ADVERTISEMENT

ವಿವಿ ಸಾಗರಕ್ಕೂ ವಿಶ್ವೇಶ್ವರಯ್ಯನವರಿಗೂ ಸಂಬಂಧವಿಲ್ಲ: ಎಂ.ಜಿ. ರಂಗಸ್ವಾಮಿ

ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 5:47 IST
Last Updated 28 ಡಿಸೆಂಬರ್ 2025, 5:47 IST
ಹಿರಿಯೂರಿನ ಮೋಕ್ಷಗುಂಡಂ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ ಮಾತನಾಡಿದರು
ಹಿರಿಯೂರಿನ ಮೋಕ್ಷಗುಂಡಂ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ ಮಾತನಾಡಿದರು   

ಹಿರಿಯೂರು: ತಾಲ್ಲೂಕಿನ ಮಾರಿಕಣಿವೆ ಪ್ರದೇಶದಲ್ಲಿ ನಿರ್ಮಿಸಿರುವ ವಾಣಿವಿಲಾಸ ಅಣೆಕಟ್ಟೆಗೂ ಸರ್. ಎಂ. ವಿಶ್ವೇಶ್ವರಯ್ಯ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ನಿವೃತ್ತ ಪ್ರಾಂಶುಪಾಲ ಎಂ.ಜಿ. ರಂಗಸ್ವಾಮಿ ಹೇಳಿದರು.

ನಗರದ ಮೋಕ್ಷಗುಂಡಂ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ಮಾರಿಕಣಿವೆ ಇತಿಹಾಸ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೇದಾವತಿ ನದಿಗೆ ಅಡ್ಡಲಾಗಿ ವಾಣಿವಿಲಾಸ ಅಣೆಕಟ್ಟೆ ನಿರ್ಮಿಸಲಾಗಿದೆ. ಬಾಬಾಬುಡನ್ ಗಿರಿ ಶಿಖರದಲ್ಲಿ ಪ್ರತ್ಯೇಕವಾಗಿ ಹುಟ್ಟುವ ವೇದಾ ಮತ್ತು ಆವತಿ ನದಿಗಳು ಕ್ರಮವಾಗಿ ಅಯ್ಯನಕೆರೆ ಮತ್ತು ಮದಗದ ಕೆರೆಗೆ ಹರಿದು, ಕಡೂರಿನ ಸಮೀಪ ಒಂದಾಗಿ ಅಲ್ಲಿಂದ ವೇದಾವತಿ ಹೆಸರಿನಲ್ಲಿ ಮುಂದೆ ಹರಿಯುತ್ತವೆ ಎಂದು ತಿಳಿಸಿದರು.

ADVERTISEMENT

ಬಯಲು ಸೀಮೆಯ ಜನರ ನೀರಿನ ಬವಣೆಯನ್ನು ಅರಿತಿದ್ದ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1898–1907ರ ಅವಧಿಯಲ್ಲಿ ತಮ್ಮ ತಾಯಿ ಕೆಂಪನಂಜಮ್ಮಣ್ಣಿ ಹೆಸರಿನಲ್ಲಿ ₹45 ಲಕ್ಷ  ವೆಚ್ಚದಲ್ಲಿ ಅಣೆಕಟ್ಟೆ ನಿರ್ಮಿಸಿದರು. ವಾಣಿವಿಲಾಸ ಅಣೆಕಟ್ಟೆಯನ್ನು ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ನಿರ್ಮಿಸಲಾಗಿದೆ ಎಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ಆದರೆ ಇತಿಹಾಸಕಾರರ ಪ್ರಕಾರ ಯೋಜನೆಗೆ ಅವಿಸ್ಮರಣೀಯ ಕಾಣಿಕೆ ನೀಡಿದ್ದು ಅಂದಿನ ಎಂಜಿನಿಯರ್‌ಗಳಾದ ಎಚ್.ಡಿ. ರೈಸ್, ಮೆಕನೀಲ್ ಕ್ಯಾಂಪ್ ಬೆಲ್, ಸಿ.ಟಿ. ದಲಾಲ್ ಎಂದು ವಿವರಿಸಿದರು. 

ವಾಣಿವಿಲಾಸ ಅಣೆಕಟ್ಟೆ 1933ರಲ್ಲಿ ಮೊದಲ ಬಾರಿಗೆ ಕೋಡಿ ಹರಿದಿತ್ತು. ನಂತರ, ಈ ಹಿಂದಿನ ಮೂರು ವರ್ಷದಲ್ಲಿ ಮೂರು ಬಾರಿ ಕೋಡಿ ಬಿದ್ದಿದೆ. ಈ ಅಣೆಕಟ್ಟೆ ಜೀವಂತವಾಗಿ ಉಳಿಯಬೇಕಾದರೆ, ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಿ ಅಲ್ಲಿಂದ ನೀರು ಹರಿಸಬೇಕು ಎಂದು ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಎಚ್.ಎಂ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಜಿ. ತಿಪ್ಪೇಸ್ವಾಮಿ, ಶಿಕ್ಷಕಿ ಪದ್ಮಜಾ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.