ಚಿತ್ರದುರ್ಗ: ಮಂಡ್ಯ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಹಿಷ್ಕಾರಕ್ಕೆ ಒಳಗಾಗಿದ್ದ ಲಿಂಗತ್ವ ಅಲ್ಪಸಂಖ್ಯಾತೆ ಅರುಂಧತಿ ಅವರು ತಾಲ್ಲೂಕಿನ ಭರಮಸಾಗರದಲ್ಲಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ತಾವು ಮಾತ್ರವಲ್ಲ, ತಮ್ಮಂತಿರುವ ಹಲವರಿಗೂ ದಾರಿ ತೋರಿಸಿದ್ದಾರೆ. ಕುರಿ, ಮೇಕೆ, ಕೋಳಿ ಸಾಕಣೆಯಲ್ಲಿ ಯಶಸ್ವಿಯಾಗಿರುವ ಅವರು ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ.
ಅರುಂಧತಿ ಅವರು ತಮ್ಮ ನೆಲದಲ್ಲೇ ಸ್ವಾವಲಂಬಿಯಾಗಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಭಿಕ್ಷಾಟನೆ, ವೇಶ್ಯಾವಾಟಿಕೆ ತೊರೆದು ಬಂದವರಿಗೆ ಹೊಸ ದಾರಿ ತೋರಿಸುವುದಕ್ಕಾಗಿ ಹೈನುಗಾರಿಕೆ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಊರಿನ ಕೆಲ ಕಿಡಿಗೇಡಿಗಳು ಅವರ ಪ್ರಯತ್ನಕ್ಕೆ ಅಡ್ಡಗಾಲು ಹಾಕಿದರು. ಊರಿನಿಂದಲೇ ಬಹಿಷ್ಕಾರ ಹಾಕಿದರು. ದಾರಿ ತೋಚದ ಸ್ಥಿತಿಯಲ್ಲಿದ್ದಾಗ ಅರುಂಧತಿ ಚಿತ್ರದುರ್ಗದತ್ತ ಹೆಜ್ಜೆ ಇಟ್ಟರು.
ಈ ಭಾಗದಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರು ಅರಂಧತಿ ಅವರಿಗೆ ಸ್ವಾಗತ ಕೋರಿದರು. ಭರಮಸಾಗರದ ಹನುಮಂತ ದೇವಾಲಯದ ರಸ್ತೆ ಬಳಿ ಮುಕ್ಕಾಲು ಎಕರೆ ಜಾಗ ಹಿಡಿದು ತಮ್ಮ ಕನಸಿನ ಕೆಲಸ ಆರಂಭಿಸಿದರು. ‘ಮಡಿಲು ಸ್ವಾವಲಂಬಿ ಟ್ರಸ್ಟ್’ ಸ್ಥಾಪಿಸಿ ತಮ್ಮ ಸಮುದಾಯದ ಜನರನ್ನು ಜೊತೆಗೆ ಸೇರಿಸಿಕೊಂಡರು. ತಮ್ಮ ಒಡವೆ ಮಾರಿ ಕೇವಲ 2 ಮೇಕೆ ಖರೀದಿಸಿ ಫಾರಂ ಆರಂಭಿಸಿದರು.
ಅರುಂಧತಿ, ಫಾರಂ ಆರಂಭಿಸಿದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಲಿಂಗತ್ವ ಅಲ್ಪಸಂಖ್ಯಾತರಿಗೆ ಜಾಗ ಕೊಡಲು ಯಾರೂ ಮುಂದೆ ಬರಲಿಲ್ಲ. ಊರಿನ ತ್ಯಾಜ್ಯ ಬಿಸಾಡುತ್ತಿದ್ದ ಜಾಗವನ್ನು ಲೀಸ್‌ಗೆ ಪಡೆಯುವಲ್ಲಿ ಯಶಸ್ವಿಯಾದರು. ಆ ಜಾಗವನ್ನು ಸ್ವಚ್ಛ ಮಾಡುವುದಕ್ಕಾಗಿಯೇ ಹಲವು ತಿಂಗಳು ಹಿಡಿಯಿತು. ಸವಾಲುಗಳನ್ನು ಎದುರಿಸಿ 2018ರಲ್ಲಿ ಅವರು ಫಾರಂ ಆರಂಭಿಸುವಲ್ಲಿ ಯಶಸ್ವಿಯಾದರು. ಜೊತೆಗೆ ಆರ್ಥಿಕ ಸದೃಢತೆಗಾಗಿ ತಮ್ಮ ಫಾರಂ ಮುಂದೆಯೇ ‘ಅರುಂಧತಿ ಟೀ–ಸ್ಟಾಲ್’ ಕೂಡ ಶುರುಮಾಡಿದರು.
ಇಷ್ಟಾದರೂ ಅವರ ಹಾದಿ ಸುಗಮವಾಗಿರಲಿಲ್ಲ. ಕಿಡಿಗೇಡಿಗಳು ಮೇಕೆ, ಕುರಿಗಳನ್ನು ಕಳವು ಮಾಡಿದರು. ಇದರಿಂದ ಅಪಾರ ನಷ್ಟ ಅನುಭವಿಸಿದರು. ಇಂತಹ ಕಷ್ಟದ ಸಂದರ್ಭದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಕೈಹಿಡಿಯಿತು. ಹೊಸದಾಗಿ ಕುರಿ, ಮೇಕೆ ಸಾಕಣೆ ಘಟಕ ಸ್ಥಾಪಿಸಿಲು ನಿಗಮ ಸಾಲ ನೀಡಿತು. ಸರ್ಕಾರದ ಸಹಾಯದೊಂದಿಗೆ ಆರಂಭವಾದ ಘಟಕ ಈಗ ಉತ್ತಮ ವಹಿವಾಟು ನಡೆಸುತ್ತಿದೆ. ಆ ಮೂಲಕ ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬನೆಯ ಹಾದಿ ಹೊಸ ರೂಪ ಪಡೆದುಕೊಂಡಿದೆ. ಈಗ ಘಟಕದಲ್ಲಿ ತಲಾ 50 ಕುರಿ, ಮೇಕೆ, ಕೋಳಿಗಳಿವೆ.
