ADVERTISEMENT

ಯುಗಾದಿ ದಿವಸ ಹೊನ್ನಾರ ಸಂಭ್ರಮ

ಶ್ವೇತಾ ಜಿ.
Published 4 ಏಪ್ರಿಲ್ 2022, 3:00 IST
Last Updated 4 ಏಪ್ರಿಲ್ 2022, 3:00 IST
ಹೊಸದುರ್ಗದ ಕೊಂಡಾಪುರದ ರೈತರು ಹೊನ್ನಾರದಲ್ಲಿ ತೊಡಗಿರುವುದು
ಹೊಸದುರ್ಗದ ಕೊಂಡಾಪುರದ ರೈತರು ಹೊನ್ನಾರದಲ್ಲಿ ತೊಡಗಿರುವುದು   

ಹೊಸದುರ್ಗ: ತಾಲ್ಲೂಕಿನ ಕೊಂಡಾಪುರ, ಶ್ರೀರಂಗಾಪುರ ಸೇರಿ ಹಲವೆಡೆ ಹೊನ್ನಾರ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.

ಯುಗಾದಿಯ ಶುಭಕೃತ್‌ ನಾಮ ಸಂವತ್ಸರದಂದು ರೈತರು ಹೊನ್ನಾರ ಹೂಡಿ, ಎತ್ತುಗಳಿಗೆ ವಿಶೇಷ ಪೂಜೆ ಮಾಡಿ, ಹೊಲಕ್ಕೆ ಒಂಡೆರಡು ಸಾಲು ಉಳುಮೆ ಮಾಡಿದರೆ, ಮಳೆ ಬೆಳೆ ಸಮೃದ್ಧವಾಗಿ ಬಂದು ರೈತ ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂಬ ನಂಬಿಕೆ ಇದೆ.

ಮುಂಗಾರು ಮಳೆಯಲ್ಲಿ ರೈತನ ಬೇಸಾಯದ ಚಟುವಟಿಕೆ ಆರಂಭವಾಗುತ್ತವೆ. ಹೊಸ ವರ್ಷದ ಸಂವತ್ಸರದಲ್ಲಿ ರೈತ ಎತ್ತುಗಳನ್ನು ಸಿಂಗಾರ ಮಾಡಿ, ಭೂಮಿ ತಾಯಿಗೆ ಪೂಜೆ ಮಾಡಿ ಹೊನ್ನಾರ ಹೂಡುವುದು ಸಂಪ್ರದಾಯ. ಈ ಹೊನ್ನಾರ ಕಾರ್ಯಕ್ರಮವನ್ನು ಕೆಲ ಗ್ರಾಮಗಳಲ್ಲಿ ರೈತರು ಸಾಮೂಹಿಕವಾಗಿ ಮಾಡುತ್ತಾರೆ. ಇನ್ನೂ ಕೆಲವೆಡೆ ಒಬ್ಬರೇ ರೈತರು ತಮ್ಮ ಜಮೀನಿನಲ್ಲಿ ಹೊನ್ನಾರ ನಡೆಸುವರು.

ADVERTISEMENT

ಯುಗಾದಿಯ ಮುನ್ನ ಊರಿನ ಗೌಡರೆಲ್ಲಾ ಸೇರಿ, ಹೊನ್ನಾರ ಹೂಡುವ ಬಗ್ಗೆ ಚರ್ಚಿಸುವರು. ಹಿಂದಿನ ಸಂಪ್ರದಾಯದಂತೆ ಶಾಸ್ತ್ರ ಕೇಳಿ, ಗುರುಬಲ ಹಾಗೂ ಹೆಸರು ಬಲದ ಆಧಾರದ ಮೇಲೆ ಹಿರಿಯರೆಲ್ಲಾ ಒಂದುಗೂಡಿ, ಸಮಯಕ್ಕೆ ಸರಿಯಾಗಿ ಒಂದು ಗಂಡು, ಒಂದು ಹೆಣ್ಣು, ಒಂದು ಜೊತೆ ಎತ್ತನ್ನು ಊರು ಹೊನ್ನಾರಕ್ಕೆ ನೇಮಕ ಮಾಡುವರು. ನಂತರ ಗ್ರಾಮದೇವರ ಮುಂದೆ ಎತ್ತು ಮತ್ತು ನೇಗಿಲುಗಳಿಗೆ ಪೂಜೆ ಮಾಡಿ, ಊರ ಗೌಡರು ಹೊನ್ನಾರಕ್ಕೆ ಚಾಲನೆ ನೀಡುವರು. ಅವರು ನಿಗದಿತ ಸಮಯಕ್ಕೆ ಅನುಗುಣವಾಗಿ ಗ್ರಾಮದ ಸುತ್ತ ಹೊನ್ನಾರ ಮುಗಿಸುವರು.

