ADVERTISEMENT

ಕೂಲಿ ಮಾಡದೇ ನರೇಗಾ ಹಣ ಖರ್ಚಾಯಿತೇ: ಬಿ.ಎಸ್‌.ಯಡಿಯೂರಪ್ಪ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2019, 13:50 IST
Last Updated 27 ಜನವರಿ 2019, 13:50 IST
ಬರ ಪರಿಹಾರ ಕಾಮಗಾರಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಭಾನುವಾರ ಸಭೆ ನಡೆಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ ಇದ್ದಾರೆ
ಬರ ಪರಿಹಾರ ಕಾಮಗಾರಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಚಿತ್ರದುರ್ಗದಲ್ಲಿ ಭಾನುವಾರ ಸಭೆ ನಡೆಸಿದರು. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಸಂಸದ ಜಿ.ಎಂ.ಸಿದ್ದೇಶ್ವರ, ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ ಇದ್ದಾರೆ   

ಚಿತ್ರದುರ್ಗ: ನರೇಗಾ ಯೋಜನೆಯಡಿ ಕೂಲಿ ಮಾಡಿದ ಕಾರ್ಮಿಕರಿಗೆ ಪಾವತಿಯಾಗಬೇಕಾದ ₹ 104 ಕೋಟಿ ಹಣ ಬಾಕಿ ಉಳಿದಿದೆ. ಎರಡು ತಿಂಗಳಿಂದ ನರೇಗಾ ಕೆಲಸಕ್ಕೆ ಜನ ಬರುತ್ತಿಲ್ಲ. ಜಿಲ್ಲೆಯ ಯಾವ ಭಾಗದಲ್ಲಿಯೂ ಕಾಮಗಾರಿ ನಡೆಯುತ್ತಿರುವುದು ಕಣ್ಣಿಗೆ ಬೀಳುತ್ತಿಲ್ಲ. ಆದರೂ, ಮಾನವ ದಿನ ಸೃಜನೆ ನಿಗದಿತ ಗುರಿಗಿಂತಲೂ ಹೆಚ್ಚಾಗಿ, ಹಣ ಖರ್ಚಾಗಿದ್ದು ಹೇಗೆ...?

ವಿರೋಧ ಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ಎತ್ತಿದ ಈ ಪ್ರಶ್ನೆಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ ಉತ್ತರಿಸಲು ಹೆಣಗಾಡಿದರು. ಬರಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುವಾಗ ಅನಿರೀಕ್ಷಿತವಾಗಿ ಈ ಪ್ರಶ್ನೆ ತೂರಿ ಬಂದಿತು. ಶಾಸಕರು ಮಧ್ಯಪ್ರವೇಶಿಸಿ ಪ್ರಶ್ನೆಯನ್ನು ಇನ್ನಷ್ಟು ವಿಸ್ತಾರವಾಗಿ ಬಿಡಿಸಿಟ್ಟರು.

‘ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಬರಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಚೆಕ್‌ಡ್ಯಾಂ, ಸಿ.ಸಿ.ರಸ್ತೆ, ಕೆರೆ ಹೂಳೆತ್ತುವ ಕೆಲಸ ನಡೆಯುತ್ತಿದೆ. 55 ದಿನಗಳಿಂದ ₹ 97 ಕೋಟಿ ಹಾಗೂ ಕಳೆದ ವರ್ಷದ ₹ 6 ಕೋಟಿ ಕೂಲಿ ಹಣ ಬಾಕಿ ಉಳಿದಿದೆ. ಈವರೆಗೆ 45 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ’ ಎಂದು ಸಿಇಒ ರವೀಂದ್ರ ನೀಡಿದ ಮಾಹಿತಿ ಯಡಿಯೂರಪ್ಪ ಅವರ ಅಸಮಾಧಾನಕ್ಕೆ ಕಾರಣವಾಯಿತು.