ಅರುಂಧತಿ ಲಾಭಕ್ಕಾಗಿ ಈ ಘಟಕ ನಡೆಸುತ್ತಿಲ್ಲ. ತಮ್ಮ ಸಮುದಾಯದ ಶ್ರೇಯಕ್ಕಾಗಿ ಈ ಕೆಲಸ ಮಾಡುತ್ತಿದ್ದಾರೆ. ಭಿಕ್ಷೆ ತ್ಯಜಿಸಿ ಬಂದ 20 ಜಿಲ್ಲೆಗಳ ತಲಾ ಇಬ್ಬರು ಲಿಂಗತ್ವ ಅಲ್ಪಸಂಖ್ಯಾತರಿಗೆ ತಲಾ 2 ಕುರಿ, ಕೋಳಿಗಳನ್ನು ಉಚಿತವಾಗಿ ಕೊಟ್ಟಿದ್ದಾರೆ. ಜೊತೆಗೆ ಸಾಕಣೆಯ ತರಬೇತಿಯನ್ನೂ ನೀಡಿದ್ದಾರೆ. ಆ ಮೂಲಕ ಹೊಸ ಬದುಕಿಗೆ ಪ್ರೇರಣೆಯಾಗಿದ್ದಾರೆ. ಸಮಾಜ ಸೇವೆಯಲ್ಲೂ ಅರುಂಧತಿ ಹಾಗೂ ತಂಡದ ಸದಸ್ಯರು ತೊಡಗಿಸಿಕೊಂಡಿದ್ದಾರೆ. ಕೋವಿಡ್ ಅವಧಿಯಲ್ಲಿ ಜನರಿಗೆ ಶುದ್ಧ ನೀರು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
‘ನಾನು 2012ರಿಂದ 2016ರವರೆಗೂ ರಾಷ್ಟ್ರಮಟ್ಟದ ಪೆಹಚಾನ್ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡಿದ್ದೆ. ಆ ಅನುಭವದೊಂದಿಗೆ ಹೊಸ ಬದುಕಿನ ಕನಸು ಕಟ್ಟಿಕೊಂಡು ಸಾಕಷ್ಟು ಸವಾಲುಗಳ ನಡುವೆ ಈವರೆಗೆ ಸಾಗಿ ಬಂದಿದ್ದೇನೆ. ಸ್ಫೂರ್ತಿ, ಸುಹಾನಾ, ಸರಸ್ವತಿ, ಮಮತಾ, ಸ್ನೇಹಾ, ಕಾವ್ಯಾ, ಕವಿತಾ, ಧನ್ಯಾ ಮುಂತಾದವರು ನನ್ನ ಜೊತೆಗೆ ನಿಂತಿದ್ದಾರೆ’ ಎಂದು ಅರುಂಧತಿ ಹೇಳಿದರು.
ಕುರಿ ಮೇಕೆಗಳಿಗೆ ರೋಗ ಕಾಡುತ್ತಿದ್ದು ಪಶು ಸಂಗೋಪನಾ ಇಲಾಖೆ ವೈದ್ಯರು ಲಸಿಕೆ ಹಾಕಲು ಬರುತ್ತಿಲ್ಲ. ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಈಗಲಾದರೂ ಪಶುವೈದ್ಯರು ನಮಗೆ ಸಹಾಯ ಮಾಡಲಿಅರುಂಧತಿ ಕುರಿ ಮೇಕೆ ಸಾಕಣೆದಾರರು
ಜೂನ್ 2ಕ್ಕೆ ರಾಜ್ಯಮಟ್ಟದ ಸಮಾವೇಶ ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬನೆಗೆ ಹೊಸ ದಾರಿ ತೋರಿಸಿರುವ ಅರುಂಧತಿ ಅವರು ಕೋಟೆನಗರಿಯಲ್ಲಿ ಜೂನ್ 2ರಂದು ರಾಜ್ಯಮಟ್ಟದ ಸಮಾವೇಶವೊಂದನ್ನು ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಂದು ರ‍್ಯಾಲಿಯನ್ನೂ ಆಯೋಜನೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ವಿವಿಧ ಸಂಘಟನೆಗಳು ಸಾವಿರಾರು ಲಿಂಗತ್ವ ಅಲ್ಪಸಂಖ್ಯಾತರು ಪಾಲ್ಗೊಳ್ಳಲಿದ್ದಾರೆ. ‘ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಶಿಕ್ಷಣ– ಆರೋಗ್ಯ– ಉದ್ಯೋಗದಲ್ಲಿ ತಾರತಮ್ಯ ನಿವಾರಣೆ ವಸತಿ ಸೌಲಭ್ಯ ನೀಡುವಂತೆ ಒತ್ತಾಯಿಸಲು ಈ ರ‍್ಯಾಲಿ ಆಯೋಜಿಸಲಾಗಿದೆ. ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸುತ್ತೇವೆ’ ಎಂದು ಅರುಂಧತಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.