ADVERTISEMENT

ಅಧಿಕಾರ ಸಿಕ್ಕರೆ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ: ಸಿದ್ದರಾಮಯ್ಯ

ತರಳಬಾಳು ಶ್ರೀಮಠಕ್ಕೆ ಸಿದ್ಧರಾಮಯ್ಯ ಭೇಟಿ: ಸಿರಿಗೆರೆ ಶ್ರೀಗಳಿಂದ ಆಶೀರ್ವಾದ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 4:40 IST
Last Updated 4 ಆಗಸ್ಟ್ 2022, 4:40 IST
ಸಿರಿಗೆರೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.
ಸಿರಿಗೆರೆಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.   

ಸಿರಿಗೆರೆ: ‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಾವು ಎರಡು ವಿಷಯಕ್ಕೆ ಅಭಿನಂದಿಸುತ್ತೇವೆ. ಭರಮಸಾಗರ ಹಾಗೂ ಜಗಳೂರು ಏತ ನೀರಾವರಿಗೆ ಓಂಕಾರ ಹಾಡಿದ ಕಾರಣಕ್ಕೆ ಹಾಗೂ 2018ರಲ್ಲಿ ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ನಡೆದ ಸಂದರ್ಭದಲ್ಲಿ ಯೋಜನೆಗಳಿಗೆ ₹ 500 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಸೇರ್ಪಡೆ ಮಾಡಿದ ಕಾರಣಕ್ಕೆ’ ಎಂದು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಗುಣಗಾನ ಮಾಡಿದರು.

ಇಲ್ಲಿಯ ತರಳಬಾಳು ಮಠಕ್ಕೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಶೀರ್ವದಿಸಿ ಮಾತನಾಡಿದರು.

‘ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯಗೊಳಿಸಿ ಜಾತಿಭೇದವಿಲ್ಲದ ಮುಖ್ಯಮಂತ್ರಿಯಾಗಿ ಹೆಸರಾಗಿದ್ದಾರೆ. ರೈತಪರ ಕಾಳಜಿ ಇರುವ ಸಿದ್ದರಾಮಯ್ಯನವರಿಗೆ ಭಗವಂತ ಆರೋಗ್ಯ ಭಾಗ್ಯ ಕರುಣಿಸಲಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಇನ್ನೂ ಉತ್ತಮ ಮಟ್ಟದ ಯಶಸ್ಸು ಸಿಗಲಿ. ಇನ್ನೂ ಇಂತಹ ರೈತಪರ ಕೆಲಸಗಳನ್ನು ಮಾಡಲಿ’ ಎಂದು ಹಾರೈಸಿದರು.

ADVERTISEMENT

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ನಾನು ಸಮಾಜದ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ತರಳಬಾಳು ಮಠವು ಅಧ್ಯಾತ್ಮ ಮಾತ್ರವಲ್ಲದೇ ರೈತರ ಕಷ್ಟಗಳಿಗೆ ಸ್ಪಂದಿಸುವ ಮಠವಾಗಿದೆ. ಇಂದಿನ ರೈತರು ಕೃಷಿ ಲಾಭದಾಯಕವಲ್ಲ ಎಂದು ಪಟ್ಟಣ ಸೇರುತ್ತಿದ್ದಾರೆ. ಆದರೆ ರೈತರ ಉತ್ಪಾದನೆಯಿಂದಲೇ ದೇಶವು ಪ್ರಗತಿ ಸಾಧಿಸಲು ಸಾಧ್ಯ. ಶಿಕ್ಷಕರು, ರೈತರು ಹಾಗೂ ಸೈನಿಕರು ಸಮಾಜದ ಶಕ್ತಿಗಳು. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷಿಗಾಗಿ ₹ 55,000 ಕೋಟಿ ಖರ್ಚು ಮಾಡಿದೆ. ಪೂರ್ಣ ಪ್ರಮಾಣದ ಎಲ್ಲ ಕೃಷಿಗಳಿಗೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಇನ್ನೂ ₹ 2 ಲಕ್ಷ ಕೋಟಿ ಹಣ ಬೇಕು. ಮತ್ತೊಮ್ಮೆ ನಮಗೆ ಅಧಿಕಾರ ಸಿಕ್ಕರೆ ಕರ್ನಾಟಕದಲ್ಲಿರುವ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ಭರವಸೆ ನೀಡಿದರು.

ಮಾಜಿ ಸಚಿವ ಎಚ್.ಆಂಜನೇಯ, ಚಳ್ಳಕೆರೆ ಶಾಸಕ ರಘುಮೂರ್ತಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಬ್ಯಾಡಗಿ ಮಾಜಿ ಶಾಸಕ ಎಸ್.ಆರ್. ಪಾಟೀಲ್, ಹೊಸದುರ್ಗ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ, ಅಸಂಘಟಿತ ಪೌರಕಾರ್ಮಿಕರ ಸಂಘದ ಜಿ.ಎಸ್. ಮಂಜುನಾಥ್, ಮೊಳಕಾಲ್ಮುರು ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಬಾಬು, ಭರಮಸಾಗರ ಕೆರೆ ಸಮಿತಿ ಅಧ್ಯಕ್ಷ ಶಶಿ ಪಾಟೀಲ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.