ADVERTISEMENT

‘ಈವರೆಗೆ 8 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ವೀಕ್ಷಣೆ ಮಾಡಿದ್ದೇನೆ. ಇಷ್ಟೊಂದು ದೊಡ್ಡಮೊತ್ತದ ಹಣ ಬಾಕಿ ಉಳಿದಿರುವುದು ಚಿತ್ರದುರ್ಗದಲ್ಲಿ ಮಾತ್ರ. ಕೂಲಿಯನ್ನೇ ನೀಡದಿದ್ದರೆ ಕಾರ್ಮಿಕರು ಕೆಲಸಕ್ಕೆ ಬರಲು ಸಾಧ್ಯವಿಲ್ಲ. ಎರಡು ತಿಂಗಳವರೆಗೆ ಹಣ ಸಿಗದೇ ಇದ್ದರೆ ಅವರು ಬದುಕು ನಡೆಸುವುದು ಹೇಗೆ’ ಎಂದು ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

‘ಕೆಲಸಕ್ಕೆ ಬರುವ ಬಹುತೇಕ ಕಾರ್ಮಿಕರು ಮರುದಿನ ಗೈರಾಗುತ್ತಾರೆ. ಆ ಸ್ಥಾನದಲ್ಲಿ ಹೊಸಬರು ಸೇರಿಕೊಳ್ಳುತ್ತಾರೆ. 300 ಜನರು ಕೆಲಸ ಮಾಡಿದರೆ 500 ಜನರ ಲೆಕ್ಕ ಬರೆಯಲಾಗುತ್ತಿದೆ. ಲೆಕ್ಕದ ಹಾಳೆ, ಪೆನ್ನು ಎರಡೂ ಅಧಿಕಾರಿಗಳ ಬಳಿ ಇವೆ. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ಬಿಜೆಪಿ ಶಾಸಕರು ಭೇಟಿ ನೀಡಿ ವಾಸ್ತವ ಪರಿಶೀಲಿಸಿ’ ಎಂದು ಸೂಚನೆ ನೀಡಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಇದಕ್ಕೆ ಧ್ವನಿಗೂಡಿಸಿದರು. ‘ಹಿರಿಯೂರ ತಾಲ್ಲೂಕು ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅವ್ಯವಹಾರ ನಡೆಯುತ್ತಿದೆ. ಯಂತ್ರಗಳನ್ನು ಬಳಸಿ ಕೆಲಸ ಮಾಡಿ ಜನರನ್ನು ವಂಚಿಸಲಾಗುತ್ತಿದೆ. ಕೆಲ ಗುತ್ತಿಗೆದಾರರ ಹಿತಾಸಕ್ತಿಗೆ ಅನುಗುಣವಾಗಿ ಅಧಿಕಾರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ರೈತರಿಗೆ ನೆರವಾಗಿ:‘ತೀವ್ರ ಬರ ಪರಿಸ್ಥಿತಿಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಹಳ್ಳಿಗಳಿಗೆ ಭೇಟಿ ನೀಡಿ ರೈತರ ಸಂಕಷ್ಟಗಳಿಗೆ ನೆರವಾಗಿ’ ಎಂದು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ನೀಡಿದರು.

‘ತೆಂಗು, ಅಡಿಕೆ ಹಾಗೂ ದಾಳಿಂಬೆ ತೋಟಗಳು ಒಣಗಿವೆ. ಜಾನುವಾರುಗಳಿಗೆ ಮೇವಿಲ್ಲ, ಗೋಶಾಲೆ ತೆರೆಯುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ. ಅಗತ್ಯ ಇರುವ ಕಡೆ ಗೋಶಾಲೆ ತೆರೆದರೆ ಅನುಕೂಲವಾಗುತ್ತದೆ. ಟ್ಯಾಂಕರ್‌ ಮೂಲಕ ಸರಬರಾಜು ಮಾಡುತ್ತಿರುವ ನೀರು ಯಾವುದಕ್ಕೂ ಸಾಲುತ್ತಿಲ್ಲ’ ಎಂದು ಬರದ ಚಿತ್ರಣವನ್ನು ಅಧಿಕಾರಿಗಳ ಎದುರು ಬಿಡಿಸಿಟ್ಟರು.

