ADVERTISEMENT

ಚಿತ್ರದುರ್ಗ: ರಾಜ್ಯಮಟ್ಟದ ಬುಡಕಟ್ಟು ಉತ್ಸವಕ್ಕೆ ಚಾಲನೆ- ಕಲೆ, ಸಂಸ್ಕೃತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 7:48 IST
Last Updated 9 ನವೆಂಬರ್ 2021, 7:48 IST
ಚಿತ್ರದುರ್ಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬುಡಕಟ್ಟು ಉತ್ಸವದಲ್ಲಿ ಗಮನ ಸೆಳೆದ ಬುಡಕಟ್ಟು ಕಲಾವಿದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಬುಡಕಟ್ಟು ಉತ್ಸವದಲ್ಲಿ ಗಮನ ಸೆಳೆದ ಬುಡಕಟ್ಟು ಕಲಾವಿದರು.   

ಚಿತ್ರದುರ್ಗ: ಕಾಡು ಜನರ ಆಹಾರ ಪದ್ಧತಿ ಪರಿಚಯಿಸುವ ತಿನಿಸುಗಳ ಸುವಾಸನೆ ಇಡೀ ಮೈದಾನವನ್ನು ಆವರಿಸಿತ್ತು. ರೋಗನಿರೋಧಕ ಶಕ್ತಿ ಹೆಚ್ಚಿಸುವ ಔಷಧೀಯ ಸಸ್ಯ, ಅರಣ್ಯ ಉಪ ಉತ್ಪನ್ನ ಪರಿಚಯಿಸುವ ಪ್ರದರ್ಶನ ಮತ್ತೊಂದೆಡೆ. ಬುಡಕಟ್ಟುಗಳ ಜೀವಸೆಲೆಯಾಗಿರುವ ಹಾಡು–ಕುಣಿತದ ಕಲರವ ಕಳೆಗಟ್ಟುವಾಗ ನಿಧಾನವಾಗಿ ಚಳಿ ಮೈಕೊರೆಯಲು ಆರಂಭಿಸಿತು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡ ಎರಡು ದಿನಗಳ ಬುಡಕಟ್ಟು ಉತ್ಸವದಲ್ಲಿ ಕಂಡುಬಂದ ದೃಶ್ಯವಿದು.

ಬುಡಕಟ್ಟು ಸಮುದಾಯದ ಜನರ ಸಾಂಸ್ಕೃತಿಕ ವಿನಿಮಯದ ಉದ್ದೇಶದಿಂದ ಏರ್ಪಡಿಸಿದ್ದ ಉತ್ಸವ ಗಮನ ಸೆಳೆಯಿತು. ರಾಜ್ಯದ ಹಲವೆಡೆಯಿಂದ ಆದಿವಾಸಿ ಜನರು ಇಲ್ಲಿ ಸೇರಿದ್ದರು. ಅರಣ್ಯ ಉಪ ಉತ್ಪನ್ನ ಪರಿಚಯಿಸಿ, ಜನರಿಗೆ ಆಹಾರ ಪದ್ಧತಿಯ ಶ್ರೇಷ್ಠತೆಯನ್ನು ಸಾರಿದರು. ಕಾಡು ಜನರ ಜೀವನ ಶೈಲಿಗೆ ನಗರವಾಸಿಗಳು ತಲೆದೂಗಿದರು.

ADVERTISEMENT

ನಗರ ಜೀವನ ಶೈಲಿಯಿಂದ ಸೃಷ್ಟಿಯಾದ ಹಲವು ಕಾಯಿಲೆಗಳಿಗೆ ಕಾಡಿನ ಔಷಧೀಯ ಸಸ್ಯಗಳಲ್ಲಿ ಇರುವ ಪರಿಹಾರವನ್ನು ಖಾತರಿಪಡಿಸುವ ಮಳಿಗೆಗಳೇ ಹೆಚ್ಚಾಗಿದ್ದವು. ಅರಣ್ಯದಲ್ಲಿ ಲಭ್ಯವಿರುವ ಗಿಡಮೂಲಿಕೆಗಳನ್ನು ಬಳಸಿ ತಯಾರಿಸಿದ ಔಷಧಗಳನ್ನು ಜನರು ಕುತೂಹಲದಿಂದ ಖರೀದಿಸಿದರು. ಸೀಗೆಪುಡಿ, ಕಲ್ಲುಹೂ, ಜೇನುತುಪ್ಪ, ದ್ರಾಕ್ಷಿ, ರಾಗಿ ಬೋಟಿ ಹೀಗೆ ಹಲವು ಉತ್ಪನ್ನಗಳನ್ನು ಜನರು ಪರಿಶೀಲಿಸಿದರು.

