ಹಿರಿಯೂರು: ‘ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮನವಿ ಮೇರೆಗೆ ಭದ್ರಾ ಮೇಲ್ದಂಡೆ ಯೋಜನೆಯಡಿ ವಾಣಿವಿಲಾಸಕ್ಕೆ 2 ಟಿಎಂಸಿ ಅಡಿ ನೀರು ಹರಿಸಲು ಬುಧವಾರ ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ’ ಎಂದು ಬ್ಲಾಕ್ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾದಿ ರಮೇಶ್ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಹಾಗೂ ಕಡೂರು ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಯೋಜನೆಗಳಿಗೆ 2025ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭದ್ರಾ ಜಲಾಶಯದಿಂದ ತರೀಕೆರೆ ಏತ ನೀರಾವರಿ ಯೋಜನೆಯಡಿ ಬರುವ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ಹಾಗೂ ಇದರಡಿ ಬರುವ ನಿಗದಿತ 79 ಕೆರೆಗಳಿಗೆ ಅವುಗಳ ಶೇ 50 ಸಾಮರ್ಥ್ಯದಷ್ಟು ನೀರು ತುಂಬಿಸಲು 1.47 ಟಿಎಂಸಿ ಅಡಿ, ವಾಣಿವಿಲಾಸ ಅಣೆಕಟ್ಟೆಗೆ 2 ಟಿಎಂಸಿ ಅಡಿ ಹಾಗೂ ಚಿತ್ರದುರ್ಗ ಶಾಖಾ ಕಾಲುವೆಯಡಿ ಬರುವ ಕಡೂರು– ಹೊಸದುರ್ಗ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ಭಾಗಶಃ ಕೆರೆಗಳಿಗೆ ನೀರನ್ನು ಹರಿಸಲು 0.50 ಟಿಎಂಸಿ ಅಡಿ ಹಾಗೂ ಕಡೂರು ಕೆರೆ ತುಂಬುವ ಯೋಜನೆಯ ಹಂತ– 1ರಡಿ ಬರುವ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು 0.24 ಟಿಎಂಸಿ ಅಡಿ ಒಳಗೊಂಡು ಒಟ್ಟಾರೆ 4.21 ಟಿಎಂಸಿ ಅಡಿ ನೀರನ್ನೆತ್ತಲು ಅನುಮತಿ ನೀಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಭದ್ರಾ ಜಲಾಶಯದಿಂದ 2 ಟಿಎಂಸಿ ಅಡಿ ನೀರು ಹರಿದು ಬಂದಲ್ಲಿ ಸತತ ಮೂರನೇ ವರ್ಷ ವಾಣಿ ವಿಲಾಸ ಜಲಾಶಯ ಕೋಡಿ ಬೀಳುವ ಸಾಧ್ಯತೆ ಇದೆ ಎಂದು ರಮೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.