
ಚಳ್ಳಕೆರೆ: ಮಾತೃ ಪರಿಕಲ್ಪನೆ ಮೂಲದ ದ್ರಾವಿಡ ಸಂಸ್ಕೃತಿಯ ಗ್ರಾಮ ದೇವತೆ ಊರಮಾರಮ್ಮ, ಮಾರಿಕಾಂಬಾ, ಕೊಲ್ಲಾಪುರದಮ್ಮ ದೇವಿಯ ವಿಶಿಷ್ಟ ಜಾತ್ರಾ ಆಚರಣೆ ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ, ದಾಸನಾಯಕನಹಟ್ಟಿ, ಲಕ್ಷ್ಮೀಪುರ, ಹೊಟ್ಟೆಪ್ಪನಹಳ್ಳಿ, ಗೊಲ್ಲರಹಟ್ಟಿ, ನರಹರಿನಗರ ಮತ್ತು ಪರಶುರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿ ದೊಡ್ಡಗೊಲ್ಲರಹಟ್ಟಿ, ಪುಟ್ಲರಹಳ್ಳಿ, ಬೊಮ್ಮನಕುಂಟೆ, ಅಲ್ಲಾಪುರ, ಕೊರ್ಲಕುಂಟೆ ಮುಂತಾದ ಗ್ರಾಮದಲ್ಲಿ 14 ವರ್ಷದ ನಂತರ ಜ.12 ರಿಂದ 17 ರ ವರೆಗೆ ವಿಜೃಭಣೆಯಿಂದ ನಡೆಯಲಿದೆ.
ಜ. 12ರಂದು ಬೆಳಿಗ್ಗೆ ಬೆಳ್ಳಿ ಅಭರಣ ಮತ್ತು ಹಲವು ಬಗೆಯ ಹೂವುಗಳಿಂದ ಅಲಂಕರಿಸಿದ ಮಾರಮ್ಮದೇವತೆ ಉತ್ಸವಮೂರ್ತಿ ಉರುಮೆ- ತಮಟೆ ವಾದ್ಯದ ಮೂಲಕ ವೇದಾವತಿ ನದಿಗೆ ಕೊಂಡೊಯ್ದು ಗಂಗಾಪೂಜೆ ನೆರವೇರಿಸುವರು. ರಾತ್ರಿ ಊರಮಾರಮ್ಮ ದೇವಿ ಉತ್ಸವಮೂರ್ತಿ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು.
ಮಂಗಳವಾರ ದೇವಿ ಪ್ರತಿಷ್ಠಾಪನೆ, ಪುಣ್ಯಾಹ, ಮಹಾಪೂಜೆ. ಬುಧವಾರ ದೇವಿಗೆ ಹಿಟ್ಟಿನ ಆರತಿ, ಬೇವಿನ ಸೀರೆ ಸೇವೆ. ಶುಕ್ರವಾರ ಆಸಾದಿಗಳಿಂದ ಮಾರಮ್ಮದೇವಿ ಕೊಂಡಾಡುವ ಕಾರ್ಯಕ್ರಮ. ಮಧ್ಯಾಹ್ನ 3 ಗಂಟೆಗೆ ಪೋತರಾಜರ ವೀರನಾಟ್ಯ- ಗಾವಿನ ಆಚರಣೆ ಮೂಲಕ ದೇವಿ ವಿಸರ್ಜನೆ ಕಾರ್ಯ ನಡೆಯಲಿದೆ.
ಶನಿವಾರ ಬೆಳಿಗ್ಗೆ ದೇವಸ್ಥಾನದ ಮುಂದೆ ಭೂಮಿ ತಣ್ಣಗೆ ಮಾಡುವುದು. ಮತ್ತು ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಕಾರ್ಯಕ್ರಮ. ಮತ್ತು ಜಾತ್ರೆ ಆರಂಭದಿಂದ ಅಂತ್ಯದವರೆಗೂ ದೇವಿ ಕೀರ್ತನೆ ನಡೆಯಲಿದೆ.
ಪ್ರತಿದಿನ ರಾತ್ರಿ 9 ಗಂಟೆಗೆ ಆಯಾ ಗ್ರಾಮದಲ್ಲಿ ಗೊಂಬೆನಾಟಕ, ಬಯಲಾಟ ಮತ್ತು ಸಾಮಾಜಿಕ ನಾಟಕ ಪ್ರದರ್ಶನ ಇರುತ್ತವೆ.
