ಚಿತ್ರದುರ್ಗ: ವಿವಿಧ ರಾಜಮನೆತನಗಳ, ನಾಯಕ ಅರಸರ ಶೌರ್ಯ ಸಾಹಸಗಳ ಪ್ರತೀಕವಾಗಿರುವ ಚಿತ್ರದುರ್ಗದ ಕಲ್ಲಿನಕೋಟೆ ಯುನೆಸ್ಕೊ– ವಿಶ್ವ ಪಾರಂಪರಿಕ ತಾಣದ ಪಟ್ಟಿ ಸೇರುವ ಎಲ್ಲಾ ಅರ್ಹತೆ ಹೊಂದಿದೆ. ಆದರೆ, ಕೋಟೆ ಸುತ್ತಲೂ ಆವರಿಸಿಕೊಂಡಿರುವ ಒತ್ತುವರಿ, ಅನಧಿಕೃತ ಕಟ್ಟಡಗಳ ಹಾವಳಿ, ಮೂಲಸೌಲಭ್ಯಗಳ ಕೊರತೆಗಳು ಯುನೆಸ್ಕೊ ಮಾನ್ಯತೆಗೆ ಅಡ್ಡಿಯಾಗಿವೆ ಎಂದು ಇತಿಹಾಸಕಾರರು ಬೇಸರ ವ್ಯಕ್ತಪಡಿಸುತ್ತಾರೆ.
ಪೌರಾಣಿಕ ಹಿನ್ನೆಲೆ, ಭೂವೈಜ್ಞಾನಿಕ ಮಹತ್ವ, ವಿಶಿಷ್ಟ ನೈಸರ್ಗಿಕ ರಚನೆ ಹೊಂದಿರುವ ದುರ್ಗದ ಸ್ಮಾರಕಗಳು ಪ್ರವಾಸಿಗರನ್ನು ಬೆರಗುಗೊಳಿಸುತ್ತವೆ. ರಾಮಾಯಣ, ಮಹಾಭಾರತ, ಹಳೇ ಶಿಲಾಯುಗ, ಕ್ರಿಸ್ತ ಪೂರ್ವ, ಕ್ರಿಸ್ತ ಶಕ 1ನೇ ಶತಮಾನದಿಂದಲೂ ಚರಿತ್ರೆಯ ಪುಟಗಳಲ್ಲಿ ದುರ್ಗದ ಇತಿಹಾಸ ರೋಚಕ ಎನಿಸುತ್ತದೆ.
ಸಾಲು ಸಾಲು ರಾಜಮನೆತನಗಳು ಆಳಿ ಬಿಟ್ಟು ಹೋದ ಸ್ಮಾರಕಗಳು, ಪಳಿಯುಳಿಕೆಗಳು ಈಗಲೂ ಜೀವಂತ ಸಾಕ್ಷಿಯಾಗಿವೆ. ಇತಿಹಾಸದ ಸಾರವನ್ನು ಚಿತ್ರವಿಚಿತ್ರ ಕಲ್ಲುಗಳು ಕೂಗಿ ಹೇಳುತ್ತಿವೆ. ಆದರೆ, ಅವುಗಳನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಈಗಿನ ರಾಜಕೀಯ ವ್ಯವಸ್ಥೆ ಕಲ್ಲಿನ ಕೂಗಿಗೆ ಕಿವಿಗೊಡದಾಗಿದೆ. ಕೋಟೆ ನೋಡಲು ಬರುವ ವಿದೇಶಿ ಪ್ರವಾಸಿಗರು ‘ಇಂತಹ ಅದ್ಭುತ ಕೋಟೆ ಇಲ್ಲಿಯವರೆಗೂ ಏಕೆ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರ್ಪಡೆಯಾಗಿಲ್ಲ’ ಎಂಬ ಪ್ರಶ್ನೆ ಮಾಡುತ್ತಾರೆ.
