ADVERTISEMENT

ಹಿರಿಯೂರು | ವಿವಿ ಸಾಗರದ ನಾಲೆಗಳು ಸಾಂಕ್ರಾಮಿಕ ರೋಗಗಳ ತಾಣ

ಕಣ್ಮರೆಯಾದ ನಾಲೆಗಳ ಆಧುನೀಕರಣ ಯೋಜನೆ; ನಾಲೆಗೆ ಸೇರುತ್ತಿರುವ ಬಡಾವಣೆಗಳ ತ್ಯಾಜ್ಯ

ಸುವರ್ಣಾ ಬಸವರಾಜ್
Published 22 ಜನವರಿ 2025, 5:58 IST
Last Updated 22 ಜನವರಿ 2025, 5:58 IST
ಹಿರಿಯೂರಿನ ಪ್ರವಾಸಿ ಮಂದಿರ ವೃತ್ತದ ಬಳಿ ಹಾದು ಹೋಗಿರುವ ವಾಣಿವಿಲಾಸ ಎಡನಾಲೆಯಲ್ಲಿ ತ್ಯಾಜ್ಯ ತುಂಬಿರುವುದು
ಹಿರಿಯೂರಿನ ಪ್ರವಾಸಿ ಮಂದಿರ ವೃತ್ತದ ಬಳಿ ಹಾದು ಹೋಗಿರುವ ವಾಣಿವಿಲಾಸ ಎಡನಾಲೆಯಲ್ಲಿ ತ್ಯಾಜ್ಯ ತುಂಬಿರುವುದು   

ಹಿರಿಯೂರು: ನಗರದ ಹುಳಿಯಾರು ರಸ್ತೆ ಮತ್ತು ಪ್ರವಾಸಿ ಮಂದಿರ ವೃತ್ತದ ಸಮೀಪ ಹಾದು ಹೋಗಿರುವ ವಾಣಿ ವಿಲಾಸ ಜಲಾಶಯದ ಬಲ ಮತ್ತು ಎಡ ನಾಲೆಗಳು ಕಸ ಕಡ್ಡಿ ತುಂಬಿಕೊಂಡು ಸಾಂಕ್ರಾಮಿಕ ರೋಗ ಹರಡುವ ತಾಣಗಳಾಗಿವೆ.

ಜಲಾಶಯದ ಎರಡೂ ನಾಲೆಗಳ ಆಧುನೀಕರಣಕ್ಕೆ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕ್, ಕೇಂದ್ರೀಯ ಜಲ ಆಯೋಗ ಹಾಗೂ ವಿಶ್ವೇಶ್ವರಯ್ಯ ನೀರಾವರಿ ನಿಗಮಗಳು ಒಟ್ಟಾಗಿ ಯೋಜನೆ ರೂಪಿಸಿದ್ದವು. ಹಿರಿಯೂರು ನಗರದಲ್ಲಿ ಹಾದು ಹೋಗಿರುವ ತೆರೆದ ನಾಲೆಯನ್ನು ಮುಚ್ಚು ನಾಲೆಯನ್ನಾಗಿ ರೂಪಿಸುವ ಪ್ರಸ್ತಾವ ಅದರಲ್ಲಿ ಸೇರಿತ್ತು. ನಾಲೆಗಳು ಆಧುನೀಕರಣಗೊಂಡಲ್ಲಿ ಅಚ್ಚುಕಟ್ಟು ಪ್ರದೇಶದ ಗಡಿಯಲ್ಲಿರುವ ರೈತರ ಜಮೀನುಗಳಿಗೆ ಸರಾಗವಾಗಿ ನೀರು ಹರಿಯಲಿದೆ ಎಂದು ಆಗಿನ ಸಂಸದ ಎ.ನಾರಾಯಣಸ್ವಾಮಿ ಹೇಳಿದ್ದರು. ಇದಾಗಿ ಎರಡು ವರ್ಷ ಗತಿಸುತ್ತಾ ಬಂದರೂ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ನಗರ ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.

ನಾಲೆಗಳ ಅವ್ಯವಸ್ಥೆ:

