ADVERTISEMENT

ಅಂತರ್ಜಲ ವೃದ್ಧಿ: ಕೈಪಂಪ್‌ನಲ್ಲಿ ಉಕ್ಕುತ್ತಿರುವ ನೀರು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 5:49 IST
Last Updated 8 ಅಕ್ಟೋಬರ್ 2021, 5:49 IST
ಹೊಸದುರ್ಗ ತಾಲ್ಲೂಕಿನ ಕಂಚೀಪುರ ಹೊಸಗೊಲ್ಲರಹಟ್ಟಿ ಗ್ರಾಮದ ಕೈಪಂಪ್‌ನಲ್ಲಿ ಸ್ವಾಭಾವಿಕವಾಗಿ ನೀರು ಹೊರಬರುತ್ತಿರುವುದು.
ಹೊಸದುರ್ಗ ತಾಲ್ಲೂಕಿನ ಕಂಚೀಪುರ ಹೊಸಗೊಲ್ಲರಹಟ್ಟಿ ಗ್ರಾಮದ ಕೈಪಂಪ್‌ನಲ್ಲಿ ಸ್ವಾಭಾವಿಕವಾಗಿ ನೀರು ಹೊರಬರುತ್ತಿರುವುದು.   

ಹೊಸದುರ್ಗ: ತಾಲ್ಲೂಕಿನ ಕಂಚೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಗೊಲ್ಲರಹಟ್ಟಿ ಗ್ರಾಮದಲ್ಲಿ ಅಂತರ್ಜಲ ವೃದ್ಧಿಯಾಗಿದ್ದು, ಇಲ್ಲಿಯ ಕಾಟಮ್ಮಲಿಂಗೇಶ್ವರಸ್ವಾಮಿ ದೇಗುಲದ ಮುಂಭಾಗದ ಕೈಪಂಪ್‌ನಲ್ಲಿ ಸ್ವಾಭಾವಿಕವಾಗಿ ನೀರು ಉಕ್ಕುತ್ತಿದೆ.

ಸುಮಾರು 110 ಮನೆ ಹಾಗೂ 700 ಜನಸಂಖ್ಯೆ ಇರುವ ಪುಟ್ಟಹಳ್ಳಿ ಇದು. ದಶಕದ ಹಿಂದೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಲ್ಲಿ ಕೊಳವೆಬಾವಿ ಕೊರೆಯಿಸಿ, ಕೈಪಂಪ್‌ ಅಳವಡಿಸಲಾಗಿತ್ತು. ಇದರಲ್ಲಿ ಸಿಹಿನೀರು ಸಿಕ್ಕಿದ್ದರಿಂದ ಹಿಂದೆ ಗ್ರಾಮದ ಜನರು ಕುಡಿಯುವ ನೀರಿಗೆ ಇದನ್ನು ಬಳಸುತ್ತಿದ್ದರು.

ಕೊಳವೆಬಾವಿ ಕೊರೆಯಿಸಿದಾಗ ಹೆಚ್ಚು ನೀರು ಸಿಕ್ಕಿರಲಿಲ್ಲ. ಐದಾರು ವರ್ಷಗಳ ಹಿಂದೆ ಈ ಭಾಗದಲ್ಲಿ ಸಮೃದ್ಧವಾಗಿ ಮಳೆಯಾದಾಗ ಅಂತರ್ಜಲ ವೃದ್ಧಿಯಾಗಿತ್ತು. ಆಗಲೂ ಸ್ವಾಭಾವಿಕವಾಗಿ ಕೈಪಂಪ್‌ನಲ್ಲಿ ಸ್ವಲ್ಪ ನೀರು ಹೊರಬರುತ್ತಿತ್ತು. ನಂತರದ ವರ್ಷದಲ್ಲಿ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಕೈಪಂಪ್‌ನಲ್ಲಿ ನೀರು ಕಡಿಮೆಯಾಗಿತ್ತು. ಈ ಬಾರಿ ಭದ್ರಾ ನದಿಯಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿದ್ದರಿಂದ ಈ ಜಲಾಶಯದಲ್ಲಿ 110 ಅಡಿ ನೀರು ಸಂಗ್ರಹವಾಗಿದೆ. ಈ ನಡುವೆ ಈ ಭಾಗದಲ್ಲಿ ಮಳೆಯೂ ಸಮೃದ್ಧವಾಗಿ ಬಂದಿದೆ.

ADVERTISEMENT

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ರೈತರು ಸಾಕಷ್ಟು ಕೃಷಿಹೊಂಡ, ಜಮೀನುಗಳಲ್ಲಿ ಬದು ನಿರ್ಮಾಣ ಮಾಡಿಕೊಂಡಿದ್ದಾರೆ. ಇದರಿಂದಾಗಿ ಅಂತರ್ಜಲ ವೃದ್ಧಿಯಾಗಿದ್ದು, 3 ದಿನಗಳಿಂದ ಈ ಕೈಪಂಪ್‌ನಲ್ಲಿ ಸ್ವಾಭಾವಿಕವಾಗಿ ನೀರು ಹೊರಬರುತ್ತಿದೆ. ಹಿಂದೆ ಸಾಕಷ್ಟು ಜಗ್ಗಿದರೂ ಹೊರಬರದ ನೀರು ಈಗ ಸ್ವಾಭಾವಿಕಾಗಿ ಬರುತ್ತಿರುವುದು ಜನರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಕೈಪಂಪ್‌ನಿಂದ ಹೊರ ಬರುತ್ತಿರುವ ನೀರು ರೈತರ ಜಮೀನಿನ ಅಂಚಿನ ಹಳ್ಳದ ಮೂಲಕ ಚೌಳಕಟ್ಟೆ ಸೇರುತ್ತಿದೆ ಎನ್ನುತ್ತಾರೆ ಗ್ರಾಮದ ಯುವಕ ರಮೇಶ್‌. ಅಂತರ್ಜಲ ವೃದ್ಧಿಯಾಗಿದ್ದರಿಂದ ತೆಂಗು, ಅಡಿಕೆ ಹಾಗೂ ಬಾಳೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಸಾಕಷ್ಟು ಅನುಕೂಲವಾಗಿದ್ದು, ಗ್ರಾಮದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.