‘ಯುನೆಸ್ಕೊ ಸಮಿತಿಯಲ್ಲಿ ಕೆಲಸ ಮಾಡಿರುವ ಅಧಿಕಾರಿಯೊಬ್ಬರು ಈಚೆಗೆ ಕೋಟೆ ವೀಕ್ಷಣೆಗಾಗಿ ಲಂಡನ್‌ನಿಂದ ಕುಟುಂಬ ಸಮೇತರಾಗಿ ಬಂದಿದ್ದರು. ಏಳು ಸುತ್ತಿನ ಕೋಟೆಯ ಪಳಿಯುಳಿಕೆ ಕಂಡು ಆಶ್ಚರ್ಯಚಕಿತರಾದರು. ಆದರೆ ಕೋಟೆಗೆ ನೇರವಾದ ರಸ್ತೆ ಇಲ್ಲದಿರುವುದು, ಕೋಟೆಯ ಹತ್ತಿರದಲ್ಲೇ ಅನಧಿಕೃತ ಕಟ್ಟಡ ತಲೆ ಎತ್ತಿರುವುದನ್ನು ಕಂಡು ನೋವು ವ್ಯಕ್ತಪಡಿಸಿದರು. ಒತ್ತುವರಿ ತೆರವುಗೊಳಿಸುವವರೆಗೂ ಕಲ್ಲಿನಕೋಟೆಯನ್ನು ವಿಶ್ವ ಪಾರಂಪರಿಕ ತಾಣ ಸೇರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ಪ್ರವಾಸಿ ಮಾರ್ಗದರ್ಶಿಯೊಬ್ಬರು ತಿಳಿಸಿದರು.
ಯುನೆಸ್ಕೊ (ಯುನೈಟೆಡ್ ನೇಷನ್ಸ್ ಎಜುಕೇಶನಲ್, ಸೈಂಟಿಫಿಕ್, ಅಂಡ್ ಕಲ್ಚರಲ್ ಆರ್ಗನೈಸೇಷನ್) ಸಂಸ್ಥೆಯು ವಿಶ್ವದಲ್ಲಿರುವ ಅದ್ಭುತ ಐತಿಹಾಸಿಕ, ನೈಸರ್ಗಿಕ ತಾಣಗಳನ್ನು ‘ವಿಶ್ವ ಪಾರಂಪರಿಕ ತಾಣ’ ಎಂದು ಘೋಷಣೆ ಮಾಡುತ್ತದೆ. ನಂತರ ಸ್ಮಾರಕಗಳ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುತ್ತದೆ. ಅಪಾರ ಪ್ರಮಾಣದ ಆರ್ಥಿಕ ಸಹಾಯ ಹರಿದು ಬರುತ್ತದೆ.
ದೇಶದಲ್ಲಿ ಇಲ್ಲಿಯವರೆಗೆ 44 ಪ್ರವಾಸಿತಾಣಗಳನ್ನು ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಲಾಗಿದೆ. ರಾಜ್ಯದಲ್ಲಿ ಹಂಪಿ, ಪಟ್ಟದಕಲ್ಲು, ಹೊಯ್ಸಳ ದೇವಾಲಯಗಳು (ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ), ಪಶ್ಚಿಮ ಘಟ್ಟಗಳು ಪಾರಂಪರಿಕ ತಾಣಗಳಾಗಿ ಗುರುತಿಸಿಕೊಂಡಿವೆ. ಪಾರಂಪರಿಕ ತಾಣದ ಪಟ್ಟಿ ಸೇರ್ಪಡೆಗೆ ಯುನೆಸ್ಕೊ ಹಲವು ಅಂಶಗಳ ಪಟ್ಟಿ ಸಿದ್ಧಪಡಿಸಿದ್ದು ಅವುಗಳ ಅರ್ಹತೆ ಪಡೆದಿರಬೇಕಾದ ಅವಶ್ಯಕತೆ ಇದೆ.
