ADVERTISEMENT

ಚಿತ್ರದುರ್ಗದ 251 ಗ್ರಾಮಗಳಲ್ಲಿ ನೀರಿಗೆ ತತ್ವಾರ ಸಾಧ್ಯತೆ

₹ 16 ಕೋಟಿಯ ಕ್ರಿಯಾಯೋಜನೆ ಸಿದ್ಧತೆ, ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 11:14 IST
Last Updated 16 ಏಪ್ರಿಲ್ 2021, 11:14 IST
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌.ನರಸಿಂಹರಾಜು ಮಾತನಾಡಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್‌, ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮುಖ್ಯ ಕಾರ್ಯನಿರ್ಹವಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದಾರೆ.
ಚಿತ್ರದುರ್ಗದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌.ನರಸಿಂಹರಾಜು ಮಾತನಾಡಿದರು. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್‌, ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಮುಖ್ಯ ಕಾರ್ಯನಿರ್ಹವಣಾಧಿಕಾರಿ ಡಾ.ಕೆ.ನಂದಿನಿದೇವಿ ಇದ್ದಾರೆ.   

ಚಿತ್ರದುರ್ಗ: ಮುಂದಿನ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ 251 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂಬುದನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ. ₹ 16 ಕೋಟಿ ವೆಚ್ಚದ ಕ್ರಿಯಾಯೋಜನೆ ಬಗ್ಗೆ ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್‌ ಸಮಿತಿಯಲ್ಲಿ ಚರ್ಚಿಸಿ, ಸರ್ಕಾರದ ಅನುಮೋದನೆ ಪಡೆಯಲು ಸಜ್ಜಾಗಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಕಾರ್ಯಪಾಲಕ ಎಂಜಿನಿಯರ್‌ ಸಭೆಗೆ ವಿವರಗಳನ್ನು ನೀಡಿದರು. ಬೇಸಿಗೆ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾದ ರೀತಿಯನ್ನು ಸಭೆಯ ಮುಂದಿಟ್ಟರು.

‘ಬೇಸಿಗೆ ಆರಂಭವಾಗಿದ್ದು ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ನಿತ್ಯ ದೂರುಗಳು ಬರುತ್ತಿವೆ. ಆದಷ್ಟು ಬೇಗ ಜನರಿಗೆ ಸ್ಪಂದಿಸುವ ಅಗತ್ಯವಿದೆ. ಕೊಳವೆ ಬಾವಿ ಕೊರೆಸುವುದು ಸೇರಿ ಇತರ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಸೂಚನೆ ನೀಡಿದರು.

ADVERTISEMENT

ಏಜೆನ್ಸಿ ರದ್ಧತಿಗೆ ಸೂಚನೆ:ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ವಹಿಸುವಲ್ಲಿ ವಿಫಲವಾದ ಏಜೆನ್ಸಿಗಳ ಗುತ್ತಿಗೆಯನ್ನು ರದ್ದುಪಡಿಸಿ ಎಂದು ಶಶಿಕಲಾ ತಾಕೀತು ಮಾಡಿದರು.

‘ನಿರ್ವಹಣೆಯ ಗುತ್ತಿಗೆ ಪಡೆದ ಏಜೆನ್ಸಿಗೆ ನೀರಿನ ಹಣ ಸಂದಾಯವಾಗುತ್ತಿದೆ. ದುರಸ್ತಿಗೆ ಮಾಸಿಕ ₹ 3 ಸಾವಿರ ನೀಡಲಾಗುತ್ತಿದೆ. ಆದರೂ, ಹಲವು ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕುಡಿಯಲು ನೀರು ಕೊಡದೇ ಇದ್ದರೆ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೊಣೆಗಾರಿಕೆ ಅರಿತು ಕೆಲಸ ಮಾಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯಲ್ಲಿರುವ 1,052 ಘಟಕಗಳಲ್ಲಿ 991 ಘಟಕ ಕಾರ್ಯನಿರ್ವಹಿಸುತ್ತಿವೆ. 20 ಲೀಟರ್‌ ನೀರಿಗೆ ₹ 5 ನಿಗದಿ ಮಾಡಲಾಗಿದೆ. ₹ 5 ಬದಲು ಸ್ಮಾರ್ಟ್‌ ಕಾರ್ಡ್‌ ವಿತರಣೆ ಮಾಡುತ್ತಿರುವ ಇಲಾಖೆಯ ಕ್ರಮಕ್ಕೆ ಅಧ್ಯಕ್ಷರು ವಿರೋಧ ವ್ಯಕ್ತಪಡಿಸಿದರು.

