
ಹಿರಿಯೂರು: ತಾಲ್ಲೂಕಿನ ಆದಿವಾಲ ಗ್ರಾಮದ ಭೋವಿ ಕಾಲೋನಿಯ ಜಯರಾಂ ಹಾಗೂ ರತ್ನಮ್ಮ ದಂಪತಿ ಮನೆಗೆ ಗುರುವಾರ ತಹಶೀಲ್ದಾರ್ ಎಂ.ಸಿದ್ದೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಭೇಟಿ ನೀಡಿ ಬುದ್ಧಿಮಾಂದ್ಯ ಮಕ್ಕಳ ಬಗ್ಗೆ ಮಾಹಿತಿ ಪಡೆದರು.
ಎರಡು ವರ್ಷದಿಂದ ಅಂಗವಿಕಲರ ವೇತನ ಬಂದಿಲ್ಲ ಎಂಬ ಪ್ರಜಾವಾಣಿ ವರದಿಯನ್ನು ನೋಡಿದ್ದೇನೆ. ಇಂದೇ ಇಬ್ಬರೂ ಮಕ್ಕಳ ಹೆಬ್ಬೆಟ್ಟು ಅಪ್ ಡೇಟ್ ಮಾಡಲಾಗುತ್ತದೆ. ಮುಂದಿನ ತಿಂಗಳು ಎಂದಿನಂತೆ ಪಿಂಚಣಿ ಸಿಗಲಿದೆ. ಯಾವುದಾದರೂ ವಸತಿ ಯೋಜನೆಯಡಿ ಮನೆ ಸರಪಡಿಸಿಕೊಡಲು ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಬಗರ್ ಹುಕುಂ ಯೋಜನೆಯಡಿ ಜಮೀನು ಮಂಜೂರು ಮಾಡುವ ಕುರಿತು ಪರಾಮರ್ಶೆ ನಡೆಸುತ್ತೇನೆ ಎಂದು ತಹಶೀಲ್ದಾರರು ಭರವಸೆ ನೀಡಿದರು.
ನರರೋಗದ ಸಮಸ್ಯೆ:– ಜೈರಾಂ, ರತ್ನಮ್ಮ ದಂಪತಿಗೆ ಜನಿಸಿರುವ ಮಕ್ಕಳಿಗೆ ಹುಟ್ಟಿನಿಂದಲೇ ನರ ದೌಬಲ್ಯದ ಕಾಯಿಲೆ ಬಂದಿದೆ. ಇದು ವಾಸಿಯಾಗದು. ಬದುಕಿರುವ ತನಕ ಈ ಮಕ್ಕಳನ್ನು ಪ್ರೀತಿಯಿಂದ ಆರೈಕೆ ಮಾಡಬೇಕು. ಇಂತಹ ಮಕ್ಕಳನ್ನು ನೋಡಿಕೊಳ್ಳಲು ಸುರಕ್ಷಾ ಆಸ್ಪತ್ರೆಗಳಿರುವ ಬಗ್ಗೆ ಮಾಹಿತಿ ಇದೆ. ಉತ್ತಮ ವಾತಾವರಣ ಇರುವ ಆಸ್ಪತ್ರೆಗಳು ಕಂಡುಬಂದಲ್ಲಿ ಮಕ್ಕಳಿಬ್ಬರನ್ನು ಕಳಿಸಲು ಪೋಷಕರು ಸಿದ್ದರಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಹೇಳಿದರು.
ಜಿಲ್ಲಾ ವಿಕಲಚೇತನ ಕಲ್ಯಾಣ ಅಧಿಕಾರಿ ಭೇಟಿ:- ಆದಿವಾಲ ಭೋವಿ ಕಾಲೋನಿಯ ಬುದ್ಧಿಮಾಂದ್ಯರ ಮನೆಗೆ ಗುರುವಾರ ಜಿಲ್ಲಾ ವಿಕಲ ಚೇತನ ಕಲ್ಯಾಣ ಇಲಾಖೆ ಅಧಿಕಾರಿ ಜೆ. ವೈಶಾಲಿ ಭೇಟಿ ನೀಡಿದ್ದರು.
ಇಂತಹ ಮಕ್ಕಳ ಪೋಷಣೆಗೆ ಸಹಕಾರಿಯಾಗಲು ಮಾಸಿಕ ಒಂದು ಸಾವಿರ ರೂಪಾಯಿ ನೀಡುವ ಬಗ್ಗೆ ಅರ್ಜಿಯನ್ನು ಪಡೆದುಕೊಂಡಿದ್ದು, ಇದನ್ನ ಹೊರತು ಪಡಿಸಿ ಇಲಾಖೆಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರತಿನಿಧಿ ಫರ್ಜಾನ ಭೇಟಿ ನೀಡಿ ಸಂಸ್ಥೆ ವತಿಯಿಂದ ನೀಡಬಹುದಾದ ಸಹಾಯಗಳ ಬಗ್ಗೆ ಬುದ್ಧಿಮಾಂದ್ಯ ಮಕ್ಕಳ ಪೋಷಕರ ಜೊತೆ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.