ಇಲ್ಲವಾದ ಸಂಘಟನಾ ಶಕ್ತಿ: ಯಾವುದೇ ತಾಣ ಯುನೆಸ್ಕೊ ಪಟ್ಟಿ ಸೇರ್ಪಡೆಗೆ ಆರಂಭಿಕವಾಗಿ ಜನಾಭಿಪ್ರಾಯ ಸೃಷ್ಟಿಯಾಗಬೇಕಿದೆ. ನಂತರ ಅದು ಸಂಘಟನೆಗಳ ಮೂಲಕ ಸರ್ಕಾರಕ್ಕೆ ಒತ್ತಾಯ ರೂಪದಲ್ಲಿ ಸಲ್ಲಿಕೆಯಾಗಬೇಕಾಗಿದೆ. ಚಿತ್ರದುರ್ಗವನ್ನು ವಿಶ್ವ ಪಾರಂಪರಿಕ ತಾಣ ಸೇರ್ಪಡೆ ಬಗ್ಗೆ ಜನಭಿಪ್ರಾಯಕ್ಕೆ ಕೊರತೆ ಇಲ್ಲ. ಆದರೆ ಅದನ್ನು ಒತ್ತಾಯ ಪೂರ್ವಕವಾಗಿ ಮಂಡಿಸಲು ಸಂಘಟನೆಗಳ ಕೊರತೆ ಇದೆ. ಜಿಲ್ಲೆಯಲ್ಲಿರುವ ಸಂಘಟನೆಗಳು ಶಕ್ತಿ ಕಳೆದುಕೊಂಡಿದ್ದು ಐತಿಹಾಸಿಕ ಸ್ಮಾರಕಗಳ ಬಗ್ಗೆ ಆಸಕ್ತಿ ಇಲ್ಲ ಎಂಬ ಆರೋಪವಿದೆ.
‘60ರ ದಶಕದಿಂದಲೂ ಚಿತ್ರದುರ್ಗ ಇತಿಹಾಸ ಸಂಶೋಧನಾ ಮಂಡಳಿ ಅಸ್ತಿತ್ವದಲ್ಲಿತ್ತು. ಸ್ಮಾರಕಗಳ ಕುರಿತಾಗಿ ಅಧ್ಯಯನ ಮಾಡಿದ ಸಂಶೋಧಕರು ಈ ಸಂಘಟನೆ ಕಟ್ಟಿದ್ದರು. ಆದರೆ ಇತ್ತೀಚೆಗೆ ಈ ಸಂಘಟನೆ ಹರಿದು ಹಂಚಿ ಹೋಗಿದ್ದು ಶಕ್ತಿ ಕಳೆದುಕೊಂಡಿದೆ. ಕೋಟೆಗೆ ಯುನೆಸ್ಕೊ ಮಾನ್ಯತೆ ಕೊಡಿ ಎಂದು ಒತ್ತಾಯ ಮಾಡುವ ಒಂದೇ ಒಂದು ಸಂಘಟನೆ ದುರ್ಗದಲ್ಲಿ ಇಲ್ಲದಿರುವುದು ದುರ್ದೈವ’ ಎಂದು ಸಾಹಿತಿ ಎಂ.ಮೃತ್ಯುಂಜಯಪ್ಪ ಬೇಸರ ವ್ಯಕ್ತಪಡಿಸಿದರು.
ನಗರಕ್ಕೆ ಬರುವ ಪ್ರವಾಸಿಗರು ಕೋಟೆ ತಲುಪಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ಇದೆ. ಕೊಂಪೆಯಂತಿರುವ ದೊಡ್ಡಪೇಟೆ, ಚಿಕ್ಕಪೇಟೆಗಳನ್ನು ಸಾಗಿ ಕೋಟೆ ತಲುಪಲು ಸಾಸಹಪಡಬೇಕಾಗಿದೆ. ಹಳೇ ರಾಷ್ಟ್ರೀಯ ಹೆದ್ದಾರಿಯಿಂದ ನೇರವಾಗಿ ಕೋಟೆ ಸಂಪರ್ಕಿಸುವ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಹಲವು ದಶಕಗಳಿಂದಲೂ ಸ್ಮಾರಕ ಸಮೀಪದಲ್ಲೇ ಅನಧಿಕೃತ ಕಟ್ಟಡಗಳು ನಾಯಿಕೊಡೆಯಂತೆ ತಲೆ ಎತ್ತಿವೆ. ಭಾರತೀಯ ಪುರಾತತ್ವ ಕಾಯ್ದೆ, ಸುಪ್ರೀಂಕೋರ್ಟ್ ಆದೇಶದಂತೆ ಸ್ಮಾರಕದ 300 ಮೀಟರ್ ಅಂತರದಲ್ಲಿ ಯಾವುದೇ ಕಟ್ಟಡ, ಜನವಸತಿ ಪ್ರದೇಶ ಇರುವಂತಿಲ್ಲ. ಆದರೆ ಕಲ್ಲಿನ ಕೋಟೆಯ ನಾಲ್ಕೈದು ಮೀಟರ್ ಅಂತರದಲ್ಲೇ ಜನವಸತಿ ಪ್ರದೇಶಗಳಿವೆ. ಜೊತೆಗೆ ಪ್ರಭಾವಿಗಳ ಶಿಕ್ಷಣ ಸಂಸ್ಥೆ, ವಾಣಿಜ್ಯ ಮಳಿಗೆ, ರೆಸ್ಟೋರೆಂಟ್‌ಗಳಿವೆ.
