ADVERTISEMENT

ಅಂಬೇಡ್ಕರ್ ವರ್ಚಸ್ಸು ದೋಚುವ ರಾಜಕೀಯ ಪಕ್ಷಗಳು: ಪತ್ರಕರ್ತ ಡಿ. ಉಮಾಪತಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2019, 8:50 IST
Last Updated 7 ಜುಲೈ 2019, 8:50 IST
   

ಚಿತ್ರದುರ್ಗ: ದಲಿತ ಸಮುದಾಯದ ಮತಗಳನ್ನು ಸೆಳೆಯಲು ಡಾ. ಬಿ.ಆರ್.ಅಂಬೇಡ್ಕರ್ ವರ್ಚಸ್ಸು ದೋಚುವ ರಾಜಕೀಯ ಪಕ್ಷಗಳು, ಅವರ ನಿಜವಾದ ವಿಚಾರಗಳನ್ನು ಕೊಲ್ಲುತ್ತಿವೆ ಎಂದು ಪತ್ರಕರ್ತ ಡಿ.ಉಮಾಪತಿ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕಾ ಸಂಪಾದಕರ ಸಂಘ ಆಯೋಜಿಸಿದ ಸಮಾರಂಭದಲ್ಲಿ 'ಬಿ.ರಾಚಯ್ಯ ಪ್ರಶಸ್ತಿ' ಸ್ವೀಕರಿಸಿ ಅವರು ಮಾತನಾಡಿದರು.

ಅಸಮಾನತೆಯ ನರಕದ ಕೂಪದಿಂದ ಶೋಷಿತ ಸಮುದಾಯವನ್ನು ಮೇಲೆ ಎತ್ತಬೇಕು ಎಂಬ ಅಂಬೇಡ್ಕರ್ ಕನಸು ಇನ್ನೂ ನನಸಾಗಿಲ್ಲ. ಅಂಬೇಡ್ಕರ್ ಹೆಸರಲ್ಲಿ ಭವ್ಯ ಸ್ಮಾರಕ, ಮಹಲು, ಪ್ರತಿಮೆ ನಿರ್ಮಿಸಿದರೆ ಸಾಲದು. ದೇಶವನ್ನು ಆಳಿದ ಎಲ್ಲ ಸರ್ಕಾರ ಮಾಡಿದ ತಪ್ಪನ್ನು ಇಂದಿನ ಸರ್ಕಾರವೂ ಮಾಡುತ್ತಿದೆ ಎಂದು ಹೇಳಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಬಗೆಗೆ ಅಭಿಮಾನ ತೋರುತ್ತಾರೆ. ಆದರೆ, ಅವರು ಅಪಾರ ಗೌರವ ತೋರುವ ಸರಸಂಘಚಾಲಕರೊಬ್ಬರ ಪುಸ್ತಕ ಸಂವಿಧಾನ ವಿರೋಧಿಯಾಗಿದೆ. ಬೇಟೆ ನಾಯಿ ಹಾಗೂ ಮೊಲದ ಜೊತೆ ಓಡುವವರನ್ನು ಹೇಗೆ ನಂಬಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರನ್ನು ಕೇವಲ ರೂಪಕವಾಗಿ ಸ್ವೀಕರಿಸಿವೆ. ನಿತ್ಯ ಬದುಕಿನಲ್ಲಿ ದಲಿತರ ಬಗ್ಗೆ ದ್ವೇಷಕಾರುವ ಪರಿವಾರ, ಅವರ ಬಗ್ಗೆ ಹುಸಿ ಆದರವನ್ನು ತೋರುತ್ತಿದೆ. ಏಕಕಾಲಕ್ಕೆ ಹಲವು ನಾಲಿಗೆಯಲ್ಲಿ ಮಾತನಾಡುವುದು ಧೂರ್ತತನ. ಈ ಅಪ್ಪಟ ಕಪಟವನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ದಲಿತ, ಆದಿವಾಸಿ, ಅಲ್ಪಸಂಖ್ಯಾತ ಹಾಗೂ ಕೃಷಿಕ ಸಮುದಾಯ ಶೋಷಣೆಗೆ ಒಳಗಾಗುತ್ತಿದೆ. ಈ ನಾಲ್ಕು ಸಮುದಾಯಗಳನ್ನು ಮಾಧ್ಯಮಗಳು ನಿರ್ಲಕ್ಷ್ಯ ಮಾಡುತ್ತಿವೆ. ಅಳುವವರ್ಗದ ಹಿತಾಸಕ್ತಿ ಕಾಪಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.