ಎಚ್‌.ಡಿ.ಕೋಟೆ ತಾಲ್ಲೂಕಿನ ಬಸವನಗಿರಿ ಹಾಡಿಯ ಬಸಮ್ಮ ಅವರು ತಯಾರಿಸಿದ ಔಷಧ ಅಪರೂಪ ಎನಿಸುವಂತೆ ಇದ್ದವು. ಮಧುಮೇಹ ನಿಯಂತ್ರಣದ ಔಷಧ, ಹಲ್ಲು ನೋವು ನಿವಾರಕ, ಜಠರ ಶುದ್ಧಿ ಔಷಧವನ್ನು ಪಾರಂಪರಿಕ ರೀತಿಯಲ್ಲಿ ಸಿದ್ಧಪಡಿಸಿ ಇಡಲಾಗಿತ್ತು. ಕೂದಲು ಉದುರುವುದನ್ನು ತಡೆಯುವ ಹಾಗೂ ಕೂದಲು ಬೆಳೆಯಲು ನೆರವಾಗುವ ಹರ್ಬಲ್‌ ಎಣ್ಣೆಯನ್ನು ಹುಣಸೂರು ತಾಲ್ಲೂಕಿನ ಶಂಕರಾಪುರ ಹಾಡಿಯ ಮಹಿಳೆಯರೇ ತಯಾರಿಸಿ ಉದ್ಯಮದ ಸ್ಪರ್ಶ ನೀಡಿದ್ದಾರೆ.

ಬಿದಿರಿನ ಆಲಂಕಾರಿಕ ವಸ್ತುಗಳು, ಗಿಡಮೂಲಿಕೆ ಮಳಿಗೆಗಳು ಇದ್ದವು. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಕ್ಕಿಪಿಕ್ಕಿ ಜನಾಂಗದ ಹೂರಾಜ್‌ ಅವರು ತಂದಿದ್ದ ಹಕ್ಕಿಯ ಬಲೆಗಳು ಆಕರ್ಷಕವಾಗಿದ್ದವು. ನೀರುಕೋಳಿ, ಕೌಜು, ಪುರಲೆಯನ್ನು ಹಿಡಿಯುವ ಪೌಜುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ದೃಷ್ಟಿ ಗೊಂಬೆ ಸೇರಿ ಇತರ ಪರಿಕರಗಳು ಮಾರಾಟಕ್ಕೆ ಇದ್ದವು.

ಬಂಬೂ ಬಿರಿಯಾನಿ ಘಮಲು

ಹುಣಸೂರು ತಾಲ್ಲೂಕಿನ ಹಲವು ಹಾಡಿಗಳಿಂದ ಬಂದಿರುವ ಆದಿವಾಸಿ ಜನರು ತಯಾರಿಸಿದ ಬಂಬೂ ಬಿರಿಯಾನಿಯ ಘಮಲು ಎಲ್ಲೆಡೆ ಪಸರಿಸಿತ್ತು. ಉತ್ಸವದ ಕೇಂದ್ರ ಬಿಂದುವಾಗಿದ್ದ ಆಹಾರ ಮಳಿಗೆ ಜನರನ್ನು ಸೆಳೆಯಿತು.

ಅಕ್ಕಿ, ಚಿಕನ್‌ ಹಾಗೂ ಮಸಾಲೆಯನ್ನು ಬಿದಿರಿನ ಬಂಬೂವಿನಲ್ಲಿ ತುಂಬಿ ಅದನ್ನು ಬೆಂಕಿಗೆ ಹಾಕಲಾಯಿತು. ಅರ್ಧ ಗಂಟೆ ಬೆಂಕಿಯಲ್ಲಿ ಸುಟ್ಟ ಬಂಬೂವಿನಿಂದ ಕುಕ್ಕರ್‌ ವಿಸಲ್‌ನಂತಹ ಶಬ್ದ ಹೊರಹೊಮ್ಮಿತು. 15 ನಿಮಿಷ ಹೊರಗಿಟ್ಟರೆ ಬಂಬೂ ಬಿರಿಯಾನಿ ಸಿದ್ಧ. ಆಹಾರಪ್ರಿಯರ ಎದುರೇ ಇದನ್ನು ತಯಾರಿಸಿ ನೀಡಲಾಯಿತು.

ಬಿದಿರಕ್ಕಿ ಪಾಯಸ, ಉಪ್ಪಿಟ್ಟು ಹಾಗೂ ರಕ್ತದೊತ್ತಡಕ್ಕೆ ಔಷಧವಾಗಿರುವ ಮಾಕಳಿ ಬೇರು ಟೀಯನ್ನು ಬಹುತೇಕ ಎಲ್ಲರೂ ಸವಿದರು.