ಬುರುಜನಹಟ್ಟಿಯಿಂದ ಚಿಕ್ಕಪೇಟೆವರೆಗೂ ಐತಿಹಾಸಿಕ ಬಂದೀಖಾನೆಯ ಕೂಗಳತೆ ದೂರದಲ್ಲೇ ಮನೆಗಳಿವೆ. ಅಕ್ರಮ ಕಟ್ಟಡಗಳು ಬಳ್ಳಿಯಂತೆ ಹಬ್ಬುತ್ತಿರುವುದನ್ನು ತಡೆಯಲು ಎಎಸ್‌ಐಗೆ ಸಾಧ್ಯವಾಗಿಲ್ಲ. 3ನೇ ಸುತ್ತಿನ ಕೋಟೆಯಿಂದ ಬೆಟ್ಟದ ಸುತ್ತಲೂ ಎಎಸ್‌ಐ ಬೇಲಿ ಹಾಕಿಕೊಂಡಿದ್ದು ಬೆಟ್ಟದ ಸುತ್ತಳತೆ ಮಾತ್ರ ತನ್ನ ವ್ಯಾಪ್ತಿಗೆ ಬರುತ್ತದೆ. ಉಳಿದ ಸ್ಮಾರಕಗಳಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದೆ. ಜೊತೆಗೆ ರಾಜ್ಯ ಪುರಾತತ್ವ ಇಲಾಖೆ ಕೂಡ ದುರ್ಗದ ಸ್ಮಾರಕಗಳ ಸಂರಕ್ಷಣೆಗೆ ಮುಂದಾಗಿಲ್ಲ. ಪ್ರವಾಸೋದ್ಯಮ ಇಲಾಖೆ ಕೂಡ ಇದ್ದೂ ಇಲ್ಲದಂತಿದೆ.
ಕೋಟೆ ಮುಂಭಾಗದಲ್ಲಿ ಜನವಸತಿ ಮನೆಗಳು, ವಾಣಿಜ್ಯ ಮಳಿಗೆಗಳಿರುವ ಕಾರಣ ಪ್ರವಾಸಿಗರು ತಮ್ಮ ವಾಹನ ನಿಲ್ಲಿಸಲು ಪರದಾಡುತ್ತಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಾದಾಗ ವಾಹನ ನಿಲ್ಲಿಸಲು ಅವರು ಅನುಭವಿಸುವ ಯಾತನೆ ಹೇಳತೀರದು. ಸಾರಿಗೆ ಸಂಸ್ಥೆ ಬಸ್ ಸೇರಿ ದೊಡ್ಡ ವಾಹನಗಳು ಕೋಟೆ ಆವರಣಕ್ಕೆ ಬರಲು ಸಾಧ್ಯವೇ ಇಲ್ಲದಾಗಿದೆ.
