ADVERTISEMENT

ಚಿತ್ರದುರ್ಗ | ರಸ್ತೆ ನಿಯಮ ಪಾಲನೆಯಿಂದ ಸುಗಮ ಸಂಚಾರ: ವೀರೇಂದ್ರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 7:25 IST
Last Updated 27 ಜನವರಿ 2026, 7:25 IST
ಮೇದೆಹಳ್ಳಿ ರಸ್ತೆಯ ಎಪಿಎಂಸಿ ಮಾರ್ಕೆಟ್ ಬಳಿ ನೂತನವಾಗಿ ಜೈ ಭಾರತ್ ವಾಣಿಜ್ಯ ಆಟೊ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿದರು 
ಮೇದೆಹಳ್ಳಿ ರಸ್ತೆಯ ಎಪಿಎಂಸಿ ಮಾರ್ಕೆಟ್ ಬಳಿ ನೂತನವಾಗಿ ಜೈ ಭಾರತ್ ವಾಣಿಜ್ಯ ಆಟೊ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಶಾಸಕ ಕೆ.ಸಿ.ವೀರೇಂದ್ರ ಮಾತನಾಡಿದರು    

ಚಿತ್ರದುರ್ಗ: ‘ಆಟೊ ಚಾಲಕರು ಟ್ರಾಫಿಕ್ ನಿಯಮಗಳನ್ನು ಪಾಲನೆ ಮಾಡಿದರೆ ಶೇ 90ರಷ್ಟು ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಬೀಳುತ್ತದೆ. ನಿಯಮವನ್ನು ಪಾಲನೆ ಮಾಡಿದರೆ ಸುಗಮ ಸಂಚಾರಕ್ಕೆ ಅವಕಾಶ ಕೊಟ್ಟಂತಾಗುತ್ತದೆ’ ಎಂದು ಶಾಸಕ ಕೆ.ಸಿ.ವೀರೇಂದ್ರ ಹೇಳಿದರು.

ನಗರದ ಮೆದೇಹಳ್ಳಿ ರಸ್ತೆಯ ಎಪಿಎಂಸಿ ಮಾರ್ಕೆಟ್ ಬಳಿ ಸೋಮವಾರ ನೂತನವಾಗಿ ಜೈ ಭಾರತ್ ವಾಣಿಜ್ಯ ಆಟೊ ನಿಲ್ದಾಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಯಾವ ಆಟೊ ಚಾಲಕರೂ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಳ್ಳಬಾರದು. ನಿಯಮಗಳ ವಿರುದ್ಧವಾಗಿ ಸಂಚರಿಸದೆ ಇನ್ನೊಬ್ಬರಿಗೆ ತೊಂದರೆ ಉಂಟಾಗುತ್ತದೆ. ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟು ಸಹಕಾರ ನೀಡಬೇಕು. ಆಟೊ ಚಾಲಕರು ಎಂದರೆ ಎಲ್ಲರೂ ಒಗ್ಗಟ್ಟಾಗಿರಬೇಕು. ನಗರದ ವಿವಿಧ ಕಡೆ ಆಟೊ ನಿಲ್ದಾಣ ಇರುವುದು ಸಹಜ. ಚಾಲಕರೆಲ್ಲರಲ್ಲೂ ನಾವೆಲ್ಲರೂ ಒಂದೇ ಎನ್ನುವ ಭ್ರಾತೃತ್ವ ಭಾವನೆ ಇರಬೇಕು’ ಎಂದರು.

ADVERTISEMENT

‘ಕಳೆದ ಕೆಲವು ತಿಂಗಳ ಹಿಂದಷ್ಟೇ ನಗರದ ಮಧ್ಯಭಾಗದಲ್ಲಿ ಆಟೊ ಚಾಲಕರೊಬ್ಬರು ಪೆಟ್ರೋಲ್ ಸುರಿದುಕೊಂಡು ತಮ್ಮ ಪ್ರಾಣ ಕಳೆದುಕೊಂಡರು. ಇದು ಅತ್ಯಂತ ವಿಷಾದನೀಯ ಸಂಗತಿಯಾಗಿದ್ದು, ತೀವ್ರ ನೋವು ಉಂಟು ಮಾಡಿತು. ಅವರ ಕುಟುಂಬ ಸದಸ್ಯರನ್ನು ನಾನು ಸಹ ಭೇಟಿ ಮಾಡಿ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತೇನೆ’ ಎಂದರು.

ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಮಾತನಾಡಿ, ‘ಚರಂಡಿಯ ಮೇಲೆ ಸ್ಲ್ಯಾಬ್‌ ಅಳವಡಿಕೆ ಮಾಡಿ ಯಾರಿಗೂ ತೊಂದರೆ ಆಗದಂತೆ ಆಟೊ ನಿಲ್ದಾಣವನ್ನು ಅತೀ ಶೀಘ್ರದಲ್ಲೇ ಮಾಡಿಕೊಡಲಾಗುವುದು. ಶೀಘ್ರವೇ ಇದು ಕಾರ್ಯರೂಪಕ್ಕೆ ಬರುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಜೊತೆಗೆ ಮಾತನಾಡುತ್ತೇನೆ. ಆಟೊ ಚಾಲಕರು ರಸ್ತೆ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸುಗಮ ಸಂಚಾರ ನಡೆಸಬೇಕು’ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್ ಪೀರ್, ಮುಖಂಡರಾದ ಮಂಜುನಾಥ್ ರೆಡ್ಡಿ, ಶಿವಲಿಂಗಪ್ಪ, ಅನೀಸ್, ಜೈ ಭಾರತ ವಾಣಿಜ್ಯ ಆಟೊ ನಿಲ್ದಾಣದ ಅಧ್ಯಕ್ಷರಾದ ಲಕ್ಷ್ಮಣ್ ನಾಯಕ್, ಉಪಾಧ್ಯಕ್ಷ ಸೈಯದ್, ನಾಗರಾಜ್, ಶಿವಕುಮಾರ್, ದೇವರಾಜ್, ನವೀನ್, ಇಬ್ರಾಹಿಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.