ADVERTISEMENT

ಅವ್ಯವಹಾರ ನಡೆಸಿದವರನ್ನು ಹೊರಹಾಕಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:25 IST
Last Updated 17 ಜುಲೈ 2025, 6:25 IST
ಹಿಂದೂ ಗಣಪತಿ ಉತ್ಸವ ಆಯೋಜನೆ ಸಂಬಂಧ ನಡೆದ ಸಭೆಯಲ್ಲಿ ಜಿತೇಂದ್ರ ಹುಲಿಕುಂಟೆ ಮಾತನಾಡಿದರು
ಹಿಂದೂ ಗಣಪತಿ ಉತ್ಸವ ಆಯೋಜನೆ ಸಂಬಂಧ ನಡೆದ ಸಭೆಯಲ್ಲಿ ಜಿತೇಂದ್ರ ಹುಲಿಕುಂಟೆ ಮಾತನಾಡಿದರು   

ಚಿತ್ರದುರ್ಗ: ಹಿಂದೂ ಮಹಾಗಣಪತಿ ಉತ್ಸವ ವಿಶ್ವ ಹಿಂದೂ ಪರಿಷತ್ ಹೆಸರಿನಲ್ಲೇ ಆಗಬೇಕು. ಅವ್ಯವಹಾರದ ಆರೋಪ ಎದುರಿಸುತ್ತಿರುವ ಪದಾಧಿಕಾರಿ ಟಿ.ಬದ್ರಿನಾಥ್ ಅವರನ್ನು ಹೊರಗೆ ಹಾಕಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಹಿಂದು ಮಹಾಗಣಪತಿ ಉತ್ಸವದ ಸಿದ್ಧತೆ ಅಂಗವಾಗಿ ನಗರದ ಗಂಗಾಂಬಿಕಾ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವಕೀಲ ಜಿತೇಂದ್ರ ಹುಲಿಕುಂಟೆ ಮಾತನಾಡಿ, ‘ನಾವು ವಿಎಚ್‌ಪಿ, ಬಜರಂಗದಳ ಸೇರಿ ಯಾವುದೇ ಹಿಂದೂ ಸಂಘಟನೆಗಳ ವಿರೋಧಿಗಳಲ್ಲ. 2006ರಲ್ಲಿ ಚಿಕ್ಕಪೇಟೆಯಲ್ಲಿ ಮೊದಲು ಗಣಪತಿ ಪ್ರತಿಷ್ಠಾಪಿಸಿದ್ದೆವು. ನಂತರ ಸೈಟ್ ಬಾಬಣ್ಣ, ಮಾದಾರ ಚನ್ನಯ್ಯ ಸ್ವಾಮೀಜಿ ಕೂಡ ಜೊತೆ ಸೇರಿದ್ದರು. ಹಿಂದೆ ನಾನು ಬದರೀನಾಥ್ ಜೊತೆ ಕೆಲಸ ಮಾಡುತ್ತಿದ್ದಾಗ ಗಣೇಶೋತ್ಸವಕ್ಕೆ ಹೋಗುತ್ತೇನೆ ಎಂದಾಗ ‘ತಲೆ ಕೆಟ್ಟಿದೆಯಾ’ ಎನ್ನುತ್ತಿದ್ದರು. ಈಗ ತಾನೇ ಮಾಡಿದ್ದು ಎಂದು ಹೇಳುತ್ತಿದ್ದಾರೆ. ಗಣೇಶೋತ್ಸವದಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವವರನ್ನು ಹೊರ ಹಾಕಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಸುರೇಶ್ ಬಾಬು ಮಾತನಾಡಿ, ‘ಹಿಂದೂ ಮಹಾಗಣಪತಿ ಉತ್ಸವದಲ್ಲಿ ಕೆಲಸ ಮಾಡಿದ ಅನೇಕ ಕಾರ್ಯಕರ್ತರು ಲೆಕ್ಕ/// ಕೇಳಿದವರನ್ನು ಹೊರಗೆ ಹಾಕಲಾಗಿದೆ. ಉತ್ಸವ ಸಮಿತಿ ಬದರೀನಾಥ್ ಹಿಡಿತದಲ್ಲಿದೆ. ಆ ವ್ಯಕ್ತಿಯನ್ನು ಅಲ್ಲಿಂದ ಹೊರಗೆ ಹಾಕಬೇಕು. ಈ ವಿಚಾರದಲ್ಲಿ ಕಳೆದ ವರ್ಷ ಕೂಡ ವಿಎಚ್‌ಪಿ ಪ್ರಮುಖರನ್ನು ಸಂಪರ್ಕಿಸಲಾಗಿತ್ತು. ಆದರೆ, ಯಾವುದೇ ಪ್ರಕ್ರಿಯೆ ಆಗಿಲ್ಲ. ಈ ವರ್ಷ ಹೊರಗೆ ಹಾಕದಿದ್ದರೆ ಅದೇ ಜಾಗದಲ್ಲಿ ನಾವು ಕೂಡ ಗಣಪತಿ ಕೂರಿಸುತ್ತೇವೆ’ ಎಂದು ಹೇಳಿದರು.

ಆರ್‌ಎಸ್‌ಎಸ್‌ನ ನಾಗೇಶ್ ಮಾತನಾಡಿ, ‘ಸಂಘ ಪರಿವಾರದ ಸಂಘಟನೆಗಳು ದೇಶದಲ್ಲಿ ಹಿಂದೂ ಸಮಾಜದ ಸಂಘಟನೆಗಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿವೆ. ಸಂಘದ ಉದ್ದೇಶ, ಹಿನ್ನೆಲೆ ಅರಿತುಕೊಂಡು ಕಾರ್ಯಕರ್ತರು ಮುಂದುವರಿಯಬೇಕು. ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರ ತೆಗೆದುಕೊಳ್ಳದೆ ನಾಲ್ಕು ಗೋಡೆಗಳ ನಡುವೆ ಕುಳಿತು ಪರಿಹಾರ ಕಂಡುಕೊಳ್ಳಬೇಕು’ ಎಂದು ತಿಳಿಸಿದರು.

ಇದೇ ವೇಳೆ ಕಾರ್ಯಕರ್ತರು ‘ಬದ್ರೀ ಹಠವೋ, ಹಿಂದೂ ಮಹಾಗಣಪತಿ ಬಚಾವೋ’ ಎಂದು ಘೋಷಣೆ ಕೂಗುತ್ತಾ ಹೊರ ನಡೆದರು. ಸಭೆಯಲ್ಲಿ ರುದ್ರೇಶ್, ಓಂಕಾರ್, ಯರಿಸ್ವಾಮಿ, ಯೋಗೇಶ್, ಕೋಟೇಶ್, ನಾಗೇಶ್, ಮಲ್ಲಾಪುರ ನಾಗರಾಜ್, ಲೀಲಾಧರ ಠಾಕೂರ್, ಶ್ರೀನಿವಾಸ್, ಚಾರ್ಲಿ ಮಂಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.