ಗಮನಸೆಳೆದ ಛಾಯಾಚಿತ್ರ ಪ್ರದರ್ಶನ

ಛಾಯಾಗ್ರಾಹಕ ನಿಸರ್ಗ ಗೋವಿಂದರಾಜು ಅವರು ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನ ಗಮನ ಸೆಳೆಯಿತು. ಬುಡಕಟ್ಟು ಸಂಸ್ಕೃತಿಯನ್ನು ಕ್ಯಾಮೆರಾದಲ್ಲಿ ಕಟ್ಟಿಕೊಟ್ಟದ್ದು ವೀಕ್ಷಕರನ್ನು ಮೂಕವಿಸ್ಮಿತಗೊಳಿಸುವಂತೆ ಇತ್ತು.

ಮಳಿಗೆಯ ಮುಂಭಾಗದಲ್ಲಿ ಕಲ್ಲಿನಕೋಟೆಯ ಒಂಟಿಕಂಬದ ಬಸವಣ್ಣ, ಉಯ್ಯಾಲೆ ಕಂಬ ಹಾಗೂ ವಾಣಿವಿಲಾಸ ಸಾಗರ ಜಲಾಶಯದ ವಿಹಂಗಮ ನೋಟ ಸ್ವಾಗತ ಕೋರುತ್ತಿದ್ದವು. ಮಳಿಗೆಯ ಬಹುತೇಕ ಚಿತ್ರಗಳು ಬುಡಕಟ್ಟು ಸಮುದಾಯದ ಸಂಸ್ಕೃತಿಗೆ ಸಂಬಂಧಿಸಿದ್ದವು. ಬುಡಕಟ್ಟು ಜನರ ಜೀವನಶೈಲಿಯನ್ನು ಪರಿಚಯಿಸಿದವು.

ಕಾಡುಗೊಲ್ಲರು ಹಾಗೂ ಮ್ಯಾಸಬೇಡ ಸಮುದಾಯದ ಜನರ ಬದುಕನ್ನು ಗೋವಿಂದರಾಜು ಅವರು ಚಿತ್ರಗಳಲ್ಲಿ ಹಿಡಿದಿಟ್ಟ ಪರಿ ವಿಶೇಷವಾಗಿತ್ತು. ದನಗಳೊಂದಿಗೆ ಅವರು ಇರುವ ರೀತಿ, ಹಾಡಿಗಳ ಬದುಕಿನ ವಿವರ ಚಿತ್ರಗಳ ಚೌಕಟ್ಟಿನಿಂದ ಇಣುಕುತ್ತಿದ್ದವು.

ನೀರಸವಾಗಿದ್ದ ಉತ್ಸವ

ರಾಜ್ಯಮಟ್ಟದ ಬುಡಕಟ್ಟು ಉತ್ಸವವಾದರೂ ನೀರಸವಾಗಿತ್ತು. ನಿಗದಿತ ಸಮಯಕ್ಕೆ ಉತ್ಸವ ಆರಂಭವಾಗದ ಪರಿಣಾಮ ಕಲಾವಿದರು ಹಾಗೂ ವಾಣಿಜ್ಯ ಮಳಿಗೆಯ ವ್ಯವಹಾರಕ್ಕೆ ತೊಂದರೆ ಉಂಟಾಯಿತು.

ಸಂಜೆ 5ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮ ಒಂದೂವರೆ ಗಂಟೆ ವಿಳಂಬವಾಗಿ ಆರಂಭವಾಯಿತು. ಮೈದಾನದಲ್ಲಿ ದೊಡ್ಡ ವೇದಿಕೆ ನಿರ್ಮಿಸಲಾಗಿತ್ತು. ಅದಕ್ಕೆ ತಕ್ಕಂತೆ ಮೈದಾನದಲ್ಲಿ ಆಸನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ, ಪ್ರೇಕ್ಷಕರ ಕೊರತೆ ಎದ್ದುಕಾಣುತ್ತಿತ್ತು.

ಆಹಾರ ಮಳಿಗೆಯ ಎದುರು ಮಾತ್ರ ಹೆಚ್ಚು ಜನರು ಇದ್ದರು. ಕಾಡಿನ ಉತ್ಪನ್ನಗಳ ಖರೀದಿಗೆ ಆಸಕ್ತಿ ತೋರಲಿಲ್ಲ. ಬಹುಬೇಗ ಸಜ್ಜಾಗಿದ್ದ ಕಲಾವಿದರು ವೇದಿಕೆ ಕಾರ್ಯಕ್ರಮ ಮುಗಿಯುವವರೆಗೆ ಕಾದು ಸುಸ್ತಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.