ಕಟ್ಟುನಿಟ್ಟಿನ ಆಚರಣೆ: ಜಾತ್ರೆ ಪ್ರಯುಕ್ತ ಗ್ರಾಮದ ರಸ್ತೆ, ಚರಂಡಿ ಸ್ವಚ್ಛಗೊಳಿಸಲಾಗಿದೆ. ಸುಣ್ಣ ಬಣ್ಣ ಬಳಿದು ಪ್ರತಿ ಮನೆ ಶುದ್ಧಿಗೊಳಿಸಿಕೊಂಡಿದ್ದಾರೆ. ಮತ್ತು ಚರಗ ಚೆಲ್ಲುವ ತನಕ ಹೊರಗಿನವರು ಪ್ರವೇಶಿಸದಂತೆ ಜಾತ್ರೆ ನಡೆಯುವ ಗ್ರಾಮದ ಪ್ರಮುಖ ರಸ್ತೆಗೆ ಅಡ್ಡವಾಗಿ ಸೀಮೆಜಾಲಿ ಕಳ್ಳೆಬೇಲಿ ನಿರ್ಮಿಸಲಾಗಿದೆ.
ಸಾಮರಸ್ಯ: ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ದತೆ ಹಾಗೂ ಸಾಮರಸ್ಯ ಕಾಪಾಡಿಕೊಳ್ಳುವ ಸಲುವಾಗಿ ಸಂಬಂಧಿಕರಿಗೆ ಹಾಗೂ ಆಯಾಗಾರರಿಗೆ ಹೊಸ ಬಟ್ಟೆಗಳನ್ನು ಉಡುಗೊರೆ ನೀಡುತ್ತಾರೆ.
ಚರಗ - ಬುಡ್ಡೆಕಲ್ಲಿನ ವಿಶಿಷ್ಟ ಆಚರಣೆ: ಊರು ನಿರ್ಮಿಸುವ ಮೊದಲು ಸೂಕ್ತವಾದ ಜಾಗದಲ್ಲಿ ತಗ್ಗು ತೆಗೆದು ವಿವಿಧ ಧಾನ್ಯ, ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣ, ಸೀಸದ ಚೂರು ಹಾಗೂ ಹೂ ಚೆಲ್ಲಿ ಹೂಳಿದ್ದ ಬುಡ್ಡೆಕಲ್ಲಿಗೆ ಶಾಂತಿ ಮಾಡುವ ವಿವಿಧ ಆಚರಣೆಗಳು ನಡೆಯುತ್ತವೆ.
ಹುಲುಸು ತೆಗೆದುಕೊಂಡು ಹೋಗುವವರು ಬುಡ್ಡೆಕಲ್ಲಿನ ಹತ್ತಿರ ಮೂರು ಸಾರಿ ನಾನು ನಿಮ್ಮ ಊರಿನ ಹುಲುಸನ್ನು ತೆಗೆದುಕೊಂಡು ಹೋಗುತ್ತೇನೆ ಎಂದು ಕೂಗಿ ತೆಗೆದುಕೊಂಡು ಹೋಗಬೇಕು. ಆ ಕಾರಣಕ್ಕಾಗಿಯೇ ಬುಡ್ಡೆಕಲ್ಲು ಹಾಗೂ ಊರಿನ ಸುತ್ತ ರಾತ್ರಿಯಿಡಿ ಕಾವಲು ಕಾಯುತ್ತ ಜನ ಎಚ್ಚರದಿಂದ ಇರುತ್ತಾರೆ. ಬೇರೆ ಊರಿನವರು ಒಮ್ಮೆ ಹುಲುಸು ತೆಗೆದುಕೊಂಡು ಹೋದರೆ ತಮ್ಮ ಊರಿನ ಸಮೃದ್ಧಿ ಹೋಗುತ್ತದೆ ಎಂಬ ನಂಬಿಕೆ ಜನಪದರಲ್ಲಿ ಇದೆ.
ಹರಕೆ: ಮಾರಮ್ಮನ ನೆಪದಲ್ಲಿ ಆಕೆಗೆ ಜಾತ್ರೆಯ ದಿನ ಬೇವಿನಸೀರೆ, ಹಿಟ್ಟಿನ ಆರತಿಯ ಹರಕೆಗಳನ್ನು ಜನರು ತೀರಿಸುತ್ತಾರೆ.
ಗಾವಿನ ಆಚರಣೆಯ ಸಂದರ್ಭದಲ್ಲಿ ತಮಟೆ ಹಾಗೂ ಉರುಮೆ ವಾದ್ಯಗಳೊಂದಿಗೆ ದೇವತೆಗಳ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಜಾತ್ರೆಗೆ ಸಂಭ್ರಮದ ತೆರೆ ಬೀಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.