ADVERTISEMENT

ನಗರದಲ್ಲಿ ಹಾದು ಹೋಗಿರುವ ಎರಡೂ ನಾಲೆಗಳಲ್ಲಿ ಕೊಳಚೆ ತುಂಬಿಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರಸಭೆಯ ಕೊಡುಗೆಯೇ ಹೆಚ್ಚಿದೆ. ನೂತನ ಬಡಾವಣೆಗಳನ್ನು ನಿರ್ಮಿಸುವ ಸಂದರ್ಭದಲ್ಲಿ ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಿದ್ದಲ್ಲಿ ಇಂತಹ ಅನಾಹುತಗಳಿಗೆ ಅವಕಾಶ ಆಗುತ್ತಿರಲಿಲ್ಲ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಹುಳಿಯಾರು ರಸ್ತೆಯಲ್ಲಿ ಹಾದು ಹೋಗಿರುವ ಬಲ ನಾಲೆಗೆ ಪುಷ್ಪಾಂಜಲಿ ಚಿತ್ರಮಂದಿರದ ಮೇಲ್ಭಾಗದಲ್ಲಿರುವ ಎಲ್ಲ ಮನೆಗಳ ತ್ಯಾಜ್ಯ, ರಾಷ್ಟ್ರೀಯ ಅಕಾಡೆಮಿ ಶಾಲೆಯ ಹಿಂಭಾಗದ ಬಡಾವಣೆ, ಗಾಡಿ ಬಸಣ್ಣ ಬಡಾವಣೆ, ಲಕ್ಷ್ಮಮ್ಮ ಬಡಾವಣೆ, ಶ್ರೀನಿವಾಸ ಬಡಾವಣೆ, ನರಸಿಂಹಯ್ಯ ಬಡಾವಣೆ, ಜೋಸೆಫ್ ಬಡಾವಣೆ, ನಾಗಾನಾಯ್ಕನ ಹಟ್ಟಿಗೆ ಹೊಂದಿರುವ ಬಡಾವಣೆಗಳ ತ್ಯಾಜ್ಯವನ್ನು ದೊಡ್ಡ ಗಾತ್ರದ ಪೈಪ್ ಹಾಗೂ ಚರಂಡಿ ನಿರ್ಮಿಸಿ ಎಗ್ಗಿಲ್ಲದೆ ಬಿಡಲಾಗುತ್ತಿದೆ. ಈ ತಪ್ಪನ್ನು ನಿವಾಸಿಗಳ ಮೇಲೆ ಹೊರಿಸುವಂತಿಲ್ಲ. ಬದಲಿಗೆ ಬಡಾವಣೆ ಮಾಲೀಕರು ಕಾನೂನನ್ನು ತಮಗೆ ಬೇಕಾದಂತೆ ಬಳಸಿಕೊಂಡಿರುವುದು, ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೈಜೋಡಿಸಿರುವುದು ಕಾರಣ.

ನಾಲೆಗೆ ಹೊಂದಿಕೊಂಡಿರುವ ಮನೆಗಳವರು ಮನೆಯಲ್ಲಿನ ಎಲ್ಲ ನಿರುಪಯುಕ್ತ ವಸ್ತುಗಳನ್ನು ನಗರಸಭೆಯ ಕಸದ ವಾಹನಕ್ಕೆ ಕೊಡುವ ಬದಲು ತಮಗೆ ಸಮಯ ಸಿಕ್ಕಾಗ ನಾಲೆಗೆ ಬಿಸಾಡುವ ಪರಿಪಾಠ ಇಂದಿಗೂ ಮುಂದುವರಿದಿದೆ. ಹೀಗಾಗಿ ನಾಲೆಯ ಎರಡೂ ಬದಿಯ ರಸ್ತೆಯಲ್ಲಿ ವಾಯುವಿಹಾರಕ್ಕೆ ಹೇಳಿ ಮಾಡಿಸಿದಂತಹ ಪರಿಸರವಿದ್ದರೂ ಇಡೀ ನಾಲೆ ಮಲಿನಗೊಂಡಿರುವ ಕಾರಣಕ್ಕೆ ಮೂಗು ಮುಚ್ಚಿಕೊಂಡು ನಡೆದಾಡಬೇಕಾಗಿದೆ.

ನೋಟಿಸ್ ಕೊಟ್ಟು ಸುಮ್ಮನಾದರು:

ವಾಣಿ ವಿಲಾಸ ಜಲಾಶಯದ ಎರಡೂ ನಾಲೆಗಳು ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯಾಪ್ತಿಗೆ ಸೇರಿವೆ. ಸಾರ್ವಜನಿಕರು, ರೈತ ಸಂಘಟನೆಗಳು ನಾಲೆಗಳ ಅವ್ಯವಸ್ಥೆ ಬಗ್ಗೆ ದನಿ ಎತ್ತಿದ್ದರಿಂದ ನಾಲ್ಕು ವರ್ಷಗಳ ಹಿಂದೆ ನಗರಸಭೆಗೆ ನೋಟಿಸ್ ಜಾರಿ ಮಾಡಿ ಮೇಲೆ ತಿಳಿಸಿದ ಬಡಾವಣೆಗಳಲ್ಲದೆ, ಪೊಲೀಸ್ ವಸತಿಗೃಹಗಳು, ವೇದಾವತಿ ಬಡಾವಣೆಯ ತ್ಯಾಜ್ಯ ನಾಲೆಗೆ ಸೇರದಂತೆ ಎಚ್ಚರ ವಹಿಸುವಂತೆ ತಾಕೀತು ಮಾಡಿದ್ದರು. ನೋಟಿಸ್ ಕೊಟ್ಟಿದ್ದಕ್ಕೇ ತಮ್ಮ ಕೆಲಸ ಮುಗಿಯಿತು ಎಂದು ನೀರಾವರಿ ನಿಗಮದವರು ಮೌನಕ್ಕೆ ಜಾರಿದರೆ, ನಗರಸಭೆಯವರು ಕ್ರಮದ ವಿಚಾರದಲ್ಲಿ ಜಾಣ ಮೌನ ಪ್ರದರ್ಶಿಸಿದ್ದರಿಂದ ನಾಲೆಗಳಲ್ಲಿನ ಮಾಲಿನ್ಯ ಮತ್ತಷ್ಟು ಹೆಚ್ಚಿದೆ.