‘ಜಿಲ್ಲೆಯ ಜನಪ್ರತಿನಿಧಿಗಳು, ಪ್ರಭಾವಿಗಳು, ಭೂಗಳ್ಳರು ಕಲ್ಲಿನಕೋಟೆಯ ಸುತ್ತಲೂ ಅನಧಿಕೃತ ಕೋಟೆ ಕಟ್ಟಿಕೊಂಡಿದ್ದಾರೆ. ಮೊದಲು ಅಕ್ರಮ ಕಟ್ಟಡಗಳು ತೆರವುಗೊಳ್ಳಬೇಕು. ಅನಧಿಕೃತ ಕಟ್ಟಡಗಳು ತೆರವುಗೊಂಡರೆ ಕಲ್ಲಿನಕೋಟೆಯನ್ನು ಯುನೆಸ್ಕೊ ಪಾರಂಪರಿಕ ಪಟ್ಟಿ ಸೇರ್ಪಡೆ ಮಾಡಲು ದಾರಿ ಮಾಡಿಕೊಟ್ಟಂತಾಗುತ್ತದೆ’ ಎಂದು ಯುವ ಸಂಶೋಧಕ ಪ್ರೊ.ಎನ್.ಎಸ್.ಮಹಾಂತೇಶ್ ಹೇಳಿದರು.
ಚಿತ್ರದುರ್ಗದ ಹೆಮ್ಮೆಯ ಪ್ರತೀಕವಾಗಿರುವ ಕಲ್ಲಿನಕೋಟೆ ಸಂರಕ್ಷಿಸುವುದು ನಮ್ಮ ಜವಾಬ್ದಾರಿಯಾಗಿದೆ. ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಭೆ ನಡೆಸಲಾಗುವುದುಟಿ.ವೆಂಕಟೇಶ್ ಜಿಲ್ಲಾಧಿಕಾರಿ
ಸಂಸದ ಕಾರಜೋಳ ಪ್ರಯತ್ನಿಸಲಿ ‘ಸಂಸದ ಗೋವಿಂದ ಕಾರಜೋಳ ಅವರು ಚಿತ್ರದುರ್ಗದ ಕಲ್ಲಿನಕೋಟೆ ಹಾಗೂ ಇತರ ಸ್ಮಾರಕಗಳ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯಬೇಕು. ಅವರು ಕೋಟೆಗೆ ಬಂದು ವೀಕ್ಷಣೆ ಮಾಡಬೇಕು. ಅವರು ಕೇಂದ್ರ ಸರ್ಕಾರದ ಜೊತೆ ಸಮನ್ವಯ ಸಾಧಿಸಿ ಎಎಸ್‌ಐ ಅಧಿಕಾರಿಗಳ ಕಾರ್ಯವೈಖರಿ ಸುಧಾರಿಸುವಂತೆ ಕ್ರಮ ವಹಿಸಬೇಕು’ ಎಂದು ಇತಿಹಾಸಕಾರರು ಒತ್ತಾಯಿಸಿದರು. ‘ಕಾರಜೋಳ ಅವರು ಸಂಸದರಾಗಿ ಆಯ್ಕೆಯಾದ ನಂತರ ಒಮ್ಮೆಯೂ ಕಲ್ಲಿನಕೋಟೆಗೆ ಭೇಟಿ ನೀಡಿಲ್ಲ. ಕೇಂದ್ರ ಸರ್ಕಾರಿ ಸ್ವಾಮ್ಯದ ಎಎಸ್‌ಐ ಕಚೇರಿಗೆ ಬಂದು ಅವರು ಪರಿಶೀಲಿಸಬೇಕು. ಸ್ಮಾರಕಗಳ ನಿರ್ವಹಣೆಯಲ್ಲಿ ವಿಫಲವಾಗಿರುವ ಅಲ್ಲಿಯ ಅಧಿಕಾರಿಗಳಿಗೆ ಚುರುಕು ಮುಟ್ಟಿಸಬೇಕು’ ಎಂದು ಆಗ್ರಹಿಸಿದರು.
