ADVERTISEMENT

ಧರ್ಮಪುರದ ಕೆರೆಗಳಿಗೆ ನೀರು ಹರಿಸಲು ಆಗ್ರಹ

ಧರ್ಮಪುರದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ನಡೆದ ರೈತ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 3:44 IST
Last Updated 14 ಡಿಸೆಂಬರ್ 2021, 3:44 IST
ಧರ್ಮಪುರದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಸೋಮವಾರ ರೈತರ ಸಭೆ ನಡೆಯಿತು.
ಧರ್ಮಪುರದ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಸೋಮವಾರ ರೈತರ ಸಭೆ ನಡೆಯಿತು.   

ಧರ್ಮಪುರ: ವಾಣಿವಿಲಾಸ ಸಾಗರದಿಂದ ಧರ್ಮಪುರ ಹೋಬಳಿಯ ಎಲ್ಲಾ ಕೆರೆಗಳಿಗೆ ನಾಲೆಯ ಮೂಲಕ ನೀರು ಹರಿಸಬೇಕು ಎಂದು ರೈತ ಸಂಘ ಒಮ್ಮತದಿಂದ ತೀರ್ಮಾನಿಸಿತು.

ಇಲ್ಲಿನ ಕಣಿವೆ ಮಾರಮ್ಮ ದೇವಸ್ಥಾನದಲ್ಲಿ ಸೋಮವಾರ ನಡೆದ ರೈತ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ‘ಹೋಬಳಿಯಲ್ಲಿ 32 ಕೆರೆಗಳಿದ್ದು, ನಲವತ್ತು ವರ್ಷಗಳಿಂದ ಮಳೆಯಾಗದೆ ಕೆರೆಗಳಿಗೆ ನೀರು ಬಂದಿಲ್ಲ. ಇದರಿಂದ ಈಗಾಗಲೇ ರೈತರು ಗುಳೇ ಹೋಗಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಸೇರಿಸಿರುವುದರಿಂದ ಹೋಬಳಿಯ ಎಲ್ಲಾ ಕೆರೆಗಳಿಗೂ ನೀರು ಹರಿಸಬೇಕು. ಅದಕ್ಕಾಗಿ ತುರ್ತಾಗಿ ನಾಲೆ ನಿರ್ಮಾಣ ಕಾಮಗಾರಿ ಶುರುವಾಗಬೇಕು. ಇಲ್ಲದಿದ್ದರೆ ಧರ್ಮಪುರದಿಂದ ಹಿರಿಯೂರಿಗೆ ಒಂದು ದಿನದ ಪಾದಯಾತ್ರೆ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

ADVERTISEMENT

ಅರಳೀಕೆರೆ ತಿಪ್ಪೇಸ್ವಾಮಿ ಮಾತನಾಡಿ, ‘ಈ ತಿಂಗಳ ಅಂತ್ಯದೊಳಗೆ ತುಂಗಾದಿಂದ ಭದ್ರಾಕ್ಕೆ ನೀರು ಹರಿಯಬೇಕು. ನಂತರ ಭದ್ರಾದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಬೇಕು. ಒಟ್ಟಾರೆ 10 ಟಿಎಂಸಿ ಅಡಿ ನೀರು ನಮಗೆ ಸಿಗಬೇಕು. ಇದರಿಂದ ಗುಳೇ ಹೋಗಿರುವ ರೈತರು ವಾಪಸ್‌ ಬಂದು ಬದುಕು ಕಟ್ಟಿಕೊಳ್ಳುವಂತಾಗಬೇಕು. ಜತೆಗೆ ಫ್ಲೋರೈಡ್‌ಮುಕ್ತ ಕುಡಿಯುವ ನೀರು ಸಿಗುವಂತಾಗಬೇಕು. ಉಳಿದ ಕಾಮಗಾರಿ ಕಾಲಮಿತಿಯೊಳಗೆ ಮುಗಿಯಬೇಕು. ಅಕಾಲಿಕ ಮಳೆಯಿಂದ ರೈತರ ಬೆಳೆ ನಾಶವಾಗಿದೆ. ಈ ರೈತರಿಗೆ ಬೆಳೆ ವಿಮೆ ಸಿಗುವಂತಾಗಬೇಕು’ ಎಂದರು.

ಕಾರ್ಯಕ್ರಮದಲ್ಲಿ ತಿಮ್ಮಾರೆಡ್ಡಿ, ರಂಗನಾಥ್, ಜಯಣ್ಣ, ಜೈಕುಮಾರ್, ವೆಂಕಟಸ್ವಾಮಿ, ಶ್ರೀರಂಗಮ್ಮ, ನಿಂಗಮ್ಮ, ಗಂಗಮ್ಮ, ರಾಜಣ್ಣ, ಧೃವಕುಮಾರ್, ರಮೇಶ್, ಪಾಂಡುರಂಗಪ್ಪ, ವಿರೂಪಾಕ್ಷ, ದೇವರಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.