ADVERTISEMENT

ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಾಣ; ಸಚಿವ ಸಂಪುಟ ಒಪ್ಪಿಗೆ

₹ 102 ಕೋಟಿ ವೆಚ್ಚದಲ್ಲಿ ಕಾಮಾಗಾರಿಗೆ ಅನುಮೋದನೆ: ಶಾಸಕ ಟಿ.ರಘುಮೂರ್ತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 15:26 IST
Last Updated 4 ಜುಲೈ 2025, 15:26 IST
ಶಾಸಕ ಟಿ.ರಘುಮೂರ್ತಿ
ಶಾಸಕ ಟಿ.ರಘುಮೂರ್ತಿ   

ಚಳ್ಳಕೆರೆ: ‘ತಾಲ್ಲೂಕಿನ ವೇದಾವತಿ ನದಿ ತೀರದ ಅಗತ್ಯವಿರುವ ಕಡೆ ಬ್ಯಾರೇಜ್ ಮತ್ತು ಬ್ರಿಡ್ಜ್ ಸಹಿತ ಬ್ಯಾರೇಜ್ ನಿರ್ಮಣಕ್ಕೆ ₹ 102 ಕೋಟಿ ಅನುದಾನ ನೀಡಲು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ನಂದಿಬೆಟ್ಟದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ’ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪರಶುರಾಂಪುರ ಹೋಬಳಿ ವ್ಯಾಪ್ತಿಯ ಗೋಸಿಕೆರೆ ಗ್ರಾಮದ ಬಳಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣಕ್ಕೆ ₹ 34.5 ಕೋಟಿ, ತೊರೆಬೀರಬಹಳ್ಳಿ – ಬೆಳಗೆರೆ ಮಧ್ಯೆ ಬ್ಯಾರೇಜ್‍ಗೆ ₹ 28 ಕೋಟಿ, ಗುಡಿಹಳ್ಳಿ ಬಳಿ ಬ್ಯಾರೇಜ್ ನಿರ್ಮಾಣಕ್ಕೆ ₹ 31.4.ಕೋಟಿ ಹಾಗೂ ನಾಗಗೊಂಡನಹಳ್ಳಿ ಬ್ಯಾರೇಜ್ ನಿರ್ಮಾಣಕ್ಕೆ ₹ 8.5 ಕೋಟಿ ಒಟ್ಟು ₹ 102.4 ಕೋಟಿ ಅನುದಾನ ಬಿಡುಗಡೆಯಾಗಲಿದೆ.
ವೇದಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಕಾರ್ಯದ ಅನುಮತಿಗೆ 7-8 ವರ್ಷ ಸತತ ಪ್ರಯತ್ನ ನಡೆಸಿದ್ದರಿಂದ ಬ್ಯಾರೇಜ್‍ಗೆ ಅನುಮತಿ ದೊರೆತಂತಾಗಿದೆ ಎಂದು ಹೇಳಿದರು.

ಈಗಾಗಲೇ ತಾಲ್ಲೂಕಿನಲ್ಲಿ 5 ಬ್ಯಾರೇಜ್ ನಿರ್ಮಾಣ ಪೂರ್ಣಗೊಂಡಿದ್ದು, ಅವುಗಳ ನೀರು ಕೃಷಿ ಚಟುವಟಿಕೆಗೆ ಬಳಕೆಯಾಗುತ್ತಿದೆ. ಹೀಗಾಗಿ ಕ್ಷೇತ್ರದಲ್ಲಿ 2,000 ಎಕರೆ ಇದ್ದ ತೋಟಗಾರಿಕಾ ಪ್ರದೇಶ 20,000 ಎಕರೆಗೆ ವಿಸ್ತರಿಸಿದೆ ಎಂದು ತಿಳಿಸಿದರು.

ADVERTISEMENT

‘ಬ್ಯಾರೇಜ್ ನಿರ್ಮಾಣದಿಂದ ನದಿ ತೀರ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹವಾಗಲಿದ್ದು ಕಲಮರಹಳ್ಳಿ, ತೊರೆಬೀರನಹಳ್ಳಿ, ಬೆಳಗೆರೆ, ಬೊಂಬೆರಹಳ್ಳಿ, ಗೋಸಿಕೆರೆ, ಚೌಳೂರು, ಪರಶುರಾಂಪುರ, ಹರವಿಗೊಂಡನಹಳ್ಳಿ, ನಾಗಗೊಂಡನಹಳ್ಳಿ, ಮೋದೂರು, ಜಾಜೂರು, ಹಾಲಗೊಂಡನಹಳ್ಳಿ, ಗುಡಿಹಳ್ಳಿ, ಮೈಲನಹಳ್ಳಿ ಗ್ರಾಮದ ಕೊಳವೆಬಾವಿಯಲ್ಲಿ ಅಂತರ್ಜಲ ವೃದ್ಧಿ ಆಗುವುದಲ್ಲದೆ ವಿವಿಧ ಗ್ರಾಮದ ರಸ್ತೆ ಸಂಪರ್ಕಕ್ಕೂ ಅನುಕೂಲವಾಗುತ್ತದೆ’ ಎಂದು ಹೇಳಿದರು.

ಮಳೆ ನೀರಿನ ಜತೆಗೆ ಸರ್ಕಾರದ ಆದೇಶದಂತೆ ಭದ್ರಾ ಯೋಜನೆಯಿಂದ 0.2 ಟಿಎಂಸಿ ಅಡಿ ನೀರು ಹಿರಿಯೂರು ವಾಣಿವಿಲಾಸ ಸಾಗರದಿಂದ ವೇದಾವತಿಗೆ ಹರಿಸಿದರೆ ಇದರಿಂದ ಬಯಲುಸೀಮೆ ಪ್ರದೇಶದ ನೀರಾವರಿ ಕೃಷಿ ಚಟುವಟಿಕೆ, ಜಾನುವಾರು ಮತ್ತು ಜನರ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಕಂಡುಕೊಂಡಂತಾಗುತ್ತದೆ ಎಂದು ಶಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.