
ಹೊಸದುರ್ಗ: ‘ಮಹಿಳೆಯರ ಮೇಲೆ ಅನುಕಂಪ ತೋರಿಸಿದರೆ ಸಾಲದು; ಅಂತಃಕರಣ ತೋರಿಸಿ ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವ ಜವಾಬ್ದಾರಿ ಪುರುಷರ ಮೇಲಿದೆ. ಮಹಿಳೆಯರಿಗೆ ಸ್ಥಾನಮಾನ, ಅಧಿಕಾರ ಕೊಡುವಾಗ ಅನುಮಾನಿಸುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನವಿದ್ದಂತೆ’ ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಿಪ್ಪೇಸ್ವಾಮಿ ಕಲಾ ಮತ್ತು ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿಯಿಂದ ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಭಜನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಬಸವಾದಿ ಶರಣರಂತೆ ಶೇ 50ರಷ್ಟು ಮೀಸಲಾತಿ ಕೊಡಬೇಕಾದ ನಾವು ಶೇ 33 ಕೊಡಲು ತಾರತಮ್ಯ ಮಾಡುತ್ತಿರುವುದು ಸಂವಿಧಾನಕ್ಕೆ ಮತ್ತು ಹೆಣ್ಣಿಗೆ ಮಾಡಿದ ದ್ರೋಹ. ಆಡಳಿತಾರೂಢ ಪಕ್ಷಗಳು ಸ್ತ್ರೀ ಸಬಲತೆಗಾಗಿ, ಮಹಿಳಾ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಅವರನ್ನು ಮುಖ್ಯ ವಾಹಿನಿಗೆ ತರಲು ರಾಜಕೀಯ ಇಚ್ಛಾಶಕ್ತಿ ಬೇಕು. ಆದರೆ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಮಹಿಳಾ ಮೀಸಲಾತಿ ಕಡತ ಕುಂಟುತ್ತ ಸಾಗುತ್ತಿದೆ’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್ ಮಾತನಾಡಿ, ‘ಇಲ್ಲಿನ ಮಹಿಳಾ ಸಂಘ ಭಜನೆ ಕಲಿತು ಹಳ್ಳಿ ಹಳ್ಳಿಗಳಲ್ಲಿ ಭಜನೆಗೆ ಹೋಗುತ್ತಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಭಜನೆಗಳನ್ನು ಕಲಿಸಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕಿದೆ. ಬಾಲ್ಯದಿಂದ ಮುಪ್ಪಿನವರೆಗೂ ಹೆಣ್ಣಿನ ಆಶ್ರಯ, ಹಾರೈಕೆ ಬೆಲೆಕಟ್ಟಲಾಗದು. ಹಾಗಾಗಿ ಹೆಣ್ಣನ್ನು ಗೌರವರಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯ ನಮ್ಮದಾಗಬೇಕು’ ಎಂದು ತಿಳಿಸಿದರು.
ಜಿ.ಎನ್.ಕೆರೆ ತಿಪ್ಪೇಸ್ವಾಮಿ ಕಲಾ ಮತ್ತು ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿ, ಅರೇಹಳ್ಳಿ ಪಾಂಡುರಂಗ ಭಜನಾ ಮಂಡಳಿ, ಅಗಸರಹಳ್ಳಿ ಕೃಷ್ಣ ಯುವಕರ ಸಂಘ, ಕಸಪ್ಪನಹಳ್ಳಿ ಕೋಡಿ ಕರಿಯಮ್ಮ ದೇವಿ ಕಲಾ ಸಂಘ, ಜಿ.ಎನ್. ಕೆರೆ ದಶರಥ ರಾಮೇಶ್ವರ ವೀರಗಾಸೆ ಯುವಕರ ಸಂಘಗಳು ಭಜನಾ ಕಾರ್ಯಕ್ರಮ ನಡೆಸಿಕೊಟ್ಟವು. ಕುಮಾರಿ ನವ್ಯಾ ಮತ್ತು ಸಂಗಡಿಗರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
ಪ್ರಾಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್ ಎನ್.ಒ, ಐ.ಆರ್.ಎಸ್. ಅಧಿಕಾರಿ ವಿಜಯ ನಿರಂಜನ್, ಮುಖಂಡರಾದ ಬಿ.ಎಸ್. ದ್ಯಾಮಣ್ಣ, ಎನ್.ಎಲ್. ನಾಗರಾಜ್ ಎರಗುಂಟಪ್ಪ, ಕೆ.ಬಿ. ರಮೇಶ್, ಪಬ್ಲಿಕ್ ಟಿವಿ ಪ್ರಕಾಶ್, ತಿಪ್ಪೇಸ್ವಾಮಿ ಕಲಾ ಮತ್ತು ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸುತ್ತಮುತ್ತ ಗ್ರಾಮಗಳ ಮಹಿಳೆಯರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.