ಈಗಿನ ಪರಿಸ್ಥಿತಿಯಲ್ಲಿ ಕನಸಿನ ಮಾತು ‘ಚಿತ್ರದುರ್ಗ ಈಗಿರುವ ಪರಿಸ್ಥಿತಿಯಲ್ಲಿ ಕಲ್ಲಿನಕೋಟೆ ಹಾಗೂ ಇತರ ಸ್ಮಾರಕಗಳನ್ನು ಯುನೆಸ್ಕೊ ಗುರುತಿಸುವಂತಹ ಪರಿಸ್ಥಿತಿ ಇಲ್ಲ. ನಗರ ರಚನೆಯೇ ದೋಷಪೂರಿತವಾಗಿದೆ. ಸ್ಥಳೀಯ ಚರಿತ್ರೆಯನ್ನು ಉಳಿಸಲು ಪ್ರಯತ್ನಿಸುವ ಯಾವುದೇ ಸಂಘಟನೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಶ್ವ ಪಾರಂಪರಿಕ ತಾಣವನ್ನಾಗಿ ಗುರುತಿಸುವುದು ಕನಸಿನ ಮಾತಾಗಿದೆ’ ಎಂದು ಹಿರಿಯ ಸಂಶೋಧಕ ಲಕ್ಷ್ಮಣ ತೆಲಗಾವಿ ಹೇಳಿದರು. ‘ಕಲ್ಲಿನಕೋಟೆ ಸೇರಿದಂತೆ ದುರ್ಗದ ಸ್ಮಾಕರಗಳು ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಳ್ಳುವ ಎಲ್ಲಾ ಯೋಗ್ಯತೆ ಹೊಂದಿವೆ. ಆದರೆ ಸ್ಥಳೀಯ ಜನಪ್ರತಿನಿಧಿಗಳು ಸಾರ್ವಜನಿಕರು ಇತಿಹಾಸದ ಪಳಿಯುಳಿಕೆ ಉಳಿಸುವ ನಿಟ್ಟಿನಲ್ಲಿ ಚಿಂತಿಸಬೇಕು. ಚಿತ್ರದುರ್ಗದ ಜನರಲ್ಲಿ ಆ ಚಿಂತನೆ ಇದ್ದಂತೆ ಕಾಣುತ್ತಿಲ್ಲ’ ಎಂದರು.
ನಿರ್ಧಾರ ಕೈಗೊಂಡು ಕೇಂದ್ರಕ್ಕೆ ಕಳುಹಿಸಿ ‘ಜನಪ್ರತಿನಿಧಿಗಳು ಅಧಿಕಾರಿಗಳು ಕಲ್ಲಿನಕೋಟೆಯ ಸಂರಕ್ಷಣೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕು. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಸಭೆಯಲ್ಲಿ ಯುನೆಸ್ಕೊ ಮಾನ್ಯತೆ ಪಡೆಯಲು ಒತ್ತಾಯಿಸಿ ನಿರ್ಧಾರ ಕೈಗೊಳ್ಳಬೇಕು. ಅದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಗಳನ್ನು ತಲುಪಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಸಾಹಿತಿ ಕೆ.ವೆಂಕಣ್ಣಾಚಾರ್ ಹೇಳಿದರು. ‘ಕೋಟೆಯಲ್ಲಿ ಕಾವಲುಗಾರನಾಗಿ ಕೃಷ್ಣಪ್ಪ ಎಂಬ ವ್ಯಕ್ತಿಯೊಬ್ಬರಿದ್ದರು. ಕೋಟೆಯಲ್ಲಿ ಏನೇ ತೊಂದರೆಯಾದರೂ ಡಿ.ಸಿ.ಕಚೇರಿಗೆ ಬಂದು ಕೂರುತ್ತಿದ್ದರು. ಅದನ್ನು ಪರಿಹರಿಸುವಂತೆ ಒತ್ತಾಯಿಸುತ್ತಿದ್ದರು. ಜಿಜಾ ಹರಿಸಿಂಗ್ ಎಸ್‌ಪಿ ಆಗಿದ್ದಾಗ ಕೋಟೆ ಸಂರಕ್ಷಣೆಗೆ ಪ್ರಯತ್ನಿಸಿದ್ದರು. ಆದರೆ ಇಲ್ಲಿಯ ಕೆಲವರು ಪೊಲೀಸರ ಕೆಲಸ ಕೋಟೆಯ ಸಂರಕ್ಷಣೆಯಲ್ಲ ಎಂದು ಹಂಗಿಸಿದರು’ ಎಂದು ಅವರು ನೆನಪು ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.