ADVERTISEMENT

ಜನಜೀವನ ಪ್ರಭಾವಿಸಲಿದೆ ಯುದ್ಧ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2022, 2:56 IST
Last Updated 4 ಮಾರ್ಚ್ 2022, 2:56 IST
ವೀರೇಂದ್ರ ಹೆಗ್ಗಡೆ
ವೀರೇಂದ್ರ ಹೆಗ್ಗಡೆ   

ಚಿತ್ರದುರ್ಗ: ‘ರಷ್ಯಾ–ಉಕ್ರೇನ್‌ ಯುದ್ಧದ ಬೆಂಕಿಯ ಬಿಸಿ ನಮಗೂ ತಟ್ಟಲಾರಂಭಿಸಿದೆ. ಈ ಜ್ವಾಲೆಯ ಕಿಡಿ ಹಾರಿದರೆ ಇನ್ನಷ್ಟು ಅಪಾಯವಿದೆ. ಇಂಧನದ ಬೆಲೆ ಹೆಚ್ಚಾಗಿ, ಜನಜೀವನದ ಮೇಲೆ ಪರಿಣಾಮ ಬೀರಬಹುದು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕಳವಳ ವ್ಯಕ್ತಪಡಿಸಿದರು.

ಗುರುವಾರ ಮಂತ್ರಾಲಯಕ್ಕೆ ತೆರಳುತ್ತಿದ್ದ ಅವರು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಯುದ್ಧ ಉಕ್ರೇನ್‌ನಲ್ಲಿ ಮಾತ್ರವಲ್ಲ ಪಕ್ಕದ ಮನೆಗೂ ತಲುಪಿದೆ. ನಮ್ಮ ವಿದ್ಯಾರ್ಥಿಗಳೂ ಅಲ್ಲಿ ಸಿಲುಕಿದ್ದಾರೆ. ನಾವು ಇನ್ನಷ್ಟು ಎಚ್ಚರಿಕೆಯಿಂದ ಇರುವ ಅಗತ್ಯವಿದೆ. ವಿಶ್ವಶಾಂತಿ ನಮ್ಮ ಊರಿನದ್ದಲ್ಲ ಎಂಬ ಉದಾಸೀನ ಬೇಡ’ ಎಂದು ಹೇಳಿದರು.

ADVERTISEMENT

‘ಯುದ್ಧಪೀಡಿತ ಉಕ್ರೇನ್‌ ದೇಶದಲ್ಲಿ ಸಿಲುಕಿದ ಭಾರತೀಯರನ್ನು ಕರೆತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಅವರನ್ನು ಕರೆತರುವ ಪ್ರಯತ್ನ ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲವಾಗಿದೆ. ಯುದ್ಧ ನಡೆಯುವ ಸಂಭವ ಕಡಿಮೆ ಎಂಬ ಕಾರಣಕ್ಕೆ ಅನೇಕರು ಅಲ್ಲೇ ಇದ್ದರು. ಯುದ್ಧ ಘೋಷಣೆಯಾಗುವ ಮೊದಲೇ ಹೊರಟಿದ್ದರೆ ಅನುಕೂಲವಾಗುತ್ತಿತ್ತು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

‘ಸೋವಿಯತ್‌ ಒಕ್ಕೂಟವನ್ನು ಮತ್ತೆ ರಚಿಸುವುದು ರಷ್ಯಾಯ ಉದ್ದೇಶ ಇರಬಹುದು. ಉಕ್ರೇನ್‌ ನೆರೆಯ ರಾಷ್ಟ್ರಗಳಿಗೂ ಯುದ್ಧ ವಿಸ್ತರಿಸಿದರೆ ಗಡಿ ಭಾಗದಲ್ಲಿರುವ ಹಾಗೂ ನೆರೆಯ ದೇಶಗಳಲ್ಲಿ ಆಶ್ರಯ ಪಡೆದಿರುವ ಭಾರತೀಯರಿಗೆ ಇನ್ನಷ್ಟು ತೊಂದರೆ ಆಗಬಹುದು. ಉಕ್ರೇನ್‌ ಸುತ್ತಲಿನ ದೇಶಗಳೂ ಸೇರಿ ಇಡೀ ವಿಶ್ವವೇ ಎಚ್ಚರಿಕೆಯಿಂದ ಇರುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಸಮಾಜದಲ್ಲಿ ನಡೆಯುವ ಯಾವುದೇ ವಿಚಾರಗಳಿಗೆ ವಿದ್ಯಾರ್ಥಿ ಸಮೂಹ ಸ್ಪಂದಿಸುವುದಿಲ್ಲ ಎಂಬ ಆಪಾದನೆ ಬಹುದಿನ ಇತ್ತು. ವ್ಯಾಸಂಗ, ಉದ್ಯೋಗ ಹಾಗೂ ಭವಿಷ್ಯದ ಆಲೋಚನೆಗೆ ಮಾತ್ರ ಸೀಮಿತವಾಗುತ್ತಿದ್ದಾರೆ ಎಂಬ ದೂರುಗಳಿದ್ದವು. ಪಠ್ಯದಿಂದ ಹೊರಗೂ ಆಲೋಚನೆ ಮಾಡುವ ಮನೋಭಾವ ವಿದ್ಯಾರ್ಥಿಗಳಲ್ಲಿ ಕಾಣುತ್ತಿದೆ. ಆದರೆ, ಈ ವಿದ್ಯಾರ್ಥಿ ಸಮೂಹ ದುರ್ಬಳಕೆ ಆಗಬಾರದು’ ಎಂದರು. ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆ ಧಾರವಾಡದ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿಗಳಾದ ಹರಿಪ್ರಸಾದ್, ಮೋಹನ್, ಪ್ರಭಾಕರ್, ಪ್ರವೀಣ್, ಕಿಶೋರ್, ಯಶೋಧಾ ಶೆಟ್ಟಿ, ಸ್ವಪ್ನ, ಕಿರಣ, ಜನಜಾಗೃತಿ ವೇದಿಕೆ ಅಧ್ಯಕ್ಷ ಮಾರುತೇಶ್, ಸದಸ್ಯರಾದ ನಾಗರಾಜ್ ಸಂಗಂ, ರಾಜುನಾಯ್ಕ್, ರೂಪಾ ಜನಾರ್ದನ್‌, ಕೆ.ಆರ್. ಮಂಜುನಾಥ್, ನೂರುಲ್ಲಾ ಅಹಮ್ಮದ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.