ADVERTISEMENT

ಹಡಪದ ಅಪ್ಪಣ್ಣನ ಮನೆ, ಜನ್ಮಸ್ಥಳ ಸ್ಮಾರಕವಾಗಲಿ

ಜಿಲ್ಲಾಡಳಿತದಿಂದ ಜಯಂತಿ ಆಚರಣೆ; ಪ್ರಾಧ್ಯಾಪಕ ಡಿ.ಒ.ಸದಾಶಿವ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 4:33 IST
Last Updated 11 ಜುಲೈ 2025, 4:33 IST
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅಪ್ಪಣ್ಣ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಅಪ್ಪಣ್ಣ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು   

ಚಿತ್ರದುರ್ಗ: ‘ವಿಜಯಪುರ ಜಿಲ್ಲೆ ಮಸಬಿನಹಾಳ ಗ್ರಾಮದಲ್ಲಿರುವ ಹಡಪದ ಅಪ್ಪಣ್ಣನವರ ಜನ್ಮಸ್ಥಳ, ಮನೆಯನ್ನು ಸರ್ಕಾರ ಸ್ಮಾರಕವನ್ನಾಗಿ ಅಭಿವೃದ್ಧಿಗೊಳಿಸಬೇಕು. ಬಸವಣ್ಣನವರ ಆಪ್ತರಾಗಿದ್ದ ಅಪ್ಪಣ್ಣನವರ ವಚನಗಳನ್ನು ಇಂದಿನ ಯುವ ಪೀಳಿಗೆ ಅಧ್ಯಯನ ಮಾಡಬೇಕು’ ಎಂದು ಚಿತ್ರಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಿ.ಒ.ಸದಾಶಿವ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಹಡಪದ ಅಪ್ಪಣ್ಣ ಬಸವಪ್ರಿಯ ಕೂಡಲ ಚನ್ನಬಸವಣ್ಣ ಎಂಬ ಅಂಕಿತನಾಮದಿಂದ ವಚನ ರಚಿಸಿದರು. ಇವರ 333 ವಚನಗಳು ಲಭ್ಯವಾಗಿವೆ. ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮ ಸಹ ವಚನಗಾರ್ತಿಯಾಗಿದ್ದು 113 ವಚನಗಳು ಲಭ್ಯವಾಗಿವೆ. ಕ್ರಿ.ಶ 1134ರಲ್ಲಿ  ಚನ್ನವೀರಪ್ಪ ಹಾಗೂ ದೇವ ಅಕ್ಕಮ್ಮನವರ ಮಗನಾಗಿ ಅಪ್ಪಣ್ಣ ಜನಿಸಿದರು’ ಎಂದರು.  

ADVERTISEMENT

‘ಅಪ್ಪಣ್ಣ ಅವರ ಮೂಲ ಹೆಸರು ಜೀವಣ್ಣ. ಅವರು ಚಿಕ್ಕಂದಿನಿಂದಲೇ ಪ್ರತಿಭಾಶಾಲಿಯಾಗಿದ್ದರು. ಜೀವಣ್ಣ ವಿದ್ಯಾಭ್ಯಾಸದ ಜೊತಗೆ ಯುದ್ಧಕಲೆಯನ್ನೂ ಮೈಗೂಡಿಸಿಕೊಂಡಿದ್ದರು. ಪೈಲ್ವಾನ್ ಜೀವಣ್ಣ ಎಂದು ಜನಜನಿತರಾಗಿದ್ದರು. ಹಗಲಿರುಳು ದುಡಿಯುತ್ತಿದ್ದ ಜೀವಣ್ಣನನ್ನು ಬಸವಣ್ಣ ಪ್ರೀತಿಯಿಂದ ಅಪ್ಪಿಕೊಂಡಿದ್ದರಿಂದ ಜೀವಣ್ಣ ಎಂಬ ಹೆಸರಿಗೆ ಬದಲಾಗಿ ಅಪ್ಪಣ್ಣ ಎಂಬ ಹೆಸರು ಪ್ರಸಿದ್ಧಿ ಪಡೆಯಿತು’ ಎಂದರು.

