ಚಿಕ್ಕಜಾಜೂರು: ಚಿಕ್ಕಜಾಜೂರು ಸೇರಿದಂತೆ ಸುತ್ತಮುತ್ತಲ ಕೆಲವು ಗ್ರಾಮಗಳಲ್ಲಿ ನಿತ್ಯ ಸುರಿಯುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಎರಡು ವಾರಗಳಿಂದ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಹೊಲ ಹಾಗೂ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ, ಕೆಸರಿನ ಗದ್ದೆಯಂತಾಗಿವೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಗುತ್ತಿದೆ. ಬೆಳೆದು ನಿಂತಿರುವ ಮೆಕ್ಕೆಜೋಳದ ಹೊಲಗಳಲ್ಲಿ ಮುಳ್ಳುಸಜ್ಜೆ ಹಾಗೂ ಇತರೆ ಹುಲ್ಲಿನ ಕಳೆ ಬೆಳೆದು ನಿಂತಿದೆ. ಮೇಲುಗೊಬ್ಬರವನ್ನು ಹಾಕಲು ಮಳೆ ಅಡ್ಡಿಯಾಗುತ್ತಿದೆ. ರಾಗಿ ಬಿತ್ತನೆ ಮಾಡಲು ಜಮೀನುಗಳನ್ನು ಹಸನು ಮಾಡಿಕೊಳ್ಳಲು ಸಹ ಮಳೆ ಬಿಡದಿರುವುದು ರಾಗಿ ಬಿತ್ತನೆಗೆ ಹಿನ್ನಡೆಯಾಗಬಹುದೆಂದು ರೈತರು ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಇಳುವರಿ ಕುಂಠಿತವಾಗುವ ಭೀತಿಯಲ್ಲಿ ತೋಟದ ಬೆಳೆಗಾರರು: ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಅಡಿಕೆ ಹಾಗೂ ತೆಂಗಿನ ಮರಗಳಿಗೆ ಗೊಬ್ಬರ ಹಾಕುವುದರಿಂದ ಈಚು ಹಾಗೂ ಕಾಯಿಗಳು ಉದುರುವುದನ್ನು ತಪ್ಪಿಸಬಹುದು. ಆದರೆ, ನಿತ್ಯ ಮಳೆ ಸುರಿಯುತ್ತಿರುವುದರಿಂದ ಯಾವುದೇ ಗೊಬ್ಬರವನ್ನು ಹಾಕಲು ಸಾಧ್ಯವಾಗುತ್ತಿಲ್ಲ. ಅಡಿಕೆ ತೋಟಗಳಲ್ಲಿ ಪ್ರತಿ ಅಡಿಕೆ ಮರದ ಕೆಳಗೆ ಒಂದರಿಂದ ಎರಡು ಕುಂಚಿಗೆಯಲ್ಲಿನ ಅಡಿಕೆ ಈಚುಗಳು ಹಾಗೂ ಸಣ್ಣ ಅಡಿಕೆ ಕಾಯಿಗಳು ಉದುರುತ್ತಿರುವುದರಿಂದ ಈ ಬಾರಿ ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ಹೋಬಳಿಯ ರೈತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.