ಕತ್ತೆ ಕಾಯುತ್ತೀರಾ: ಕಿಡಿ
‘ಚಳ್ಳಕೆರೆ ತಾಲ್ಲೂಕಿನ ದೊಡ್ಡಚೆಲ್ಲೂರು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಮನೆಗೆ 25 ದಿನ ಕಳೆದರೂ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಪತ್ನಿ, ಮಕ್ಕಳು ಸೇರಿ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ನೀವೇನು ಕತ್ತೆ ಕಾಯುತ್ತೀರಾ’ ಎಂದು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ಯಡಿಯೂರಪ್ಪ ಕಿರಿಕಾರಿದರು.

ಸುಮಾರು ₹ 5 ಲಕ್ಷ ಸಾಲ ಮಾಡಿಕೊಂಡಿದ್ದ ರೈತ ಹನುಮಂತರಾಯ, ಡಿ.31ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು.

‘ಆತ್ಮಹತ್ಯೆ ಮಾಡಿಕೊಂಡ ರೈತರಿಗೆ 24 ಗಂಟೆಯಲ್ಲಿ ಪರಿಹಾರ ವಿತರಣೆ ಆಗಬೇಕು ಎಂಬ ನಿಯಮವಿದೆ. ಇದು ಸರಿಯಾಗಿ ಪಾಲನೆ ಆಗುತ್ತಿಲ್ಲ. ನಿಮ್ಮ ಮನೆಯಲ್ಲಿಯೇ ಇಂತಹ ಅವಘಡ ಸಂಭವಿಸಿದ್ದರೆ ಸುಮ್ಮನೆ ಕೂರುತ್ತಿದ್ದಿರಾ’ ಎಂದು ಕೇಳಿದರು.

ಸದನದಲ್ಲಿ ಹೋರಾಟ
2016–17ರಲ್ಲಿ ಜಿಲ್ಲೆಯಲ್ಲಿ ನಡೆದ ತೋಟಗಾರಿಕಾ ಬೆಳೆಗಳ ಸಮೀಕ್ಷೆಯಲ್ಲಿ 3.26 ಲಕ್ಷ ತೆಂಗಿನ ಮರಗಳು ನಾಶವಾಗಿದ್ದು ದೃಢಪಟ್ಟಿತ್ತು. ಇದರ ಆಧಾರದ ಮೇರೆಗೆ ರಾಜ್ಯ ಸರ್ಕಾರ ₹ 13 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಪ್ರತಿ ತೆಂಗಿನ ಮರಕ್ಕೆ ₹ 400 ಪರಿಹಾರ ಲಭ್ಯವಾಗಲಿದೆ ಎಂಬ ಮಾಹಿತಿ ಬಿಜೆಪಿ ಶಾಸಕರನ್ನು ಕೆರಳಿಸಿತು.

‘ನಾಶವಾದ ಮರವನ್ನು ತೆರವುಗೊಳಿಸಲು ಕೂಡ ಪರಿಹಾರ ಸಾಕಾಗದು’ ಎಂದು ಬಿಜೆಪಿ ಶಾಸಕರಾದ ಗೂಳಿಹಟ್ಟಿ ಶೇಖರ್‌ ಹಾಗೂ ಎಂ.ಚಂದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಆಗ ಮಧ್ಯಪ್ರವೇಶಿಸಿದ ಯಡಿಯೂರಪ್ಪ, ‘ಪರಿಹಾರ ನಿಗದಿ ಮಾಡಿರುವುದು ರಾಜ್ಯ ಸರ್ಕಾರ. ಅಧಿಕಾರಿಗಳ ಮೇಲೆ ರೇಗಿದರೆ ಪ್ರಯೋಜನವಿಲ್ಲ. ಇದನ್ನು ಸದನದಲ್ಲಿ ಪ್ರಶ್ನಿಸೋಣ’ ಎಂದು ಸಮಾಧಾನಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.