ADVERTISEMENT

ಭದ್ರಾ ಮೇಲ್ದಂಡೆ: ನಾಯಕನಹಟ್ಟಿ ಬಂದ್‌ಗೆ ಬೆಂಬಲ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2024, 16:40 IST
Last Updated 9 ಫೆಬ್ರುವರಿ 2024, 16:40 IST

ನಾಯಕನಹಟ್ಟಿ: ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಎಂದು ಪಟ್ಟಣದ 7ನೇ ವಾರ್ಡ್ ಸದಸ್ಯ ಸೈಯದ್‌ ಅನ್ವರ್ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ನಾಯಕನಹಟ್ಟಿ ಹೋಬಳಿಯು ನಿರಂತರವಾಗಿ ಬರಗಾಲಕ್ಕೆ ತುತ್ತಾಗಿದೆ. ಪ್ರತಿವರ್ಷ ಸರ್ಕಾರವು ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸುತ್ತಿವೆ. ಇಲ್ಲಿನ ಜನರು ಮಳೆಯಾಶ್ರಿತ ಕೃಷಿಯನ್ನು ನಂಬಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. 30 ವರ್ಷಗಳಿಂದ ಈ ಭಾಗದ ರೈತರು ಭದ್ರಾ ಮೇಲ್ದಂಡೆ ಯೋಜನೆಗಾಗಿ ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಸರ್ಕಾರ ನಾಯಕನಹಟ್ಟಿ ಹೋಬಳಿಯನ್ನು ಆದ್ಯತೆಯಾಗಿಸಿಕೊಂಡು ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ನಾಯಕನಹಟ್ಟಿ ಹೋಬಳಿಯ 32ಕ್ಕೂ ಹೆಚ್ಚು ಸಂಘಟನೆಗಳು ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವಿಳಂಬ ನೀತಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮಧೋರಣೆಯನ್ನು ಖಂಡಿಸಿ ಫೆ.13ರಂದು ನಾಯಕನಹಟ್ಟಿ ಬಂದ್ ಮಾಡಲು ಮುಂದಾಗಿವೆ. ಪಟ್ಟಣದ 16 ವಾರ್ಡ್‌ಗಳ ಸದಸ್ಯರು ಬಂದ್‌ಗೆ ಬೆಂಬಲ ಸೂಚಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು 14ನೇವಾರ್ಡ್ ಸದಸ್ಯ ಎನ್.ಮಹಾಂತಣ್ಣ ಹೇಳಿದರು.

ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಪಿ.ತಿಪ್ಪೇಸ್ವಾಮಿ, ಮಹೇಶ್ವರಿ, ಗುರುಶಾಂತಮ್ಮ, ಸುನೀತಾ, ಟಿ.ಮಂಜುಳಾ, ಪಾಪಮ್ಮ, ಸರ್ವಮಂಗಳ, ತಿಪ್ಪೇಶ್, ಪಿ.ಓಬಯ್ಯ, ಮುಖಂಡರಾದ ಜಿ.ಬಿ.ಮುದಿಯಪ್ಪ, ಟಿ.ಬಸಣ್ಣ, ಆರ್.ಶ್ರೀಕಾಂತ್, ಆರ್.ಪಾಲಯ್ಯ, ದಯಾನಂದ್ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.