ADVERTISEMENT

ಮಹಿಳಾ ಪರ ವರದಿಗಾರಿಕೆ ಇಂದಿನ ಅಗತ್ಯ: ಪತ್ರಕರ್ತೆ ಭಾರತಿ ಹೆಗಡೆ ಅನಿಸಿಕೆ

ಪತ್ರಿಕೆಗಳು ಮತ್ತು ಮಹಿಳಾ ಸಾಹಿತ್ಯ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 2:41 IST
Last Updated 24 ಆಗಸ್ಟ್ 2025, 2:41 IST
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಆಯೋಜಿಸಿರುವ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದಲ್ಲಿ ಶನಿವಾರ ‘ಪತ್ರಿಕೆಗಳು ಮತ್ತು ಮಹಿಳಾ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಪತ್ರಕರ್ತೆ ಭಾರತಿ ಹೆಗಡೆ ಮಾತನಾಡಿದರು
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಆಯೋಜಿಸಿರುವ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದಲ್ಲಿ ಶನಿವಾರ ‘ಪತ್ರಿಕೆಗಳು ಮತ್ತು ಮಹಿಳಾ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಪತ್ರಕರ್ತೆ ಭಾರತಿ ಹೆಗಡೆ ಮಾತನಾಡಿದರು   

ಚಿತ್ರದುರ್ಗ: ‘ಮಹಿಳೆಯರನ್ನು ಮಹಿಳೆಯಾಗಿ ಗುರುತಿಸುವ ಹೊಣೆ ಪತ್ರಿಕೋದ್ಯಮದ ಮೇಲಿದೆ. ಈ ವಿಚಾರದಲ್ಲಿ ಯುವಪತ್ರಕರ್ತರು ಹೆಚ್ಚಿನ ಎಚ್ಚರಿಕೆ, ಕಾಳಜಿವಹಿಸಬೇಕು’ ಎಂದು ಪತ್ರಕರ್ತೆ ಭಾರತಿ ಹೆಗಡೆ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿರುವ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರದಲ್ಲಿ ಶನಿವಾರ ‘ಪತ್ರಿಕೆಗಳು ಮತ್ತು ಮಹಿಳಾ ಸಾಹಿತ್ಯ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.

‘ಮಹಿಳಾ ಪರ ವರದಿಗಾರಿಕೆಯ ಅವಶ್ಯಕತೆ ಎದುರಾಗಿದೆ. ವರದಿ ಬರೆಯುವಾಗ ಸಹ ಸೂಕ್ತ ಪದ ಬಳಕೆ ಮಾಡಬೇಕು. ಏಕೆಂದರೆ ಹೆಣ್ಣಿಗೂ ಸಹ ಘನತೆ ಗೌರವವಿದೆ. ಆರೋಗ್ಯಕರ ಸಮಾಜಕ್ಕೆ ಮಹಿಳಾ ಸಾಹಿತ್ಯದ ಸಮಗ್ರತೆ ಅವಶ್ಯವಾಗಿದೆ’ ಎಂದರು.

ADVERTISEMENT

‘ಯುವಪತ್ರಕರ್ತರು ನಿಖರ ಗುರಿ, ಸ್ಪಷ್ಟ ಓದು ಇರಬೇಕು. ಆಗ ಮಾತ್ರ ನಿಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸುಗಳಿಸಲು ಸಾಧ್ಯ. ಪ್ರಾರಂಭದಿಂದಲೇ ಸಾಹಿತ್ಯ ಅಧ್ಯಯನಕ್ಕೆ ಸಮಯ ಮೀಸಲಿಡಿ. ಯಾವುದೇ ಪೂರ್ವಾಗ್ರಹದಿಂದ ಎಂದಿಗೂ ವರದಿ ಮಾಡಬೇಡಿ’ ಎಂದು ಸಲಹೆ ನೀಡಿದರು.

‘ಮಹಿಳೆಯರ ಮೇಲೆ ನಿರಂತರ ಶೋಷಣೆಗಳು ನಡೆಯುತ್ತಿವೆ. ಅವುಗಳನ್ನು ಖಂಡಿಸುವ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಮಹಿಳೆಯರ ಬಗೆಗಿನ ಮನೋಭಾವನೆ ಬದಲಾಯಿಸಿಕೊಳ್ಳಬೇಕು’ ಎಂದು ಹೇಳಿದರು.

