಳಾರಿ ಜಾಲಿ ಬೆಳೆದಿರುವುದು.   

ಧರ್ಮಪುರ: ಇಲ್ಲಿನ ಪುರಾಣ ಪ್ರಸಿದ್ಧ, ಐತಿಹಾಸಿಕ ಕೆರೆಗೆ ಈಗ ಕಾಯಕಲ್ಪದ ಭಾಗ್ಯ.

ಐತಿಹಾಸಿಕ ಧರ್ಮಪುರ ಕೆರೆಗೆ ಪೂರಕ ನಾಲೆ ಕಲ್ಪಿಸಬೇಕು ಎಂದು ಶುರು ಮಾಡಿದ ರೈತರ ಹೋರಾಟಕ್ಕೆ ನೂರು ವರ್ಷ ತುಂಬಿದ ಸಂದರ್ಭದಲ್ಲಿ ಕೆರೆಗೆ ನೀರು ಹರಿಸುವ ಕಾಮಗಾರಿ ಭೂಮಿಪೂಜೆಗೆ ಮುಖ್ಯಮಂತ್ರಿ ಬರುವ ನಿರೀಕ್ಷೆ ಇದೆ.

ಹೀಗಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆ ಏರಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.

ADVERTISEMENT

ಸತತ ನಲವತ್ತು ವರ್ಷಗಳಿಂದ ಬರಗಾಲದ ಬವಣೆಯಿಂದ ಬೇಸತ್ತಿದ್ದ ಹೋಬಳಿಯ ಜನರಲ್ಲಿ ಆಶಾಭಾವ ಮೂಡಿದೆ. ಒಂದು ಸಾವಿರ ಅಡಿಯವರೆಗೂ ಕೊಳವೆಬಾವಿ ಕೊರೆಸಿದರೂ ನೀರು ಸಿಗದ ಸಂದರ್ಭದಲ್ಲಿಹೋಬಳಿಯ ಏಳು ಕೆರೆಗಳಿಗೆ ಕುಡಿಯುವ ನೀರು ಯೋಜನೆಯ ಮೂಲಕ ನೀರು ಹರಿಸುವುದರಿಂದ ಅಂತರ್ಜಲ ಹೆಚ್ಚಿ ರೈತರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗಲಿದೆ.

ಧರ್ಮಪುರ ಕೆರೆಗೆ ನೀರುಣಿಸುವ ಕಾಯಕಕ್ಕೆ ಅನುಮೋದನೆ ದೊರೆತಿದ್ದು, ವೇದಾವತಿಗೆಅಡ್ಡಲಾಗಿ ನಿರ್ಮಾಣ
ಗೊಂಡಿರುವ ಹೊಸಹಳ್ಳಿ ಬ್ಯಾರೇಜ್‌ನಿಂದ ಪೈಪ್‌ಲೈನ್ ಮೂಲಕ ಧರ್ಮಪುರ ಕೆರೆಗೆ ನೀರು ಬರಲಿದೆ.

ಅಂದಾಜು ₹ 90 ಕೋಟಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಈ ಭಾಗದ ರೈತರಲ್ಲಿ ಸಂತಸ ಮೂಡಿದೆ. ಈಗಾಗಲೇ ₹ 40 ಕೋಟಿ ಬಿಡುಗಡೆಯಾಗಿದ್ದು, ಮುಖ್ಯಮಂತ್ರಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.

ಧರ್ಮಪುರ ಕೆರೆ ನೀರಿನ ಸಾಮರ್ಥ್ಯ 0.50 ಟಿಎಂಸಿ ಅಡಿ. 1100 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಸ್ವಾತಂತ್ರ್ಯಾಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿಯೇ ಪೂರಕ ನಾಲೆ ಪ್ರಸ್ತಾಪವಾಗಿದ್ದರೂ ಪೂರಕನಾಲೆಯ ಕನಸು ಕನಸಾಗಿಯೇ ಉಳಿದಿತ್ತು.ಸ್ವಾತಂತ್ರ್ಯಾನಂತರ ವೀರೇಂದ್ರಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ದಿವಂಗತ ಬಿ.ಎಲ್. ಗೌಡರು ಪೂರಕನಾಲೆಯ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಿ
ದ್ದರು.ಬದಲಾದ ರಾಜಕೀಯಸನ್ನಿವೇಶದಲ್ಲಿ ಪೂರಕ ನಾಲೆಯ ಕನಸು ಜೀವಂತವಾಗಿಯೇ ಉಳಿದಿತ್ತು. ಅದು ಈಗ ನೆರವೇರಿದೆ.

ಸ್ವಾತಂತ್ರ್ಯಪೂರ್ವದಲ್ಲಿಯೇ ಶುರುವಾದ ಹೋರಾಟಕ್ಕೆ ಸ್ವಾತಂತ್ರ್ಯಾನಂತರ 70 ವರ್ಷದ ಬಳಿಕ ಮಂಜೂರಾತಿ ಸಿಕ್ಕಿರುವುದು ಅತ್ಯಂತ ಚಾರಿತ್ರಿಕ ಘಟನೆ ಎನ್ನುತ್ತಾರೆ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಸವನಹಳ್ಳಿ ರಮೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.