ADVERTISEMENT

ಸ್ವಾಮೀಜಿಗಳು ದೇಶ ಆಳಿದರೆ ತಪ್ಪೇನು?

‘ಹುಚ್ಚು ಹಿಡಿಯಿತು’ ಪುಸ್ತಕ ಬಿಡುಗಡೆಯಲ್ಲಿ ಕಾದಂಬರಿಕಾರ ಡಾ.ಬಿ.ಎಲ್.ವೇಣು

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 13:50 IST
Last Updated 19 ಸೆಪ್ಟೆಂಬರ್ 2021, 13:50 IST
ಚಿತ್ರದುರ್ಗದಲ್ಲಿ ನಾಟಿ ವೈದ್ಯ ಎಚ್.ಎನ್.ತಿಪ್ಪೇರುದ್ರಸ್ವಾಮಿ ಅವರ ಹುಚ್ಚು ಹಿಡಿಯಿತು ಮತ್ತು ಕೆಲವು ಕಥೆಗಳು ಪುಸ್ತಕವನ್ನು ಕಾದಂಬರಿಕಾರ ಡಾ.ಬಿ.ಎಲ್. ವೇಣು ಭಾನುವಾರ ಬಿಡುಗಡೆಗೊಳಿಸಿದರು. ಡಾ.ಬಿ.ಟಿ.ರುದ್ರೇಶ್, ಡಾ.ಬಿ.ಕೆ.ರವಿ ಇದ್ದರು.
ಚಿತ್ರದುರ್ಗದಲ್ಲಿ ನಾಟಿ ವೈದ್ಯ ಎಚ್.ಎನ್.ತಿಪ್ಪೇರುದ್ರಸ್ವಾಮಿ ಅವರ ಹುಚ್ಚು ಹಿಡಿಯಿತು ಮತ್ತು ಕೆಲವು ಕಥೆಗಳು ಪುಸ್ತಕವನ್ನು ಕಾದಂಬರಿಕಾರ ಡಾ.ಬಿ.ಎಲ್. ವೇಣು ಭಾನುವಾರ ಬಿಡುಗಡೆಗೊಳಿಸಿದರು. ಡಾ.ಬಿ.ಟಿ.ರುದ್ರೇಶ್, ಡಾ.ಬಿ.ಕೆ.ರವಿ ಇದ್ದರು.   

ಚಿತ್ರದುರ್ಗ: ‘ದೇಶದ ಪ್ರಜೆಗಳನ್ನು ಖಾದಿಧಾರಿಗಳು ಈವರೆಗೂ ಉದ್ಧಾರ ಮಾಡಿಲ್ಲ. ಸ್ವಾಮೀಜಿಗಳಿಗೂ ಒಮ್ಮೆ ಅವಕಾಶ ಕೊಟ್ಟು ನೋಡೋಣ. ಅವರಿಂದಲಾದರೂ ಬದಲಾವಣೆ ಆಗಬಹುದೇ’ ಎಂದು ಕಾದಂಬರಿಕಾರ ಡಾ.ಬಿ.ಎಲ್. ವೇಣು ಹೇಳಿದರು.

ಐಶ್ವರ್ಯ ಫೋರ್ಟ್ ಸಭಾಂಗಣದಲ್ಲಿ ನಾಟಿ ವೈದ್ಯ ಎಚ್.ಎನ್. ತಿಪ್ಪೇರುದ್ರಸ್ವಾಮಿ ಅವರ ‘ಹುಚ್ಚು ಹಿಡಿಯಿತು ಮತ್ತು ಕೆಲವು ಕಥೆಗಳು’ ಎಂಬ ಪುಸ್ತಕವನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಭಕ್ತರಿಗೆ ಆಶೀರ್ವದಿಸಿ ದಾರಿ ತೋರಬೇಕಾದ ಸ್ವಾಮೀಜಿಗಳೇ ಬೇಡುವಂಥ ಪರಿಸ್ಥಿತಿ ಬಂದಿದೆ. ಮನಸ್ಸು ಬದಲಿಸಿ ಚುನಾವಣೆ ನಿಂತರೂ ಅಚ್ಚರಿಯಿಲ್ಲ. ಸ್ವಾಮೀಜಿಗಳು ದೇಶ ಆಳಿದರೆ ತಪ್ಪಿಲ್ಲ. ದೇಗುಲ ಬದಲು ಶಾಲೆಗಳ ನಿರ್ಮಾಣ, ಬೆಲೆ ಏರಿಕೆ ನಿಯಂತ್ರಣ, ಅತ್ಯಾಚಾರಕ್ಕೆ ಕಡಿವಾಣ, ಧರ್ಮ–ಜಾತಿಗಳ ನಡುವಿನ ಸಂಘರ್ಷಕ್ಕೆ ಸ್ವಾಮೀಜಿಗಳಿಂದಾದರೂ ಮುಕ್ತಿ ದೊರೆಯಬಹುದೇ ಎಂದು ಕಾದು ನೋಡೋಣ’ ಎಂದು ಹೇಳಿದರು.