ತಹಶೀಲ್ದಾರ್ ಗೋವಿಂದರಾಜು ಮಾತನಾಡಿ ‘ಬಸವಣ್ಣನವರ ಆಪ್ತನಾಗಿ ನಿಜಸುಖಿ ಶಿವಶರಣ ಎಂಬ ಅನ್ವರ್ಥ ನಾಮವನ್ನು ಹಡಪದ ಅಪ್ಪಣ್ಣ ‌ಹೊಂದಿದ್ದರು. ಬಸವಣ್ಣವರು ಕಲ್ಯಾಣದ ಪ್ರಧಾನಮಂತ್ರಿಯಾಗಿದ್ದ ವೇಳೆ ಅಪ್ಪಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು. ಬಸವಣ್ಣ ಅವರನ್ನು ಭೇಟಿಯಾಗಲು ಬಂದವರು ಮೊದಲು ಅಪ್ಪಣ್ಣ ಅವರನ್ನು ಕಾಣಬೇಕಾಗಿತ್ತು’ ಎಂದರು.

‘ದಕ್ಷಿಣ ಕರ್ನಾಟಕ ಭಾಗದಲ್ಲಿ ಹಡಪದ ಸಮಾಜದವರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಮೊದಲಿಂದಲೂ ಹಿಂದೂ ಲಿಂಗಾಯತ, ವೀರಶೈವ ಲಿಂಗಾಯತ ಎಂದು ತಮ್ಮ ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಒಂದು ವೇಳೆ ಹಡಪದ ಸಮುದಾಯದವರು ಹಡಪದ, ಕ್ಷೌರಿಕ ಅಥವಾ ಸವಿತಾ ಸಮಾಜ ಎಂದು ಜಾತಿ ಪ್ರಮಾಣ ಪತ್ರ ಪಡೆಯಲು ಇಚ್ಛಿಸಿದ್ದಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಜಾತಿಯ ಗುಣಲಕ್ಷಣಗಳು, ಸಂಪ್ರದಾಯ, ಪೂಜಾ ವಿಧಿ ವಿಧಾನ, ವೈವಾಹಿಕ ಸಂಬಂಧ, ಗ್ರಾಮಸ್ಥರ ಹೇಳಿಕೆಗಳನ್ನು ಪಡೆದು ಜಾತಿ ಪ್ರಮಾಣ ಪತ್ರಗಳನ್ನು ಸರಿಪಡಿಸಲಾಗುವುದು’ ಎಂದರು.

ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೃಷಭೇಂದ್ರಪ್ಪ ಮಾತನಾಡಿ ‘ಹಡಪದ ಸಮುದಾಯದವರು ತಮ್ಮ ಜಾತಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಡಪದ ಸಮುದಾಯದವರು ಇದ್ದು, ಈವರಗೆ ಹಿಂದೂ ಲಿಂಗಾಯತ, ಹಿಂದೂ ವೀರಶೈವ ಲಿಂಗಾಯತ ಎಂದು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯುವಲ್ಲಿ ತೊಂದರೆಯಾಗುತ್ತಿದೆ. ಜಿಲ್ಲಾಡಳಿತದಿಂದ ಇದನ್ನು ಸರಿಪಡಿಸಬೇಕು’ ಎಂದು ಮನವಿ ಮಾಡಿದರು. 

ಮುರುಘಾ ಮಠದ ಮುರಿಗೇಂದ್ರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ. ಗುರುನಾಥ್, ಡಿವೈಎಸ್‌ಪಿ ಉಮೇಶ್ ಈಶ್ವರ ನಾಯ್ಕ, ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ನಾಗರಾಜ, ಕಾರ್ಯದರ್ಶಿ ಎಲ್.ಆರ್.ವೀರಭದ್ರಪ್ಪ ಲೋಕದೊಳಲು, ಈಚಲನಾಗೇನಹಳ್ಳಿ ಮಠದ ಗೋವಿಂದ ಸ್ವಾಮೀಜಿ ಇದ್ದರು.

