ಚಿತ್ರದುರ್ಗ: ಮಹಿಳೆಯರ ನೆಚ್ಚಿನ ವರಮಹಾಲಕ್ಷ್ಮಿ ಹಬ್ಬ ಜಿಲ್ಲೆಯಾದ್ಯಂತ ಶುಕ್ರವಾರ ಶ್ರದ್ಧಾ– ಭಕ್ತಿಯಿಂದ ನೆರವೇರಿತು. ಮನೆಗಳಲ್ಲಿ ಮಹಿಳೆಯರು ಲಕ್ಷ್ಮಿ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು, ದೇವಾಲಯಗಳಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೂ ವಿಶೇಷ ವಿಶೇಷ ಧಾರ್ಮಿಕ ಆಚರಣೆಗಳು ಜರುಗಿದವು.
ಮಾರುಕಟ್ಟೆಯಲ್ಲಿ ಸಿದ್ಧವಾಗಿ ಸಿಗುವ ಲಕ್ಷ್ಮಿ ಮುಖವಾಡಗಳಿಗೆ ಮೂರ್ತಿಯ ರೂಪ ನೀಡಿ, ಹೊಸ ಸೀರೆಯುಡಿಸಿ, ಆಭರಣ ತೊಡಿಸಿ ಪೂಜೆಗೈದರು. ವಿಗ್ರಹದ ಮುಂದೆ ಹೊಸ ನೋಟುಗಳನ್ನು ಇಟ್ಟು ಪೂಜಿಸಿದ್ದು ವಿಶೇಷವಾಗಿತ್ತು. ದೇವಿಗೆ ಬಗೆಬಗೆಯ ಆಭರಣ ತೊಡಿಸಿ ಮಹಿಳೆಯರು ಸಂಭ್ರಮಿಸಿದರು. ಐದು ಮಾದರಿಯ ಹಣ್ಣು, ಸಿಹಿ ತಿನಿಸುಗಳನ್ನಿಟ್ಟು ನೈವೇದ್ಯ ಅರ್ಪಿಸಿದರು.
ಕೆಲವು ಮನೆಗಳಲ್ಲಿ ವಿಗ್ರಹದ ಸುತ್ತಲೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮನೆಯಲ್ಲಿ ಮಂಟಪ ನಿರ್ಮಿಸಿ ವಿಗ್ರಹ ಪ್ರತಿಷ್ಠಾಪಿಸಲಾಗಿತ್ತು. ಮಂಟಪಕ್ಕೆ ಬಾಳೆ ಕಂಬ, ಕಬ್ಬಿನ ಜಲ್ಲೆ ಕಟ್ಟಿದ್ದರು. ವಿಶೇಷ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ದೇವಿಗೆ ಭಕ್ತಿಯಿಂದ ಪೂಜೆ ಮಾಡಿದರು.
‘ಬೆಳಿಗ್ಗೆ ಮನೆಮಂದಿಯೆಲ್ಲರೂ ಸೇರಿ ಪೂಜೆ ಸಲ್ಲಿಸಿದೆವು. ಸಂಜೆ 9 ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಕುಂಕುಮ, ರವಿಕೆ ಕಣ ಕೊಟ್ಟು ಉಡಿ ತುಂಬಿದೆವು. ಲಕ್ಷ್ಮಿ ಪೂಜೆಯಲ್ಲಿ ಉಡಿ ತುಂಬುವುದು ಬಹಳ ಮುಖ್ಯ. ಐದು, ಒಂಬತ್ತು, 12 ಮಂದಿಗೆ ಉಡಿ ತುಂಬುವುದು ಸಂಪ್ರದಾಯ’ ಎಂದು ಮಹಿಳೆಯೊಬ್ಬರು ತಿಳಿಸಿದರು.