ADVERTISEMENT

ಬರವಣಿಗೆ ಎಂಬುದು ಸೃಜನಶೀಲತೆ. ಭಾವನೆ, ಅಂತರಂಗದ ಅಭಿವ್ಯಕ್ತಿಯನ್ನು ಹಾಳೆಯ ಮೇಲೆ ಮೂಡಿಸುವುದು ಕಷ್ಟದ ಕೆಲಸ. ಕಥೆ, ಕಾದಂಬರಿ, ಕವನ ರಚಿಸುವುದು ಸುಲಭದ ಮಾತಲ್ಲ. ಜನರ ನಾಡಿಮಿಡಿತ ಅರಿಯಬಲ್ಲವರು ಮಾತ್ರ ಸಾಹಿತಿ ಆಗಬಲ್ಲರು. ಯಾವ ಕೃತಿಯನ್ನೇ ರಚಿಸಲಿ ಸಮಾಜದ ವ್ಯವಸ್ಥೆ ತಿದ್ದುವ, ನಿರ್ಗತಿಕರ ನೋವಿಗೆ ಸ್ಪಂದಿಸುವ ಹಾಗೂ ಶೋಷಿತರ ದನಿಯಾಗಿ ನಿಲ್ಲುವ ಸಂಕಲ್ಪ ಕೃತಿಕಾರರಲ್ಲಿ ಇರಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ.ಬಿ.ಕೆ. ರವಿ, ‘ಜನರಲ್ಲಿ ವೈಜ್ಞಾನಿಕ ಮನೋಭಾವ ಬಿತ್ತುವ ಶಕ್ತಿ ಮಾಧ್ಯಮ ಮತ್ತು ಬರಹಗಾರರಿಗೆ ಇದೆ. ಕೋವಿಡ್ ಪರಿಣಾಮ ದೇಶದ ಮಾಧ್ಯಮ ಕ್ಷೇತ್ರದಲ್ಲಿ ಶೇ 40ರಷ್ಟು ಪತ್ರಕರ್ತರು ಉದ್ಯೋಗ ಕಳೆದುಕೊಳ್ಳುವಂತಾಗಿದೆ’ ಎಂದು ವಿಷಾದಿಸಿದರು.

ರಾಜ್ಯ ಹೋಮಿಯೊ ಮಂಡಳಿ ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್, ಕೃತಿಕಾರ ಎಚ್.ಎನ್. ತಿಪ್ಪೇರುದ್ರಸ್ವಾಮಿ ಇದ್ದರು.

***

ಸುಪ್ರೀಂ ಕೋರ್ಟ್‌ ಆದೇಶವೆಂದು ಸರ್ಕಾರ ದೇಗುಲಗಳನ್ನು ನೆಲಸಮಗೊಳಿಸುತ್ತಿದೆ. ಮತ್ತೊಂದೆಡೆ ಹಿಂಬಾಲಕರಿಂದ ವಿರೋಧಿಸಿ ಹೋರಾಟ ಮಾಡಿಸುತ್ತಿದೆ. ಮಸೀದಿಗಳನ್ನು ಕೆಡವುತ್ತಿಲ್ಲ ಎಂದು ಪ್ರಶ್ನಿಸುತ್ತಿದೆ.
–ಡಾ.ಬಿ.ಎಲ್. ವೇಣು, ಕಾದಂಬರಿಕಾರ

ದೇಶ ಎಷ್ಟೇ ಅಭಿವೃದ್ಧಿ ಹೊಂದಿದರು, ಪ್ರಜೆಗಳು ಆರ್ಥಿಕವಾಗಿ ಸಬಲರಾದರೂ ಮಾನವೀಯತೆ ಇಲ್ಲದಿದ್ದರೆ, ನೊಂದವರ ಕಣ್ಣೀರು ಒರೆಸಲಾಗದು. ಆರೋಗ್ಯವಂಥ ಸಮಾಜ ನಿರ್ಮಿಸಲು ಮಿಡಿಯುವ ಹೃದಯಗಳು ಬೇಕು.
–ಪ್ರೊ.ಹೊನಗಾನಹಳ್ಳಿ ಕರಿಯಣ್ಣ, ತುಮಕೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.