ಊರ ಹೊನ್ನಾರ ಮುಗಿದ ನಂತರ ಉಳಿದ ರೈತರು ತಮ್ಮ ಕುಟುಂಬದವರೊಡನೆ ಹೊನ್ನಾರಕ್ಕೆ ಹೋಗಲು ಅಣಿಯಾಗುವರು. ಅವರವರ ಹೊಲಗಳಿಗೆ ಹೋಗಿ, ಹೊಲದ ಬಲಭಾಗದಲ್ಲಿ ಎತ್ತು ಮತ್ತು ನೇಗಿಲುಗಳಿಗೆ ಪೂಜೆ ಸಲ್ಲಿಸುವರು. ಮತ್ತೊಂದು ವಿಶೇಷವೆಂದರೆ ರೈತರು ತಂದಂತಹ ಬೆಳ್ಳಿ ಬಂಗಾರವನ್ನು ಎತ್ತಿನ ಪಾದ ಹಾಗೂ ಭೂಮಿಗೆ ಮೂರು ಸಲ ಮುಟ್ಟಿಸಿ, ನಮಸ್ಕರಿಸಿ ‘ಹರಳು ಹಣ ಹೆಚ್ಚಲಿ ಎಂದು ಮೂರು ಬಾರಿ ಹೇಳುವರು. ಆದಾದ ಮೇಲೆ ಮನೆಯೊಡತಿ ಎತ್ತಿನ ಮುಂದೆ ತುಂಬಿದ ಕೊಡದಲ್ಲಿ ನೀರು ಸುರಿಸುತ್ತಾ ಹೋಗುವರು. ಅದೇ ಜಾಗದಲ್ಲಿ ಹೊಲದ ಸುತ್ತ ಒಂದು ಸಾಲು ಉಳುಮೆ ಮಾಡುವರು.

‘ಯುಗಾದಿಯ ನಂತರ ಹೊನ್ನಾರ ಹೂಡದೇ ಯಾವ ರೈತನೂ ಉಳುಮೆ ಮಾಡುವ ಪದ್ಧತಿ ಇಲ್ಲ. ಹಾಗಾಗಿ ಇದು ಒಂದು ಹಬ್ಬದಂತೆ. ಹೊನ್ನಾರ ಹೂಡುವ ದಿನ ನಮಗಾಗಿ ದುಡಿಯುವ ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜೆ ಸಲ್ಲಿಸಿದ ಬಳಿಕ ಹಬ್ಬದ ಅಡುಗೆ ಮಾಡಿ ನೈವೇದ್ಯ ನೀಡಲಾಗುತ್ತದೆ. ಎತ್ತು ಇಲ್ಲದವರು ಟ್ರ್ಯಾಕ್ಟರ್‌ನಲ್ಲೂ ಹೊನ್ನಾರ ಹೂಡುವರು. ಮಳೆ ಬೆಳೆ ಸಮೃದ್ಧಿಯಾಗಲಿ ಎಂಬುದು ಇದರ ಉದ್ದೇಶ’ ಎನ್ನುತ್ತಾರೆ ಕೊಂಡಾಪುರದ ಲೋಹಿತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.