
ಮೊಳಕಾಲ್ಮುರು: ಇಲ್ಲಿನ ಹಾನಗಲ್– ರಾಯದುರ್ಗ ಮುಖ್ಯರಸ್ತೆ ಬದಿಯಲ್ಲಿ ಪ್ರತಿ ಬುಧವಾರ ನಡೆಯುವ ವಾರದ ಸಂತೆಯನ್ನು ಮುಖ್ಯರಸ್ತೆ ಸಂಪರ್ಕಿಸುವ ರಸ್ತೆಗಳಿಗೆ ಸ್ಥಳಾಂತರ ಮಾಡಲಾಯಿತು.
ಕೃಷಿ ಕಚೇರಿ ಮುಂಭಾಗದಲ್ಲಿ ನಡೆಯುತ್ತಿದ್ದ ಸಂತೆಯನ್ನು ಕೆಲ ವಾರಗಳ ಹಿಂದೆ ಸ್ಥಳ ವ್ಯಾಜ್ಯ ಕಾರಣ ಮುಖ್ಯರಸ್ತೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಮುಖ್ಯರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುವ ಪರಿಣಾಮ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರೈತ ಸಂಘ ಸೇರಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ವಿಶೇಷ ವರದಿಯೂ ಪ್ರಕಟವಾಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ, ತಾಲ್ಲೂಕು ಆಡಳಿತವು ಸಂಪರ್ಕ ರಸ್ತೆಗಳಿಗೆ ಸಂತೆ ಸ್ಥಳಾಂತರ ಮಾಡುವ ಮೂಲಕ ತಾತ್ಕಾಲಿಕ ಕ್ರಮ ಕೈಗೊಂಡಿದ್ದಾರೆ. ಬೆಳಗಿನ ಜಾವದಿಂದ ಪಿಎಸ್‌ಐ ಮಹೇಶ್ ಹೊಸಪೇಟೆ ನೇತೃತ್ವದಲ್ಲಿ ಹತ್ತಾರು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ವ್ಯಾಪಾರಿಗಳನ್ನು ಒಳಭಾಗದ ರಸ್ತೆಗಳಿಗೆ ಕಳುಹಿಸಿದರು.
‘ಸಂತೆ ಸ್ಥಳ ಗೊಂದಲ ನ್ಯಾಯಾಲಯದಲ್ಲಿದ್ದು, ತೀರ್ಪು ಬರುವವರೆಗೆ ಅಲ್ಲಿ ಸಂತೆ ನಡೆಸುವಂತಿಲ್ಲ. ಆದ್ದರಿಂದ ಶೀಘ್ರ ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದರು.
‘ಸಂಪರ್ಕ ರಸ್ತೆಗಳಿಗೆ ಸಂತೆ ಸ್ಥಳಾಂತರ ಮಾಡಿರುವುದು ವ್ಯಾಪಾರಿಗಳಿಗೆ ತೊಂದರೆ ಉಂಟು ಮಾಡಿದೆ, ಗ್ರಾಹಕರು ಬಂದು ಕೊಳ್ಳಲು ಕಿಷ್ಕಿಂದೆಯಾಗಿರುವ ಜೊತೆಗೆ ಎಲ್ಲ ಕಡೆಯೂ ಬಂದು ಕೊಳ್ಳಲು ಆಗದ ಕಾರಣ ವ್ಯಾಪಾರದ ಮೇಲೆ ದುಷ್ಪರಿಣಾಮ ಬೀರಿದೆ. ಶೀಘ್ರ ಸಮಸ್ಯೆಗೆ ಪರಿಹಾರ ರೂಪಿಸಬೇಕು’ ಎಂದು ವ್ಯಾಪಾರಿ ಕೋನಸಾಗರದ ಪಾಪಮ್ಮ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.