
ಹಿರಿಯೂರು: ‘ನಗರ ಪ್ರದೇಶದಲ್ಲಿ ದೊರೆಯುವ ಶೈಕ್ಷಣಿಕ ಸೌಲಭ್ಯಗಳು ಗ್ರಾಮೀಣ ಭಾಗದಲ್ಲೂ ಸಿಗುವಂತಾಗಬೇಕು. ಅಂತಹ ಮಾದರಿ ಶಾಲೆ ಇಲ್ಲಿರುವುದು ಅಚ್ಚರಿ ಮೂಡಿಸಿದೆ. ನಾ. ತಿಪ್ಪೇಸ್ವಾಮಿ ಅವರ ಪರಿಶ್ರಮದ ಫಲವಾಗಿ ಸಕಲ ಸೌಲಭ್ಯಗಳಿರುವ ಶಾಲೆ ತಲೆಎತ್ತಿ ನಿಂತಿದೆ’ ಎಂದು ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ತಾಲ್ಲೂಕಿನ ಹೊಸಯಳನಾಡು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
2019ರಲ್ಲಿ ವಾಣಿವಿಲಾಸ ಅಣೆಕಟ್ಟೆ ಬರಿದಾದಾಗ ನೀರು ತುಂಬಿಸಲು ಹಮ್ಮಿಕೊಂಡಿದ್ದ ಪೂಜೆಗೆ ಬಂದಿದ್ದೆ. ಇದೇ ವರ್ಷ ಕೋಡಿ ಬಿದ್ದಾಗ ಬಾಗಿನ ಅರ್ಪಿಸಲು ಬಂದಿದ್ದೆ. ಈ ಭಾಗದ ಜನ ಮೈಸೂರಿನ ರಾಜ ವಂಶಸ್ಥರನ್ನು ಸ್ಮರಿಸುವ ರೀತಿ ಕಂಡರೆ ಮನಸ್ಸು ತುಂಬಿ ಬರುತ್ತದೆ’ ಎಂದು ಹೇಳಿದರು.
‘ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಕ್ಷೇತ್ರದಲ್ಲಿ ಎಂಟು ಮೊರಾರ್ಜಿ ವಸತಿ ಶಾಲೆ, ದೇವರಕೊಟ್ಟ ಗ್ರಾಮದಲ್ಲಿ ವಸತಿ ಶಿಕ್ಷಣ ಸಮುಚ್ಛಯ, ತೋಟಗಾರಿಕೆ ಮಹಾವಿದ್ಯಾಲಯ, ಹಲವು ಸರ್ಕಾರಿ ಶಾಲಾ–ಕಾಲೇಜುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಶ್ರಮಿಸಿದ್ದೇನೆ. ಮೈಸೂರಿನ ಒಡೆಯರ್ ವಂಶಸ್ಥರ ಬಗ್ಗೆ ಈ ಭಾಗದಲ್ಲಿ ಅಪಾರ ಗೌರವವಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರನ್ನು ಹಿರಿಯೂರು ನಗರದ ರಸ್ತೆಗೆ ಈಚೆಗೆ ನಾಮಕರಣ ಮಾಡಿದ್ದೇವೆ. ನಾ. ತಿಪ್ಪೇಸ್ವಾಮಿ ಅವರು ಕೇವಲ 11 ವರ್ಷದಲ್ಲಿ ಸರ್ಕಾರಿ ಶಾಲೆಯೊಂದಕ್ಕೆ ಹೈಟೆಕ್ ಸ್ಪರ್ಶ ನೀಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲಾ ಸಂಘದ ಮಹಾಪೋಷಕ ನಾ. ತಿಪ್ಪೇಸ್ವಾಮಿ ಮಾತನಾಡಿದರು. ಎಸ್.ಡಿ.ಎಂ.ಸಿ.ಅಧ್ಯಕ್ಷ ತಿಮ್ಮಶೆಟ್ರು ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು. ಮೈಸೂರಿನ ಒಡೆಯರ್ ಹಾಗೂ ರಮೇಶ್ ಅರವಿಂದ್ ಅವರನ್ನು ಕಾಣಲು ಸುತ್ತಮುತ್ತಲ ಹಳ್ಳಿಗಳಿಂದ ಅಭಿಮಾನಿಗಳು ಬಂದಿದ್ದರು. ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣಾಭಿವೃದ್ಧಿಯ ಕನಸು ಕಾಣುತ್ತಿದ್ದು ಆ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಅವರನ್ನು ಟೀಕಿಸುವುದನ್ನೇ ಕಾಯಕ ಮಾಡಿಕೊಂಡವರು ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಬೇಕಿದೆಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಸಂಸದ
ನಟ ರಮೇಶ್ ಅರವಿಂದ್ ಮೆಚ್ಚುಗೆ
‘ಸರ್ಕಾರಿ ಶಾಲೆ ಎಂದಾಕ್ಷಣ ಹಳೆಯ ಹರುಕು ಮುರುಕು ಕಟ್ಟಡ ಮುರಿದ ಕುರ್ಚಿ ಬೆಂಚು ಸೋರುವ ಹೆಂಚು ಮಾಸಿದ ಗೋಡೆಗಳು ಪಾಳುಬಿದ್ದ ಕಾಂಪೌಂಡ್ ಇತ್ಯಾದಿ ಚಿತ್ರಣ ಕಣ್ಮುಂದೆ ಬರುತ್ತಿತ್ತು. ಆದರೆ ಈ ಶಾಲೆಯಲ್ಲಿರುವ ಸೌಲಭ್ಯಗಳ ವಿವರ ಪಡೆಯಲು ನನಗೆ ಶಿಕ್ಷಕರೊಬ್ಬರ ನೆರವು ಬೇಕಾಯಿತು’ ಎಂದು ಚಿತ್ರನಟ ರಮೇಶ್ ಅರವಿಂದ್ ಹೇಳಿದರು. ‘ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಎಷ್ಟೆಷ್ಟೋ ಸಾಧಕರನ್ನು ಕಂಡಿದ್ದೇನೆ. ಇಲ್ಲಿ ನಾ. ತಿಪ್ಪೇಸ್ವಾಮಿ ಅವರಂತಹ ನಿಸ್ವಾರ್ಥ ಸಾಧಕನನ್ನು ಕಾಣುವ ಪುಣ್ಯದ ಘಳಿಗೆ ಬಂದಿರುವುದು ನನ್ನ ಅದೃಷ್ಟ’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.