‘ಕೂಲಿ ಕಾರ್ಮಿಕ ಕುಟುಂಬ ಸ್ಮಾರ್ಟ್‌ ಕಾರ್ಡ್‌ ಹೊಂದುವುದು ಕಷ್ಟ. ಮೊದಲೇ ಹಣ ಕೊಟ್ಟು ರಿಚಾರ್ಜ್‌ ಮಾಡಿಸಿಕೊಳ್ಳಲು ಆಗದು. ₹ 5 ಕಾಯಿನ್‌ ವ್ಯವಸ್ಥೆಯೇ ಇರಲಿ. ಇದರಲ್ಲಿ ಯಾವುದೇ ಬದಲಾವಣೆ ಮಾಡುವುದು ಬೇಡ’ ಎಂದರು.

ಪ್ರಯೋಗಾಲ ಸೇರಿದ ಔಷಧ:ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ರೋಗನಿರೋಧ ಶಕ್ತಿ ಹೆಚ್ಚಿಸಬಲ್ಲ ಔಷಧ ಖರೀದಿಸಿದ ಆಯುರ್ವೇದ ಇಲಾಖೆ, ಬಳಕೆಗೆ ಪ್ರಯೋಗಾಲಯದ ಅನುಮತಿಗೆ ಒಂದೂವರೆ ತಿಂಗಳಿಂದ ಕಾಯುತ್ತಿರುವ ಸಂಗತಿ ಸಭೆಯಲ್ಲಿ ಬೆಳಕಿಗೆ ಬಂದಿತು.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಔಷಧ ಹಾಗೂ ಮಾತ್ರಗಳನ್ನು ಖರೀದಿಸಲು ಜಿಲ್ಲಾ ಪಂಚಾಯಿತಿ ₹ 32 ಲಕ್ಷ ಅನುದಾನ ನೀಡಿದೆ. ಆಯುರ್ವೇದ ಇಲಾಖೆ ಔಷಧ ಖರೀದಿಸಿದೆ. ಆದರೆ, ಇದನ್ನು ಸಾರ್ವಜನಿಕರಿಗೆ ವಿತರಿಸುವುದಕ್ಕೂ ಮೊದಲು ಪ್ರಯೋಗಾಲಯದ ಅನುಮತಿ ಪಡೆಯುವುದು ಕಡ್ಡಾಯ.

‘ಔಷಧಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಒಂದೂವರೆ ತಿಂಗಳು ಕಳೆದಿದೆ. ರಾಜ್ಯಕ್ಕೆ ಒಂದೇ ಪ್ರಯೋಗಾಲಯ ಇರುವುದರಿಂದ ಕಾರ್ಯದ ಒತ್ತಡ ಹೆಚ್ಚಾಗಿದೆ. ಹೀಗಾಗಿ, ಅನುಮತಿ ಸಿಗುತ್ತಿಲ್ಲ’ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ವಿಶ್ವನಾಥ್ ತಿಳಿಸಿದರು.

ಉಪಾಧ್ಯಕ್ಷೆ ವಿಜಯಲಕ್ಷ್ಮಿ ಪ್ರಕಾಶ್‌ ಇದ್ದರು.

***

ಆರ್‌ಒ ಘಟಕಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಹಸ್ತಾಂತರಿಸುವಾಗ ದುರಸ್ತಿಗೆ ಸೂಚಿಸಲಾಗಿತ್ತು. ಪಿಡಿಒಗಳ ನೆರವು ಪಡೆದು ಎಲ್ಲ ಘಟಕ ಸರಿಪಡಿಸಲಾಗುವುದು.

ಡಾ.ಕೆ.ನಂದಿನಿದೇವಿ, ಸಿಇಒ, ಜಿಲ್ಲಾ ಪಂಚಾಯಿತಿ

***

ಸೀಬಾರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಬಿಂದಿಗೆ ನೀರು ಬಳಕೆ ಆಗಿಲ್ಲ. ಆದರೆ, ದುರಸ್ತಿಯ ಲೆಕ್ಕ ಬರೆಯಲಾಗಿದೆ. ಖಾಸಗಿ ಘಟಕಗಳಂತೆ ಸರ್ಕಾರಿ ಘಟಕ ಕಾರ್ಯನಿರ್ವಹಿಸಬೇಕು.

ಆರ್‌.ನರಸಿಂಹರಾಜು, ಅಧ್ಯಕ್ಷ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.