ADVERTISEMENT

ಎಸಿ ಕಚೇರಿ ಚಲೋಗೆ ತೀರ್ಮಾನ

ಭದ್ರಾ ಮೇಲ್ದಂಡೆ ಶಾಖಾ ಕಾಲುವೆ ಕಾಮಗಾರಿ ವಿಳಂಬಕ್ಕೆ ಬಿ.ಎ.ಲಿಂಗಾರೆಡ್ಡಿ ಅಸಮಧಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 16:02 IST
Last Updated 23 ಜೂನ್ 2021, 16:02 IST
ಬಿ.ಎ.ಲಿಂಗಾರೆಡ್ಡಿ
ಬಿ.ಎ.ಲಿಂಗಾರೆಡ್ಡಿ   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆಯಡಿ ನಡೆಯಬೇಕಿದ್ದ ಇಲ್ಲಿಯ ಶಾಖಾ ಕಾಲುವೆ ಕಾಮಗಾರಿ ವಿಳಂಬವಾಗಿದೆ. ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ತ್ವರಿತವಾಗಿ ಪೂರ್ಣಗೊಳ್ಳಲು ಹೋರಾಟ ಅನಿವಾರ್ಯವಾಗಿದೆ’ ಎಂದು ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಹೇಳಿದರು.

ತಾಲ್ಲೂಕಿನ ಮುದ್ದಾಪುರ ಕೆರೆ ಏರಿ ಮೇಲೆ ಬುಧವಾರ ನಡೆದ ಕೆರೆ ಕಾವಲು ರಚನಾ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ವಿಳಂಬ ಧೋರಣೆ ವಿರೋಧಿಸಿ ತರೀಕೆರೆ ಉಪವಿಭಾಗಾಧಿಕಾರಿ ಕಚೇರಿ ಚಲೋ ಹಮ್ಮಿಕೊಳ್ಳಲಾಗುವುದು’ ಎಂದರು.

‘ಚಿತ್ರದುರ್ಗ ತಾಲ್ಲೂಕಿನ ನಾಲ್ಕು ಕೆರೆಗಳಿಗೆ ಹೋರಾಟ ಸಮಿತಿ ಭೇಟಿ ನೀಡಿ ಅವಲೋಕಿಸಲಿದೆ. ಕೆರೆ ಅಭಿವೃದ್ಧಿಪಡಿಸಲು ಶಾಸಕರಿಗೆ ಮನವಿ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ತುಂಗಾ ಜಲಾಶಯ ಪ್ರತಿ ವರ್ಷ ಬಹುಬೇಗ ಭರ್ತಿ ಆಗುತ್ತಿದೆ. ನಮ್ಮ ಭಾಗದ ಹೆಚ್ಚಿನ ಪ್ರಮಾಣದ ನೀರು ಆ ಜಲಾಶಯದಿಂದಲೇ ಹರಿದು ಬರಬೇಕಿದೆ. ಹೀಗಾಗಿ, ತುಂಗಾದಿಂದ ಭದ್ರ ಜಲಾಶಯದ ನಡುವಿನ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಅದಕ್ಕಾಗಿ ಶೀಘ್ರವೇ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಲಿದ್ದೇವೆ’ ಎಂದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಸುರೇಶ್‌ಬಾಬು, ‘ನೀರಿನ ವಿಚಾರದಲ್ಲಿ ಪಕ್ಷಭೇದ ಮರೆತು ಕಾರ್ಯನಿರ್ವಹಿಸಬೇಕು. ಮುದ್ದಾಪುರ ಗ್ರಾಮದ ರೈತರು ಕಾವಲು ಸಮಿತಿ ರಚಿಸಿಕೊಂಡು ಕೆರೆ ನಿರ್ವಹಣೆ ಮಾಡಬೇಕು. ಹೋರಾಟ ಸಮಿತಿ ಕರೆಕೊಟ್ಟಾಗ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ಕೋರಿದರು.

ರೈತ ಸಂಘದ ಮುದ್ದಾಪುರ ನಾಗರಾಜ್, ಸಮಿತಿ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಬಿ.ಮಂಜುನಾಥ್, ಬೋರಪ್ಪ, ನಾಗೇಂದ್ರಪ್ಪ, ಕೆ.ಶಾಂತಕುಮಾರ್, ಸಿ.ಎ.ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.