ಲಕ್ಷ್ಮಿ ಪೂಜೆಯ ಅಂಗವಾಗಿ ಮನೆಗಳಲ್ಲಿ ಬಗೆಬಗೆಯ ಭಕ್ಷ್ಯ, ಭೋಜನ ತಯಾರಿಸಲಾಗಿತ್ತು. ಲಾಡು, ಒಬ್ಬಟ್ಟು, ಪಾಯಸ, ವಡೆ, ಚಕ್ಕುಲಿ, ಕೋಡುಬಳೆ ತಯಾರಿಸಿ, ಅತಿಥಿಗಳನ್ನು ಆಹ್ವಾನಿಸಿ ಉಣಬಡಿಸಲಾಯಿತು. ಮನೆಗಳಲ್ಲಿ ಮಾತ್ರವಲ್ಲದೇ ವಿವಿಧೆಡೆ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿ ಲಕ್ಷ್ಮಿ ಪೂಜೆ ಮಾಡಿ ಭಕ್ತಿ ಮೆರೆದರು.
ನಗರದ ಎಲ್ಲ ದೇವಾಲಯಗಳು ಬೆಳಿಗ್ಗೆ 6ರಿಂದ ರಾತ್ರಿ 8ರವರೆಗೂ ಭಕ್ತರಿಂದ ತುಂಬಿದ್ದವು. ಲಕ್ಷ್ಮಿ ಪೂಜೆ ಅಂಗವಾಗಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಹೊಳಲ್ಕೆರೆ ರಸ್ತೆಯ ಬರಗೇರಮ್ಮ ವಿಶೇಷ ಪೂಜೆ ನಡೆಯಿತು. ಲಕ್ಷ್ಮಿ ದೇವಾಲಗಳಲ್ಲಿ ಅಭಿಷೇಕ, ವಿಶೇಷ ಅಲಂಕಾರ, ಧನ ಪೂಜೆ, ತುಪ್ಪದ ದೀಪ, ಮಂಗಳಾರತಿ ಕಾರ್ಯಕ್ರಮಗಳು ನಡೆದವು.
ನಗರ ಪೊಲೀಸ್ ಠಾಣೆಯ ಬಳಿಯ ಕಣಿವೆ ಮಾರಮ್ಮ ದೇವಾಲಯದಲ್ಲಿ ಬೆಳಿಗ್ಗೆಯಿಂದಲೂ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಮನೆಯಲ್ಲಿ ಪೂಜೆ ಮಾಡಿದ ನಂತರ ಭಕ್ತರು ದೇವಾಲಯಕ್ಕೆ ಬಂದು ದೇವಿಗೆ ನಮಸ್ಕಾರ ಮಾಡಿದರು. ಕೆಳಗೋಟೆಯ ಮಹಾಲಕ್ಷ್ಮಿ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಬೆಳ್ಳಿ ಅಲಂಕಾರ, ತೋಮಾಲೆ ಸೇವೆ, ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಿತು.
ಏಲಕ್ಕೆ ಬಾಳೆಹಣ್ಣು ಕೆ.ಜಿ ₹ 160!
ಬೆಲೆ ಏರಿಕೆಯ ನಡುವೆಯೂ ಸಾರ್ವಜನಿಕರು ಭಕ್ತಿಯಿಂದ ಲಕ್ಷ್ಮಿ ಪೂಜೆ ಮಾಡಿದರು. 3 ದಿನಗಳ ಹಿಂದೆ ₹ 80ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ಏಲಕ್ಕಿ ಬಾಳೆಹಣ್ಣು ಕಳೆದೆರಡು ದಿನಗಳಿಂದ ₹ 160ಕ್ಕೆ ಏರಿಕೆಯಾಗಿತ್ತು. ಬಾಳೆ ಹಣ್ಣು ಬೆಲೆ ಕೇಳುತ್ತಿದ್ದಂತೆ ಸಾಮಾನ್ಯ ಜನರು ಬೆದರುತ್ತಿದ್ದರು. ಒಂದು ಹಾರ ಕೂಡ ₹ 500ಕ್ಕಿಂತ ಕಡಿಮೆ ಸಿಗಲಿಲ್ಲ. ಇಷ್ಟಾದರೂ ಜನರು ಸಡಗರ ಸಂಭ್ರಮದಿಂದ ಲಕ್ಷ್ಮಿ ಪೂಜೆ ನೆರವೇರಿಸಿ ಭಕ್ತಿ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.