‘ಮಹಿಳಾ ಪುರವಣಿಗಳು ಮಹಿಳೆಯರಿಗೆ ಮಾತ್ರ ಸೀಮಿತವಲ್ಲ. ನಮ್ಮ ಧೋರಣೆಗಳನ್ನು ಬದಲಾಯಿಸಿಕೊಳ್ಳಬೇಕು. ಮಹಿಳೆಯರ ಸಮಸ್ಯೆಗಳು ಇಂದಿಗೂ ಸಾಕಷ್ಟಿವೆ. ಧಾರಾವಾಹಿ, ಕಥೆ, ಕವಿತೆ, ಕಾದಂಬರಿಗಳಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಪತ್ರಿಕೆಗಳಲ್ಲಿ ಸಹ ಮಹಿಳಾ ಬರಹಗಳಿಗೆ ಒತ್ತು ನೀಡಬೇಕಿದೆ’ ಎಂದರು.

‘ಮಹಿಳೆಯರು ಅಡುಗೆ ಮನೆಗೆ ಮಾತ್ರ ಸೀಮಿತವಾಗಬಾರದು. ಮಹಿಳೆಯರು ಸಾಮಾಜಿಕ ಮಾಧ್ಯಮ, ವಿವಿಧ ವೇದಿಕೆಗಳ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು. ಬಾನು ಮುಷ್ತಾಕ್‌ ಅವರಿಗೆ ಬುಕರ್‌ ಪ್ರಶಸ್ತಿ ದೊರೆತ ನಂತರ ಅವರಿಗೆ ಗೌರವ ದೊರೆಯುತ್ತಿದೆ. ಆದರೆ ಈ ಮೊದಲು ಅವರು ಯಾರೂ ಎಂಬುದು ಸಹ ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ. ಮಹಿಳೆಯರಿಗೆ ಸ್ಥಾನಮಾನಗಳು ದೊರೆಯುವಂತೆ ಆಗಬೇಕು’ ಎಂದು ತಿಳಿಸಿದರು.

‘ಇಂದು ಮಹಿಳಾ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅವಶ್ಯವಿದೆ. ಅವಮಾನ, ಅಸ್ಮಿತೆಯನ್ನು ಹೋಗಲಾಡಿಸಬೇಕಾಗಿದೆ. ಆರೋಗ್ಯಯುತ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಾಣ ಬಹಳ ಅವಶ್ಯಕ. ಮಹಿಳೆಯರ ಪರ ಸೂಕ್ಷ್ಮತೆ ಬರಬೇಕು. ಮಹಿಳೆಯರಿಗೆ ತನ್ನದೇಯಾದ ಘನತೆ ಬೇಕಾಗಿದೆ’ ಎಂದರು.

ಬಳಿಕ ಶಿಬಿರಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ವಕೀಲರಾದ ಸುಮನಾ ಎಸ್‌.ಅಂಗಡಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್‌.ಎನ್‌.ಮುಕುಂದರಾಜ್, ಸದಸ್ಯ ಸಂಚಾಲಕಿ ಪಿ.ಚಂದ್ರಿಕಾ, ಶಿಬಿರದ ಸಹ ನಿರ್ದೇಶಕಿ ಮಮತಾ ಅರಸೀಕೆರೆ ಇದ್ದರು.

ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪ್ರಜಾವಾಣಿ ದಾವಣಗೆರೆ ಬ್ಯುರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಮಾತನಾಡಿದರು
ಸಾಹಿತ್ಯ ಕಲಿಕೆ ಪತ್ರಿಕೋದ್ಯಮಕ್ಕೆ ಪೂರಕ. ಇಂದು ಅನೇಕ ಕ್ಷೇತ್ರಗಳಲ್ಲಿ ಅನುವಾದಕರಿಗೆ ಅಪಾರವಾದ ಬೇಡಿಕೆ ಇದೆ. ಕ್ರೀಡಾ ವರದಿಗಾರರಿಗೂ ಸಾಕಷ್ಟು ಅವಕಾಶಗಳಿವೆ. ಪತ್ರಕರ್ತರಿಗೆ ಅನುಮಾನಗಳಿದ್ದರೆ ನೈಜತೆ ತಿಳಿಯಲು ಸಾಧ್ಯವಾಗುತ್ತದೆ.
– ಮಹಾಬಲೇಶ್ವರ ಭಟ್‌, ಸಂಪಾದಕ ಸಂಯಕ್ತ ಕರ್ನಾಟಕ