ಕೊಳಕು ನಗರದ ಪ್ರಶಸ್ತಿ ದೊರೆಯುವತ್ತ

ಹಳೆಯ ಹಿರಿಯೂರು ಭಾಗದ ಬಹುತೇಕ ತ್ಯಾಜ್ಯ ವೇದಾವತಿ ನದಿಗೆ ಸೇರಿದರೆ, ಉಳಿದ ಭಾಗದ ತ್ಯಾಜ್ಯ ಎರಡು ನಾಲೆಗಳಿಗೆ ಸೇರುತ್ತಿದೆ. ವಾಣಿವಿಲಾಸದ ನಾಲೆಗಳು, ನಗರದ ಮಧ್ಯಭಾಗದಲ್ಲಿ ಹಾದು ಹೋಗಿರುವ ವೇದಾವತಿ ನದಿಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು ಪರಾಮರ್ಶಿಸಿದಲ್ಲಿ ಹಿರಿಯೂರಿಗೆ ರಾಜ್ಯಮಟ್ಟದಲ್ಲಿ ಕೊಳಕು ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಕೊಡುತ್ತಾರೆ ಎಂದು ನಾಗರಿಕರು ಆಡಿಕೊಳ್ಳುತ್ತಿದ್ದಾರೆ.

ವಾಣಿವಿಲಾಸ ಜಲಾಶಯದ ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೆ ಬಿಡುವಾಗ ಒಂದು ಗೇಟ್‌ನಿಂದ ಮೇಲ್ಮಟ್ಟದ ಕಾಲುವೆಗೆ ಮತ್ತೊಂದು ಗೇಟ್‌ನಿಂದ ಎಡ ಮತ್ತು ಬಲನಾಲೆಗಳಿಗೆ ಬಿಡಲಾಗುತ್ತದೆ. ಮೇಲ್ಮಟ್ಟದ ಕಾಲುವೆಯ ಉದ್ದ 9.60 ಕಿ.ಮೀ. ಇದ್ದು, 1,104.10 ಎಕರೆ ಅಚ್ಚುಕಟ್ಟು ಹೊಂದಿದೆ. ಬಲನಾಲೆ 46.40 ಕಿ.ಮೀ. ಉದ್ದವಿದ್ದು, 13,909.71 ಎಕರೆ ಅಚ್ಚುಕಟ್ಟು ಹೊಂದಿದೆ. ಎಡ ನಾಲೆ 48 ಕಿ.ಮೀ. ಉದ್ದವಿದ್ದು, 14,971.36 ಎಕರೆ ಅಚ್ಚುಕಟ್ಟು ಹೊಂದಿದೆ. ಜಲಾಶಯ ಮೂರನೇ ಬಾರಿಗೆ ಭರ್ತಿಯಾಗಿರುವ ಕಾರಣ ಅಚ್ಚುಕಟ್ಟು ಪ್ರದೇಶಕ್ಕೆ ಮೂರ್ನಾಲ್ಕು ಬಾರಿ ನೀರು ಹರಿಸಲಾಗುತ್ತದೆ. ಹೀಗಾಗಿ ನಾಲೆಗಳ ಆಧುನೀಕರಣ ತುರ್ತಾಗಿ ನಡೆಯಬೇಕು ಎಂಬುದು ರೈತರ ಆಗ್ರಹ.

ವಾಣಿವಿಲಾಸ ಜಲಾಶಯದ ನಾಲೆಗಳ ದುರಸ್ತಿಗೆ ಅನುದಾನದ ಕೊರತೆ ಇಲ್ಲ. ಈ ಬಗ್ಗೆ ವಿಸ್ತೃತ ಯೋಜನೆ ತಯಾರಿಸಿ ಕೇಂದ್ರ ಜಲ ಆಯೋಗ ಮತ್ತು ರಾಜ್ಯ ಸರ್ಕಾರದ ಒಪ್ಪಿಗೆ ಪಡೆಯಬೇಕಿದೆ.
ಚಂದ್ರಶೇಖರ್, ಎಇಇ, ವಿಶ್ವೇಶ್ವರಯ್ಯ ನೀರಾವರಿ ನಿಗಮ ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.