ಮುರುಘಾ ಮಠದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಮಕ್ಕಳು ಭಾಗವಹಿಸಿದ್ದರು

- ‘ವಚನ ಚಳವಳಿಯ ಪ್ರಮುಖರು’

ಚಿತ್ರದುರ್ಗ: ‘ಪ್ರತಿಯೊಂದು ಸಮಾಜ ಮುಖ್ಯವಾಹಿನಿಗೆ ಬರಲು ಶೈಕ್ಷಣಿಕ ಆರ್ಥಿಕ ಹಾಗೂ ಸಾಮಾಜಿಕ ಅವಕಾಶ ಪಡೆದುಕೊಳ್ಳಬೇಕು’ ಎಂದು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ಹೇಳಿದರು. ಮುರುಘರಾಜೇಂದ್ರ ಬೃಹನ್ಮಠದ ಮುರುಗಿ ಶಾಂತವೀರ ಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದಲ್ಲಿ ಗುರುವಾರ ನಡೆದ ಹಡಪದ ಅಪ್ಪಣ್ಣ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. ‘ಶರಣ ಕ್ರಾಂತಿಯ ಮುಂಚೂಣಿಯಲ್ಲಿ ಇರುವವರನ್ನು ನೆನಪಿಸಿಕೊಳ್ಳುವ ಪ್ರವೃತ್ತಿ ನಮ್ಮಲ್ಲಿ ಸದಾ ಜಾಗೃತವಾಗಿರಬೇಕಿದೆ. ಬಸವಣ್ಣ ಅಲ್ಲಮಪ್ರಭು ಅಕ್ಕಮಹಾದೇವಿಯವರ ಜತೆಗೆ ಎಲೆಮರೆಕಾಯಿಯಂತಿದ್ದ ಅನೇಕ ವಚನಕಾರರನ್ನು ನೆನಪಿಸಿಕೊಂಡು ಅವರ ಜಯಂತಿಯನ್ನು ಆಚರಿಸುವುದು ಅತೀ ಅಗತ್ಯವಾಗಿದೆ’ ಎಂದರು.‘ಪ್ರತಿಯೊಬ್ಬ ಶರಣರು ಸಾಮಾಜಿಕ ಮತ್ತು ವೃತ್ತಿಯಿಂದ ಆಯಾ ಸಮಾಜವನ್ನು ಪ್ರತಿನಿಧಿಸುತ್ತಿದ್ದರು. ವ್ಯಕ್ತಿಗಳು ಮಾಡುವ ಕಾಯಕದಿಂದ ಜಾತಿಯು ಮಾರ್ಪಟ್ಟಿದೆ. 12ನೇ ಶತಮಾನದಲ್ಲಿ ಕಾಯಕ ಜೀವಿಗಳ ಸಮ ಸಮಾಜ ನಿರ್ಮಾಣಗೊಂಡಿತ್ತು. ವಚನ ಚಳವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಹಡಪದ ಅಪ್ಪಣ್ಣನವರು ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿದ್ದರು’ ಎಂದರು. ವಿವಿಧ ಸಮಾಜಗಳ ಮುಖಂಡರಾದ ಆರ್. ಶ್ರೀನಿವಾಸ್ ಗೋಪಿನಾಥ್ ಗೋವಿಂದರಾಜ್ ಶ್ರೀನಿವಾಸ್ ಧರ್ಮಣ್ಣ ಶ್ರೀನಿವಾಸ್ ವೀರೇಶ್ ವಿಶ್ವನಾಥ ಸ್ವಾಮಿ ಸಾಯಿನಾಥ್ ರುದ್ರಪ್ಪ ಗೌಳಿ ಜಾಲಿಕಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.