‘ಸಾಹಿತ್ಯ ಇತಿಹಾಸದ ಅರಿವು ಪತ್ರಕರ್ತರಿಗೆ ಇರಲಿ’

‘ಸಾಹಿತ್ಯ ಮತ್ತು ಇತಿಹಾಸದ ಅರಿವು ಪತ್ರಕರ್ತರಿಗೆ ಇರಬೇಕು. ಇಲ್ಲವಾದರೆ ವೃತ್ತಿ ಬದುಕಿನಲ್ಲಿ ಉತ್ತಮ ವರದಿ ನೀಡಲು ಸಾಧ್ಯವಾಗುವುದಿಲ್ಲ’ ಎಂದು ಪ್ರಜಾವಾಣಿ ದಾವಣಗೆರೆ ಬ್ಯುರೋ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ತಿಳಿಸಿದರು.

ಸಂಪಾದಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಯುವ ಪತ್ರಕರ್ತರು ಭಾಷೆಯ ಮೇಲೆ ಹಿಡಿತ ಸಾಧಿಸಬೇಕು. ಇದು ನಿರಂತರ ಅಧ್ಯಯನದಿಂದ ಮಾತ್ರ ಸಾಧ್ಯ’ ಎಂದರು.

‘ಪ್ರಸ್ತತ ವಿಷಯಗಳ ಬಗ್ಗೆ ಜ್ಞಾನವಿರಬೇಕು. ಯುವ ಪತ್ರಕರ್ತರು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಹೆಚ್ಚಿನ ಗಮಹ ಹರಿಸಬೇಕು. ಸಾಹಿತ್ಯ ಜೀವನವನ್ನು ಕಲಿಸುತ್ತದೆ. ಪದ ಸಂಪತ್ತು ಜ್ಞಾನದ ವಿಸ್ತಾರವನ್ನು ಹೆಚ್ಚಿಸುತ್ತದೆ. ಪತ್ರಿಕಾ ಪರಿಭಾಷೆಯನ್ನು ಕಲಿಯಲು ದಿನಪತ್ರಿಕೆಗಳ ಓದು ಅಗತ್ಯ’ ಎಂದು ತಿಳಿಸಿದರು.

‘ಪತ್ರಿಕೆವಿದ್ಯುನ್ಮಾನ ಮಾಧ್ಯಮಗಳಲ್ಲಿ ಕನಿಷ್ಠ 3-4 ವರ್ಷಗಳ ಕಾಲ ಕೆಲಸ ಮಾಡಿದರೆ ವೃತ್ತಿಗೊಂದು ಗಂಭೀರತೆ ಬರುತ್ತದೆ. ಉದ್ಯೋಗ ಕೊಟ್ಟವರಲ್ಲೂ ನಂಬಿಕೆ ಉಳಿಯುತ್ತದೆ. ಪತ್ರಿಕಾ ವೃತ್ತಿ ಸುಲಭವಲ್ಲ. ಗಡಿಯಾರ ನೋಡಿ ಕೊಂಡು ಮಾಡುವಂಥದ್ದಲ್ಲ. ಭ್ರಮೆಗಳೊಂದಿಗೆ ಈ ವೃತ್ತಿಗೆ ಸೇರಬೇಡಿ. ಇಲ್ಲಿ ಅನೇಕ ಸವಾಲುಗಳಿವೆ’ ಎಂದು ಸಂಯಕ್ತ ಕರ್ನಾಟಕ ಸಂಪಾದಕ ಮಹಾಬಲೇಶ್ವರಭಟ್‌ ಹೇಳಿದರು.

‘ಪತ್ರಿಕೋದ್ಯಮ ವಿಷಯವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿದ್ದರು ಸಹ ಬರವಣಿಗೆ ಕೌಶಲ ವ್ಯಾಕರಣ ವಾಕ್ಯಜೋಡಣೆಗಳ ತಿಳಿವಳಿಕೆ ಇರಬೇಕು. ಇದಕ್ಕೆ ಸಾಹಿತ್ಯದ ಓದು ಸಾಕಷ್ಟು ನೆರವಾಗುತ್ತದೆ. ಪತ್ರಿಕಾ ವರದಿಯಲ್ಲಿ ಊಹೆಗಳಿಗೆ ಅವಕಾಶವಿರುವುದಿಲ್ಲ’ ಎಂದು ವಿಜಯವಾಣಿ ಚಿತ್ರದುರ್ಗ ಆವೃತ್ತಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.